Thursday, November 21, 2024

ಸತ್ಯ | ನ್ಯಾಯ |ಧರ್ಮ

ನಕ್ಸಲ್ ಮಾರ್ಗ ಜೀವವಿರೋಧಿ, ಆದರೆ ಸಿದ್ಧಾಂತ ಜೀವಪರ

“..ಒಂತಂತೂ ಸತ್ಯ. ನಕ್ಸಲ್ ಚಳುವಳಿಯ ಹೋರಾಟ ತಮ್ಮ ಸ್ವಾರ್ಥ ಸಾಧನೆಗೆ ಖಂಡಿತವಲ್ಲ. ತನ್ನವರ ಅಸ್ತಿತ್ವಕ್ಕೆ ಚ್ಯುತಿ ಬಂದಾಗ ಪ್ರಾಣ ಪಣಕ್ಕಿಟ್ಟವರು ಇವರು. ಇವರ ಎದುರು ಶಸ್ತ್ರ ಜಳಪಿಸಿ ಇವರನ್ನು ಕೊಲ್ಲುವ ಬದಲು ಇವರ ನೈಜ ಬೇಡಿಕೆಯನ್ನು ಈಡೇರಿಸಿದರೇ ನಕ್ಸಲೈಟ್ ತನ್ನಷ್ಟಕ್ಕೆ ತಾನೇ ನಿರ್ಮೂಲನೆ ಆಗಬಲ್ಲದು…” ಮಲೆನಾಡಿನ ಚಿಂತಕರಾದ ಅಬ್ಬಾಸ್ ಕಿಗ್ಗ ಅವರ ಬರಹದಲ್ಲಿ

ಮಲೆನಾಡಿನಲ್ಲಿ ಮನೆಯ ಅಕ್ಕಪಕ್ಕದ ಮರಗಳಿಂದ ಉದುರಿದ ಎಲೆಗಳನ್ನು ಗುಡಿಸಿ ಒಟ್ಟು ಮಾಡಿ ಬೆಂಕಿ ಹಚ್ಚುವುದು ಸಾಮಾನ್ಯ ಪ್ರಕ್ರಿಯೆ. ಅಂದು ಕೂಡ ನಮ್ಮ ಮನೆಯಿಂದ ಎರಡು ಕಿಲೋಮೀಟರ್ ದೂರದ ವೆಂಕಟೇಶಣ್ಣ ಅವರ ಅಂಗಡಿಯ ಮುಂದೆ ಕೂಡ ಬೆಂಕಿ ಉರಿಯುತ್ತಿತ್ತು. ಬೆಂಕಿ ಉರಿಯುವುದನ್ನು ನೋಡಿದವರು ಕೂಡ ಕಸಕ್ಕೆ ಬೆಂಕಿ ಹಚ್ಚಿರಬಹುದು ಎಂಬ ಯೋಚಿಸಿ ಮುಂದೆ ಸಾಗಿದ್ದರು. ಆದರೇ ಸ್ವಲ್ಪ ಹೊತ್ತಿನಲ್ಲೆ ಘಟನೆಯ ವಾಸ್ತವಾಂಸ ಊರಿಡಿ ಹಬ್ಬಿತು. ನಾನು ಕೂಡ ಅರ್ಧಗಂಟೆಯಲ್ಲಿ ಅಲ್ಲಿಗೆ ಹೋಗಿದ್ದೆ. ಅಂಗಡಿ ಮನೆ ಎರಡು ಒಟ್ಟಿಗೆ ಇದ್ದ ಕಟ್ಟಡದ ಹೊಸ್ತಿಲಲ್ಲೆ ವೆಂಕಟೇಶ ಅವರ ದೇಹ ಮುಖ ಅಡಿಯಾಗಿ ಬಿದ್ದಿತ್ತು. ಮಚ್ಚಿನ ಬಲವಾದ ಏಟು ಬೆನ್ನನ್ನು ಸೀಳಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಪಕ್ಕದಲ್ಲೇ ಅವರ ಬೈಕ್ ಇನ್ನೂ ಉರಿಯುತ್ತಿತ್ತು.!

ನಕ್ಸಲರು ಪೋಲಿಸ್ ಮಾಹಿತಿದಾರ ಎಂಬ ಶಂಕೆಯಿಂದ ವೆಂಕಟೇಶ ಅವರನ್ನು ಅವರ ಹೆಂಡತಿ ಮಗುವಿನ ಎದುರೇ ಕೊಂದು ಹಾಕಿ‌ ಕ್ರೂರತೆ ಮೆರೆದಿದ್ದರು ನಕ್ಸಲೈಟ್ ಗಳು. ಗಂಡ ಸತ್ತ ನೆನಪಿನಲ್ಲೆ ಮಾನಸಿಕವಾಗಿ ಜರ್ಜರಿತವಾದ ಅವರ ಹೆಂಡತಿ ಕೂಡ ಗಂಡನ ಸಾವಿನ ಕೊರಗಲ್ಲೆ ಜೀವ ಬಿಟ್ಟರು.ಪ್ರೀತಿಸಿ ಮದುವೆಯಾದ ಸುಂದರ ಜೋಡಿಯೊಂದರ ಕಥೆ ಹೀಗೆ ಅಂತ್ಯವಾಯಿತು. ಅನಾಥವಾದ ಮಗುವಿಗೆ ಅಜ್ಜಿ ಆಸರೆಯಾದರು.

ಇಂದು ವಿಕ್ರಂ ಗೌಡನ ಹತ್ಯೆಯಾದಾಗ ಕಣ್ಣಿರು ಇಡುವ ನಾವು ಖಂಡಿತ ಇದನ್ನು ನೆನಪಿಸಿಕೊಳ್ಳಲೆ ಬೇಕು. ಆಗ ಮಾತ್ರ ವಿವೇಚನೆಯಿಂದ ಇದಕ್ಕೆಲ್ಲ ತಾರ್ಕಿಕ ಅಂತ್ಯ ಕಾಣಿಸಲು ಸಾಧ್ಯ.

ಇಂದು ಪ್ರತಿಯೊಂದು ಘಟನೆಯನ್ನು ರಾಜಕೀಯ ಮತ್ತು ಸೈಧಾಂತಿಕ ಹಿನ್ನಲೆಯಲ್ಲೆ ವಿಶ್ಲೇಷಣೆ ಮಾಡಲಾಗುತ್ತದೆ. ಎಡಪಂಥ ಅನಿಸಿಕೊಂಡವರಿಗೆ ನಶಿಸಿ ಹೋದ ವೆಂಕಟೇಶ ಅವರ ಕುಟುಂಬ ಕಾಣಲು ಸಾಧ್ಯವಿಲ್ಲ. ಇನ್ನೂ ಬಲಪಂಥೀಯರಿಗೆ ವಿಕ್ರಂ ಗೌಡ ನಕ್ಸಲನಾಗಲು ಕಾರಣ ಕಾಣಲು ಸಾಧ್ಯವಿಲ್ಲ.

ನಕ್ಸಲೈಟ್ ಅವರ ಅನುಸರಿಸುವ ಮಾರ್ಗ ಜೀವ ವಿರೋಧಿ ಅದನ್ನು ಯಾವುದೇ ಕಾರಣಕ್ಕೂ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಆದರೆ ಸಿದ್ದಾಂತ ಜೀವಪರ ಅನ್ನುವ ಬಗ್ಗೆ ಅನುಮಾನವಿಲ್ಲ‌. ಈ ದೇಶದ ಆದಿವಾಸಿಗಳು, ದಲಿತರು ದಮನಿತರು, ಶೋಷಣೆಗೆ ಒಳಗಾಗುವುದು ಹೆಚ್ಚಿನ ಸಂಧರ್ಭದಲ್ಲಿ ಬಲಿಷ್ಟರಿಂದ ಮತ್ತು ಸರಕಾರಗಳಿಂದ. ಪಶ್ಚಿಮ ಘಟ್ಟದಲ್ಲೂ ಕೂಡ ಬದುಕಿ ಬಾಳ ಬಯಸಿದ ನೆಲದ ಬುಡವೇ ಸರಕಾರದ ನೀತಿಗಳಿಂದ ಅಲುಗಾಡಲು ಶುರುವಾದಾಗ ಅಲ್ಲಿಯ ಆದಿವಾಸಿಗಳಿಗೆ ಆಸರೆಯಾಗಿ ಕಂಡಿದ್ದು ನಕ್ಸಲೈಟ್ ಸಿದ್ದಾಂತ.. ಆದರೆ ಆಯ್ದುಕೊಂಡ ದಾರಿಯಿಂದ ಏನಾದರೂ ಪರಿಹಾರ ಸಿಕ್ಕಿತಾ ಅಂದು ಕೊಂಡರೇ ಹಲವಾರು ಬಾಳಿ ಬದುಕಬೇಕಾದ ಜೀವಗಳು ಮರೆಯಾಗಿವೆ. ಇಲ್ಲಿ ಸತ್ತ ಪೋಲಿಸರು ದುಡಿಮೆಗಾಗಿ ವೃತ್ತಿಯನ್ನು ಅಯ್ದುಕೊಂಡ ಸರಕಾರಿ ಕಾರ್ಮಿಕ ವರ್ಗ ಅಷ್ಟೇ. ಆದರೇ ಸಾದಿಸಿದ್ದು ಶೂನ್ಯ.

ಬದಲಾದ ಸಮಾಜದಲ್ಲಿ ಇಂತಹ ಶಸ್ತ್ರಾಸ್ತ್ರ ಹೋರಾಟಗಳಿಗೆ ಸಂವಿಧಾನ ಬಲ್ಲ ಜನರ ಬೆಂಬಲ ಬೆರಳೆಣಿಕೆ. ಶಸ್ತ್ರಾಸ್ತ್ರ ಕೆಳಗಿಟ್ಟು ಸಮಾಜದಲ್ಲಿ ಇದ್ದು ಪ್ರಜಾಸತ್ತಾತ್ಮಕ ಹೋರಾಟ ಮಾಡುವುದು ಬದಲಾದ ಸನ್ನಿವೇಶದಲ್ಲಿ ಮಾಜಿ ನಕ್ಸಲೈಟ್ ಹೋರಾಟಗಾರರು ಕಂಡು ಕೊಂಡ ಸತ್ಯ. ಅದಕ್ಕೆ ಪೂರಕವಾಗಿ ಸರ್ಕಾರಗಳು ವೇದಿಕೆ ಸಿದ್ದಪಡಿಸಿದ್ದವು. ಆದರೆ ಕೊರ್ಟ್ ಕಚೇರಿ ಅಲೆಯುವುದು ಇವರಿಗೆ ತಪ್ಪಲಿಲ್ಲ. ಸರಕಾರವನ್ನು ನಂಬಿ ಶಸ್ತ್ರಾಸ್ತ್ರ ಕೆಳಗಿಟ್ಟವರು ಇನ್ನೂ ಕೆಲವರು ಜೈಲಿನಲ್ಲೆ ಕೊಳೆಯುತ್ತಿದ್ದು ಇನ್ನೂ ಹೊರ ಬರಲು ಇಚ್ಚಿಸಿದವರಿಗೆ ಇದು ತಡೆಯಾಗಿರಬಹುದು.

ಆದರೆ ಒಂತಂತೂ ಸತ್ಯ. ನಕ್ಸಲ್ ಚಳುವಳಿಯ ಹೋರಾಟ ತಮ್ಮ ಸ್ವಾರ್ಥ ಸಾಧನೆಗೆ ಖಂಡಿತವಲ್ಲ. ತನ್ನವರ ಅಸ್ತಿತ್ವಕ್ಕೆ ಚ್ಯುತಿ ಬಂದಾಗ ಪ್ರಾಣ ಪಣಕ್ಕಿಟ್ಟವರು ಇವರು. ಇವರ ಎದುರು ಶಸ್ತ್ರ ಜಳಪಿಸಿ ಇವರನ್ನು ಕೊಲ್ಲುವ ಬದಲು ಇವರ ನೈಜ ಬೇಡಿಕೆಯನ್ನು ಈಡೇರಿಸಿದರೇ ನಕ್ಸಲೈಟ್ ತನ್ನಷ್ಟಕ್ಕೆ ತಾನೇ ನಿರ್ಮೂಲನೆ ಆಗಬಲ್ಲದು. ಇದು ಸಾವು ನೋವಿಲ್ಲದ ಸುಲಭ ದಾರಿ. ಆದರೇ ಆಳುವವರಿಗೆ ಇಂತಹ ಮಾತೃ ಹೃದಯ ಇರಬೇಕಷ್ಟೆ.

ವಿಕ್ರಂ ಗೌಡ ಇರಬಹುದು, ವೆಂಕಟೇಶ ಇರಬಹುದು ಅಥವಾ ಕಾದಾಟದಲ್ಲಿ ಮಡಿದ ಪೋಲಿಸರು ಇರಬಹುದು ಇವರೆಲ್ಲರೂ ಕೂಡ ನಮ್ಮವರೇ. ಸರ್ಕಾರಗಳು ಮನಸ್ಸು ಮಾಡಿದ್ದರೆ ಆದಿವಾಸಿಗಳ ಪಶ್ಚಿಮ ಘಟ್ಟಗಳ ಸಮಸ್ಯೆಯನ್ನು ಪರಿಹರಿಸಬಹುದಿತ್ತು. ಆಗ ವಿಕ್ರಂ ಗೌಡನಂತಹ ನಕ್ಸಲ್ ಚಳುವಳಿ ನಾಯಕರ ಜೀವ ಉಳಿಯುತ್ತಿತ್ತು. ಸರ್ಕಾರದ ಪರ ಅನಿಸಿಕೊಳ್ಳಲು ಹೊರಟ ವೆಂಕಟೇಶನಂತವರ ಜೀವ ಉಳಿಯುತ್ತಿತ್ತು ಜೊತೆಗೆ ದುಡಿಮೆಗೆ ಬಂದು ಅನಿವಾರ್ಯವಾಗಿ ಜೀವ ಕಳೆದು ಕೊಂಡ ಪೋಲಿಸರದ್ದು ಕೂಡ!.

Related Articles

ಇತ್ತೀಚಿನ ಸುದ್ದಿಗಳು

You cannot copy content of this page