ನೀಟ್ ಪರೀಕ್ಷೆ ನಂದನ್ ನಿಲೇಕಣಿ ಸಮಿತಿಯಿಂದ ಸುಪ್ರೀಂ ಕೋರ್ಟ್‌ಗೆ – ಅಂತಿಮ ವರದಿ

ನವದೆಹಲಿ : ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನೀಟ್ (NEET) ಪರೀಕ್ಷಾ ಪ್ರಕ್ರಿಯೆಯಲ್ಲಿ ಸಮಗ್ರ ಸುಧಾರಣೆ ತರುವ ಉದ್ದೇಶದಿಂದ ರಚಿಸಲಾಗಿದ್ದ ಕನ್ನಡಿಗ ನಂದನ್ ನಿಲೇಕಣಿ(Nandan Nilekani) ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ತಿಂಗಳ ಕೊನೆಯಲ್ಲಿ ತನ್ನ ಮೊದಲ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.ಸಾಲುಸಾಲು ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಜುಲೈ 26ರಂದು ಈ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ನೀಟ್ ಅಕ್ರಮಗಳ ಕುರಿತ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಮಾಹಿತಿ ನೀಡಿದರು. ನಿಲೇಕಣಿ ಸಮಿತಿಯು ಇಸ್ರೋದ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದ ಹಿಂದಿನ ಸಮಿತಿಯ ಸದಸ್ಯರೊಂದಿಗೂ ಈಗಾಗಲೇ ಸಮಾಲೋಚನೆ ನಡೆಸಿದೆ ಎಂದು ಅವರು ತಿಳಿಸಿದರು.

ಪರೀಕ್ಷಾ ವ್ಯವಸ್ಥೆ ಸಂಪೂರ್ಣ ಸಂಸ್ಥೀಕರಣಗೊಳ್ಳಲಿ: ಸುಪ್ರೀಂ ಕೋರ್ಟ್

ಕೇಂದ್ರದ ಮಾಹಿತಿಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಪರೀಕ್ಷಾ ವ್ಯವಸ್ಥೆಯಲ್ಲಿ ಶಾಶ್ವತ ಸಿಬ್ಬಂದಿ ಹಾಗೂ ಪ್ರತ್ಯೇಕ ವಿಭಾಗಗಳು ಇರಬೇಕು ಎಂದು ಪ್ರತಿಪಾದಿಸಿತು. ನಿಯೋಜಿತ ಸಿಬ್ಬಂದಿಯ ಬಳಕೆಯನ್ನು ಕಡಿಮೆ ಮಾಡಿ, ಪರೀಕ್ಷೆ ನಡೆಸುವ ಸಂಪೂರ್ಣ ಪ್ರಕ್ರಿಯೆಯನ್ನು ಸಂಸ್ಥೀಕರಣಗೊಳಿಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿತು. ಅಲ್ಲದೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ನವೀಕರಿಸಲಾದ ಘಟಕಕ್ಕೆ ಭೇಟಿ ನೀಡಿ ಹೊಸ ವ್ಯವಸ್ಥೆಯನ್ನು ಪರಿಶೀಲಿಸುವುದಾಗಿ ಪೀಠದಲ್ಲಿದ್ದ ನ್ಯಾಯಮೂರ್ತಿಗಳು ತಿಳಿಸಿದರು.

ಯುಜಿಸಿ ನೆಟ್ 3 ವಿಷಯಗಳ ಮರು ಪರೀಕ್ಷೆ ಫಲಿತಾಂಶ ಪ್ರಕಟ

ಮತ್ತೊಂದೆಡೆ, ಜೂನ್‌ನಲ್ಲಿ ನಡೆದಿದ್ದ ಯುಜಿಸಿ ನೆಟ್ (UGC NET) ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಸರಣಿ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 9ರಂದು ನಡೆಸಲಾಗಿದ್ದ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಮರು ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ.ಪ್ರಶ್ನೆ ಪತ್ರಿಕೆ ದೋಷಗಳ ಕುರಿತು ವ್ಯಾಪಕ ದೂರುಗಳು ಬಂದಿದ್ದರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಈ ಮೂರೂ ವಿಷಯಗಳಿಗೆ ಮರುಪರೀಕ್ಷೆ ನಡೆಸಿತ್ತು. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶ ಮತ್ತು ಅಂಕಪಟ್ಟಿಗಳನ್ನು ಎನ್‌ಟಿಎ ಅಧಿಕೃತ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ‘ಎಕ್ಸ್’ ಖಾತೆಯಲ್ಲಿ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು