Home ದೇಶ ರೈತರಿಗೆ ಮರಣಶಾಸನ, ಮಹಿಳೆಯರಿಗೆ ನರಕಯಾತನೆ: ಎನ್‌ಸಿಆರ್‌ಬಿ ವರದಿಯಲ್ಲಿ ಬಯಲಾಯ್ತು ಮೋದಿ ಆಡಳಿತದ ಕರಾಳ ಮುಖ!

ರೈತರಿಗೆ ಮರಣಶಾಸನ, ಮಹಿಳೆಯರಿಗೆ ನರಕಯಾತನೆ: ಎನ್‌ಸಿಆರ್‌ಬಿ ವರದಿಯಲ್ಲಿ ಬಯಲಾಯ್ತು ಮೋದಿ ಆಡಳಿತದ ಕರಾಳ ಮುಖ!

0

ಕೇಂದ್ರದ ಮೋದಿ ಸರ್ಕಾರ ‘ಅಚ್ಚೇ ದಿನ್’ ಭರವಸೆ ನೀಡಿದ್ದರೂ, ದೇಶದ ವಾಸ್ತವ ಸ್ಥಿತಿ ಮಾತ್ರ ಅತ್ಯಂತ ಭೀಕರವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB-2024) ಬಿಡುಗಡೆ ಮಾಡಿರುವ ಅಂಕಿಅಂಶಗಳು ಸಾರುತ್ತಿವೆ. ದೇಶದಲ್ಲಿ ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ಅನಾಚಾರ ಮತ್ತು ನಿರುದ್ಯೋಗದ ಸಮಸ್ಯೆಗಳು ತಾಂಡವವಾಡುತ್ತಿದ್ದು, ಜನಸಾಮಾನ್ಯರ ಬದುಕು ನರಕವಾಗಿದೆ.

ವರದಿಯ ಪ್ರಕಾರ, ದೇಶದಲ್ಲಿ ಕೃಷಿ ಬಿಕ್ಕಟ್ಟು ಮಿತಿಮೀರಿದ್ದು, ಪ್ರತಿದಿನ ಸರಾಸರಿ 29 ರೈತರು ಬದುಕಿಗೆ ವಿದಾಯ ಹೇಳುತ್ತಿದ್ದಾರೆ. ಅಂದರೆ ಪ್ರತಿ ಗಂಟೆಗೊಬ್ಬ ಅನ್ನದಾತ ಸಾಲಬಾಧೆ ಹಾಗೂ ಬೆಳೆ ನಷ್ಟ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಬಿಜೆಪಿ ಆಡಳಿತದ ಮಹಾರಾಷ್ಟ್ರ (3,824 ಸಾವು) ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಆಡಳಿತದ ಕರ್ನಾಟಕ (2,971 ಸಾವು) ಎರಡನೇ ಸ್ಥಾನದಲ್ಲಿದೆ.

ಮಹಿಳೆಯರ ಸುರಕ್ಷತೆಯ ವಿಷಯದಲ್ಲೂ ಭಾರತ ಹಿಂದುಳಿದಿದ್ದು, 2024ರಲ್ಲಿ ಒಟ್ಟು 4.41 ಲಕ್ಷ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಇದರಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳು ಮೊದಲ ಮೂರು ಸ್ಥಾನಗಳಲ್ಲಿರುವುದು ಆತಂಕಕಾರಿ. ಇನ್ನು ಮಕ್ಕಳ ಮೇಲಿನ ಅಪರಾಧಗಳು ಶೇ. 5.9 ರಷ್ಟು ಏರಿಕೆಯಾಗಿದ್ದು, ಒಟ್ಟು 1.87 ಲಕ್ಷ ಕಂದಮ್ಮಗಳು ದೌರ್ಜನ್ಯಕ್ಕೆ ಒಳಗಾಗಿರುವುದು ದೇಶದ ನೈತಿಕ ಸ್ಥಿತಿಯನ್ನು ಪ್ರಶ್ನಿಸುವಂತಿದೆ.

ದೇಶದ ರಸ್ತೆಗಳು ಕೂಡ ನೆತ್ತರು ಹರಿಸುತ್ತಿದ್ದು, ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ ಬರೋಬ್ಬರಿ 1.99 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಶೇ. 58 ರಷ್ಟು ಸಾವುಗಳಿಗೆ ವಾಹನಗಳ ಅತಿಯಾದ ವೇಗವೇ ಕಾರಣವಾಗಿದೆ. ಉತ್ತರ ಪ್ರದೇಶ ಮತ್ತು ತಮಿಳುನಾಡು ರಸ್ತೆ ಅಪಘಾತಗಳ ಸಾವಿನಲ್ಲಿ ಮುಂಚೂಣಿಯಲ್ಲಿವೆ. ಇನ್ನು ಸೈಬರ್ ಕ್ರೈಂ ಪ್ರಕರಣಗಳಲ್ಲಿ ಬೆಂಗಳೂರು ದೇಶಕ್ಕೇ ಮೊದಲ ಸ್ಥಾನದಲ್ಲಿದೆ.

ಕೇವಲ ಅಪರಾಧಗಳಷ್ಟೇ ಅಲ್ಲದೆ, ಆರ್ಥಿಕ ಸಂಕಷ್ಟ ಮತ್ತು ಉದ್ಯೋಗದ ಕೊರತೆಯಿಂದಾಗಿ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ 1,70,746ಕ್ಕೆ ಏರಿದೆ. ಕೆಲಸ ಸಿಗದ ಕಾರಣ 14,778 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ದೇಶದ ಯುವಶಕ್ತಿಯ ಹತಾಶೆಯನ್ನು ಎತ್ತಿ ತೋರಿಸುತ್ತಿದೆ. ಈ ಅಂಕಿಅಂಶಗಳು ಸರ್ಕಾರದ ಅಭಿವೃದ್ಧಿ ಘೋಷಣೆಗಳ ನಡುವೆಯೇ ಸಾಮಾನ್ಯ ಜನರ ಬದುಕು ಎಷ್ಟು ಅಸುರಕ್ಷಿತವಾಗಿದೆ ಎಂಬುದನ್ನು ಸಾಕ್ಷೀಕರಿಸುತ್ತಿವೆ.

You cannot copy content of this page

Exit mobile version