Thursday, January 15, 2026

ಸತ್ಯ | ನ್ಯಾಯ |ಧರ್ಮ

ನವಾಜ್ ಷರೀಫ್ ಸಹೋದರ ಶೆಹಬಾಜ್ ಪಾಕಿಸ್ತಾನದ ನೂತನ ಪ್ರಧಾನಿ: ಅಧಿಕೃತ ಘೋಷಣೆಯಷ್ಟೇ ಬಾಕಿ

ಇಸ್ಲಾಮಾಬಾದ್: ಮುಸ್ಲಿಂ ಲೀಗ್- ನವಾಜ್ ಪಕ್ಷದ ಮುಖಂಡ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಇವರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರರು. ಪಕ್ಷದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.


ಇತ್ತೀಚೆಗೆ ನಡೆದ ರಾಷ್ಟ್ರೀಯ ಸಂಸತ್ತಿನ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಷರೀಫ್ ಸಹೋದರರ ನೇತೃತ್ವದ ಮೈತ್ರಿಕೂಟವು ಸರಳ ಬಹುಮತ ಪಡೆಯುವಲ್ಲಿ ಯಶಸ್ಸು ಕಂಡಿದ್ದು, ಈ ಮೈತ್ರಿ ಕೂಟವೇ ಅಧಿಕಾರದ ಗದ್ದುಗೆ ಏರಲಿದೆ. ಮಂಗಳವಾರ ರಾತ್ರಿಯ ಅಚ್ಚರಿ ಬೆಳವಣಿಗೆಯಲ್ಲಿ ಮೂರು ಬಾರಿಯ ಪ್ರಧಾನಿ ನವಾಜ್ ಷರೀಫ್ ಅವರನ್ನು ಬಿಟ್ಟು ಅವರ ಸಹೋದರ ಶೆಹಬಾಜ್ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಪಿಎಂಎಲ್‌–ಎನ್ ಪಕ್ಷವು ಆಯ್ಕೆ ಮಾಡಿದೆ.


ಪಿಎಂಎಲ್‌–ಕ್ಯೂ (ಪಾಕಿಸ್ತಾನದ ಮುಸ್ಲಿಂ ಲೀಗ್–ಕ್ವೈಡ್) ಪಕ್ಷದ ಶುಜಾತ್ ಹುಸೇನ್ ನಿವಾಸದಲ್ಲಿ ಶೆಹಬಾಜ್, ಪಾಕಿಸ್ತಾನ ಪೀಪಲ್ಸ್ ಪಕ್ಷದ ಆಸಿಫ್ ಅಲಿ ಜರ್ದಾರಿ ಹಾಗೂ ಎಂಕ್ಯೂಎಂ ಪಕ್ಷದ ಖಾಲಿದ್ ಮಕ್ಬೂಲ್ ಸಿದ್ಧಿಕಿ ಮತ್ತಿತರ ಮುಖಂಡರು ಸಭೆ ಸೇರಿ ಮೈತ್ರಿ ಸರ್ಕಾರ ರಚನೆಯ ತೀರ್ಮಾನಕ್ಕೆ ಬಂದಿದ್ದಾರೆ.


‘ಅತಂತ್ರ ಫಲಿತಾಂಶನ್ನು ನಾವು ಒಪ್ಪಿಕೊಂಡಿದ್ದೇವೆ ಎಂಬುದನ್ನು ದೇಶಕ್ಕೆ ತಿಳಿಸಲು ನಾವು ಒಟ್ಟಾಗಿದ್ದೇವೆ. ಪಿಎಂಎಲ್‌–ಎನ್ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧರಿಸಿದ ಜರ್ದಾರಿ ಮತ್ತು ಬಿಲಾವಲ್‌ಗೆ ನನ್ನ ಧನ್ಯವಾದ’ ಎಂದು ಶೆಹಬಾಜ್ ಹೇಳಿದ್ದಾರೆ.


ನವಾಜ್ ಷರೀಫ್ ಅವರೇ ತಮ್ಮ ಕಿರಿಯ ಸಹೋದರ ಶೆಹಬಾಜ್ ಷರೀಫ್ ಹೆಸರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಅವರೇ ಸೂಚಿಸಿದರು ಎಂದು ಪಕ್ಷದ ಮಾಹಿತಿ ಕಾರ್ಯದರ್ಶಿ ಮರಿಯುಂ ಔರಂಗಜೇಬ್ ಹೇಳಿದ್ದಾರೆ. ಇದರ ಜೊತೆಗೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ಉಪಾಧ್ಯಕ್ಷರಾದ ಮಾರ್ಯಮ್ ನವಾಜ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page