ಹೊಸದಿಲ್ಲಿ: ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದ ಹೊಸ ಆವೃತ್ತಿಯಲ್ಲಿ ಎನ್ ಸಿಇಆರ್ ಟಿ ಹಲವು ಬದಲಾವಣೆಗಳನ್ನು ಮಾಡಿದೆ.
ಈ ಬದಲಾವಣೆಗಳಲ್ಲಿ ಪ್ರಮುಖವಾದದ್ದು ‘ಬಾಬರಿ ಮಸೀದಿ’ ಎಂಬ ಪದವನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದು ಮತ್ತು ಅದನ್ನು ‘ಮೂರು-ಗುಮ್ಮಟಗಳ ರಚನೆ’ ಎಂದು ಕರೆದಿರುವುದು. ಅಲ್ಲದೆ, ರಾಮನ ರಥಯಾತ್ರೆ, ರಾಮಜನ್ಮಭೂಮಿ ಚಳವಳಿಯಲ್ಲಿ ಕರಸೇವಕರ ಪಾತ್ರ, ಬಾಬರಿ ಮಸೀದಿ ಧ್ವಂಸದ ನಂತರ ನಡೆದ ಹಿಂಸಾಚಾರ, ಒತ್ತುವರಿ ಮುಂತಾದ ವಿಷಯಗಳಿರುವ ಅಯೋಧ್ಯೆ ಅಧ್ಯಾಯದ ಪಾಠವನ್ನು ನಾಲ್ಕು ಪುಟಗಳಿಂದ ಎರಡು ಪುಟಗಳಿಗೆ ಇಳಿಸಲಾಗಿದೆ.
ಗಲಭೆಗಳ ಬಗ್ಗೆ ಏಕೆ ಕಲಿಸಬೇಕು?
ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಮಾತನಾಡಿ, ದ್ವೇಷ ಮತ್ತು ಹಿಂಸೆ ಶಿಕ್ಷಣದ ವಿಷಯವಾಗಬಾರದು ಮತ್ತು ವಿದ್ಯಾರ್ಥಿಗಳು ಅವುಗಳ ಮೇಲೆ ಗಮನ ಕೇಂದ್ರೀಕರಿಸಬಾರದು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವ ವಿಷಯಗಳಿಗೆ ಕೇಸರಿ ಬಣ್ಣ ಬಳಿಯಲಾಗುತ್ತಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು. ನಾವು ವಿದ್ಯಾರ್ಥಿಗಳನ್ನು ಸಕಾರಾತ್ಮಕ ಚಿಂತನೆಗಳನ್ನು ಹೊಂದಿರುವ ನಾಗರಿಕರನ್ನಾಗಿ ಮಾಡಲು ಬಯಸುತ್ತೇವೆಯೇ ಹೊರತು ಹಿಂಸಾತ್ಮಕ ಪ್ರವೃತ್ತಿಯ ಜನರನ್ನಾಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.