Home ದೇಶ ಕನ್ನಡ ಪಠ್ಯದಲ್ಲಿ ಸಸ್ಯಾಹಾರ ಪ್ರಚಾರದ ಆರೋಪ ತಳ್ಳಿಹಾಕಿದ ಎನ್‌ಸಿಇಆರ್‌ಟಿ: ಕೃಷ್ಣ ಎನ್ನುವುದು ಧಾರ್ಮಿಕ ಹೆಸರಲ್ಲ ಎಂದ...

ಕನ್ನಡ ಪಠ್ಯದಲ್ಲಿ ಸಸ್ಯಾಹಾರ ಪ್ರಚಾರದ ಆರೋಪ ತಳ್ಳಿಹಾಕಿದ ಎನ್‌ಸಿಇಆರ್‌ಟಿ: ಕೃಷ್ಣ ಎನ್ನುವುದು ಧಾರ್ಮಿಕ ಹೆಸರಲ್ಲ ಎಂದ ಮಂಡಳಿ

0

ನವದೆಹಲಿ: ಆರನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸಸ್ಯಾಹಾರವನ್ನು ಉತ್ತೇಜಿಸಲಾಗುತ್ತಿದೆ ಮತ್ತು ಧಾರ್ಮಿಕ ವಿಷಯಗಳನ್ನು ಬಿಂಬಿಸಲಾಗುತ್ತಿದೆ ಎಂಬ ಆರೋಪಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಗುರುವಾರ ಬಲವಾಗಿ ತಳ್ಳಿಹಾಕಿದ್ದು, ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದೆ.

ಆರನೇ ತರಗತಿಯ ‘ಕೃಷ್ಣ’ ಹೆಸರಿನ ಕನ್ನಡ ಪಠ್ಯಪುಸ್ತಕದ ಶೀರ್ಷಿಕೆ ಮತ್ತು ಅದರಲ್ಲಿನ ಆಹಾರ ಕ್ರಮಕ್ಕೆ ಸಂಬಂಧಿಸಿದ ಅಧ್ಯಾಯದ ಕುರಿತು ಕರ್ನಾಟಕ ಮೂಲದ ಶಿಕ್ಷಣ ಹಕ್ಕುಗಳ ಸಂಘಟನೆಯೊಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ವಿವಾದ ಸೃಷ್ಟಿಯಾಗಿತ್ತು.

‘ಪೀಪಲ್ಸ್ ಅಲೈಯನ್ಸ್ ಫಾರ್ ಫಂಡಮೆಂಟಲ್ ರೈಟ್ಸ್ ಟು ಎಜುಕೇಶನ್’ ಎಂಬ ಸಂಘಟನೆಯು, ಈ ಪಠ್ಯಪುಸ್ತಕವು ಧಾರ್ಮಿಕ ವಿಷಯಗಳನ್ನು ಪ್ರಚಾರ ಮಾಡುತ್ತಿದೆ ಮತ್ತು ಕರ್ನಾಟಕದ ಸಾಂಸ್ಕೃತಿಕ ಹಾಗೂ ಆಹಾರದ ವೈವಿಧ್ಯತೆಯನ್ನು ಸರಿಯಾಗಿ ಬಿಂಬಿಸುತ್ತಿಲ್ಲ ಎಂದು ಆರೋಪಿಸಿತ್ತು. ಅಲ್ಲದೆ, ಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿರುವುದನ್ನು ಪ್ರಶ್ನಿಸಿದ್ದ ಸಂಘಟನೆಯು, ಈ ಪುಸ್ತಕವನ್ನು ತಕ್ಷಣವೇ ಹಿಂಪಡೆದು, ಮರುನಾಮಕರಣ ಮಾಡಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಿತ್ತು.

ಪಠ್ಯಪುಸ್ತಕದಲ್ಲಿ ಕೇವಲ ಸಸ್ಯಾಹಾರವನ್ನು ಮಾತ್ರ ಸಮತೋಲಿತ ಆಹಾರವೆಂದು ಬಿಂಬಿಸಲಾಗಿದ್ದು, ಕರ್ನಾಟಕದಲ್ಲಿ ವ್ಯಾಪಕವಾಗಿ ಸೇವಿಸುವ ಮೀನು, ಮೊಟ್ಟೆ ಮತ್ತು ಮಾಂಸದಂತಹ ಆಹಾರ ಪದಾರ್ಥಗಳನ್ನು ನಿರ್ಲಕ್ಷಿಸಲಾಗಿದೆ ಎಂಬುದು ಸಂಘಟನೆಯ ಪ್ರಮುಖ ಆಕ್ಷೇಪವಾಗಿತ್ತು.

ಈ ಎಲ್ಲಾ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿರುವ ಎನ್‌ಸಿಇಆರ್‌ಟಿ, ಪಠ್ಯಪುಸ್ತಕಕ್ಕೆ ಇಡಲಾಗಿರುವ ‘ಕೃಷ್ಣ’ ಎಂಬ ಹೆಸರು ಯಾವುದೇ ಧಾರ್ಮಿಕ ಸಂಕೇತವಲ್ಲ, ಬದಲಿಗೆ ಅದು ಕರ್ನಾಟಕದ ಪ್ರಮುಖ ನದಿಗಳಲ್ಲೊಂದಾದ ಕೃಷ್ಣಾ ನದಿಯ ಹೆಸರಾಗಿದೆ ಎಂದು ಸ್ಪಷ್ಟಪಡಿಸಿದೆ. ಭಾರತದ ಪ್ರಮುಖ ನದಿಗಳ ಹೆಸರನ್ನೇ ಭಾಷಾ ಪಠ್ಯಪುಸ್ತಕಗಳಿಗೆ ಇಡುವ ವಿಶೇಷ ನಿಯಮವನ್ನು ಮಂಡಳಿ ಅಳವಡಿಸಿಕೊಂಡಿದೆ.

ಅದರಂತೆ ಹಿಂದಿ ಪಠ್ಯಪುಸ್ತಕಕ್ಕೆ ‘ಗಂಗಾ’, ಇಂಗ್ಲಿಷ್ ಪಠ್ಯಪುಸ್ತಕಕ್ಕೆ ‘ಕಾವೇರಿ’ ಮತ್ತು ಉರ್ದು ಪಠ್ಯಪುಸ್ತಕಕ್ಕೆ ‘ಯಮುನಾ’ ಎಂದು ಹೆಸರಿಸಲಾಗಿದ್ದು, ಅದೇ ಮಾದರಿಯಲ್ಲಿ ಕನ್ನಡ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಡಲಾಗಿದೆ ಎಂದು ಸಂಸ್ಥೆ ವಿವರಿಸಿದೆ. ಈ ವಿಧಾನವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (NCF-SE) 2023 ರ ತತ್ವಗಳಿಗೆ ಅನುಗುಣವಾಗಿದೆ ಎಂದು ಮಂಡಳಿ ಹೇಳಿದೆ.

ಇನ್ನು ಆಹಾರ ಕ್ರಮದ ಕುರಿತಾದ ಅಧ್ಯಾಯದ ಬಗ್ಗೆ ಸ್ಪಷ್ಟನೆ ನೀಡಿರುವ ಎನ್‌ಸಿಇಆರ್‌ಟಿ, ಪಠ್ಯಪುಸ್ತಕದ 6ನೇ ಅಧ್ಯಾಯವಾದ ‘ಆರೋಗ್ಯವೇ ಭಾಗ್ಯ’ ಎಂಬಲ್ಲಿ ಸಮತೋಲಿತ ಆಹಾರದ ಬಗ್ಗೆ ವಿವರಣೆಯಿದೆ. ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ, ವ್ಯಾಯಾಮ ಮತ್ತು ಸ್ವಚ್ಛತೆ ಅತ್ಯಗತ್ಯ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಪುಸ್ತಕದ ಪುಟ ಸಂಖ್ಯೆ 63 ರಲ್ಲಿ ‘ಸಮತೋಲಿತ ಆಹಾರ’ ಎಂಬ ಪ್ರತ್ಯೇಕ ವಿಭಾಗವಿದ್ದು, ದೇಹಕ್ಕೆ ಅಗತ್ಯವಿರುವ ಹಾಲು, ಹಸಿರು ಎಲೆಗಳ ತರಕಾರಿಗಳು, ತರಕಾರಿಗಳು ಮತ್ತು ಹಣ್ಣುಗಳಂತಹ ಆಹಾರ ಪದಾರ್ಥಗಳು ದೈನಂದಿನ ಆಹಾರದ ಭಾಗವಾಗಿರಬೇಕು ಎಂದು ವಿವರಿಸಲಾಗಿದೆ.

ಅಲ್ಲದೆ, ಅದೇ ಪುಟದಲ್ಲಿ ನೀಡಲಾಗಿರುವ ಚಿತ್ರದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ರೀತಿಯ ಆಹಾರ ಪದಾರ್ಥಗಳನ್ನು ಒಳಗೂಡಿಸಲಾಗಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಭಾರತದ ಆಹಾರ ವೈವಿಧ್ಯತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ವಿವಿಧ ರಾಜ್ಯಗಳ ಸಾಂಪ್ರದಾಯಿಕ ಆರೋಗ್ಯಕರ ಆಹಾರದ ಉದಾಹರಣೆಗಳನ್ನು ಅಲ್ಲಿ ನೀಡಲಾಗಿದೆ. “ಪಠ್ಯಪುಸ್ತಕದ ಯಾವುದೇ ಭಾಗದಲ್ಲೂ ಸಸ್ಯಾಹಾರವನ್ನು ಮಾತ್ರವೇ ಸಮರ್ಥಿಸಿಲ್ಲ ಅಥವಾ ಮಾಂಸಾಹಾರವನ್ನು ವಿರೋಧಿಸಿಲ್ಲ,” ಎಂದು ಎನ್‌ಸಿಇಆರ್‌ಟಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಈ ಅಧ್ಯಾಯದ ಮೂಲ ಉದ್ದೇಶ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವುದೇ ಹೊರತು, ಯಾವುದೇ ನಿರ್ದಿಷ್ಟ ಆಹಾರದ ಅಭ್ಯಾಸವನ್ನು ಕಡ್ಡಾಯಗೊಳಿಸುವುದಾಗಲಿ ಅಥವಾ ತಿರಸ್ಕರಿಸುವುದಾಗಲಿ ಅಲ್ಲ ಎಂದು ಮಂಡಳಿ ತಿಳಿಸಿದೆ.

You cannot copy content of this page

Exit mobile version