ಉಡುಪಿ: ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ನಕ್ಸಲ್ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ಹುಟ್ಟೂರಾದ ಹೆಬ್ರಿ ತಾಲ್ಲೂಕಿನ ಕೂಡ್ಲುವಿನಲ್ಲಿ ಬುಧವಾರ ನೆರವೇರಿಸಿದರು.
ಕೂಡ್ಲುವಿನಲ್ಲಿ ವಿಕ್ರಂಗೆ ಸೇರಿದ್ದ ಜಾಗದಲ್ಲಿ ನಡೆದ ಅಂತ್ಯಸಂಸ್ಕಾರ ಸಮಯದಲ್ಲಿ ಸಮೀಪದ ಬಂಧುಗಳು, ಪೊಲೀಸರು, ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯ ಪೀತಬೈಲ್‌ನಲ್ಲಿ ಸೋಮವಾರ ರಾತ್ರಿ ನಕ್ಸಲರು ಮತ್ತು ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ (46) ಹತ್ಯೆಯಾಗಿದ್ದ.
ಹೆಬ್ರಿ ತಾಲ್ಲೂಕಿನ ಸೋಮೇಶ್ವರ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ ವಿಕ್ರಂ ಗೌಡ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಮತ್ತು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.
ಸೋಮವಾರ ರಾತ್ರಿ ಸುಮಾರು ಆರು ಮಂದಿ ನಕ್ಸಲರ ತಂಡ ಪೀತಬೈಲ್‌ನ ಮನೆಯೊಂದರ ಸಮೀಪ ಬಂದಿತ್ತು. ಈ ವೇಳೆ ಅವರು ಹಾಗೂ ಎಎನ್ಎಫ್ ತಂಡ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಮೃತಪಟ್ಟಿದ್ದು, ಉಳಿದವರು ಪರಾರಿಯಾದರು ಎಂದು ಪೊಲೀಸರು ಹೇಳಿಕೆ ನೀಡಿದ್ದರು.