Monday, June 24, 2024

ಸತ್ಯ | ನ್ಯಾಯ |ಧರ್ಮ

ನೆಹರೂ ಭಾವಚಿತ್ರದ ವಿವಾದದ ನಂತರ ಸರ್ಕಾರದಿಂದ ಸಾಲು ಸಾಲು ಯಡವಟ್ಟು!

ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರ ಕೈಬಿಟ್ಟ ನಂತರ ರಾಜ್ಯ ಬಿಜೆಪಿ ಸರ್ಕಾರ ಮತ್ತೊಂದು ಪ್ರಮಾದ ಮಾಡಿ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ RSS ನ್ನು ಮೆಚ್ಚಿಸುವ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳಲೆಂದೇ ಇಂತಹ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಕನ್ನಡದ ಸಿನಿಮಾ ನಟರಿಂದ ಚಿತ್ರೀಕರಣ ನಡೆಸಿ ಸ್ವಾತಂತ್ರ್ಯ ದಿನಕ್ಕೆ ಈ ಹಾಡನ್ನು ಅರ್ಪಿಸಲಾಗಿದೆ ಎಂಬ ತಲೆಬರಹ ಕೊಡಲಾಗಿದೆ. ಆದರೆ ಇದು ‘ವಂದೇ ಮಾತರಂ’ ಗೀತೆಯಾಗಿದ್ದು, ಕನ್ನಡದ ನಟರನ್ನು ಬಳಸಿಕೊಂಡಿದ್ದು ಕನ್ನಡದ್ದೇ ಎಷ್ಟೋ ದೇಶಭಕ್ತಿಗೀತೆಗಳು ಇರುವಾಗ ಮತ್ತೊಮ್ಮೆ ವಂದೇಮಾತರಂ ಬಳಸುವ ಅವಶ್ಯಕತೆ ಏನಿತ್ತು ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ಹಾಗೇ ಇಲ್ಲಿ ಸಾಧಕರು ಎಂಬ ತಲೆಬರಹ ಕೊಟ್ಟು ಕೇವಲ ಸಿನಿಮಾ ನಟರನ್ನು ಮಾತ್ರ ಇಡೀ ಚಿತ್ರೀಕರಣದಲ್ಲಿ ಬಳಸಿಕೊಳ್ಳಲಾಗಿದೆ. ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್, ಮಂಜಮ್ಮ ಜೋಗತಿ, ಸಾಲುಮರದ ತಿಮ್ಮಕ್ಕ ಮತ್ತು ಲೇಖಕ ಭೈರಪ್ಪ ಹೊರತುಪಡಿಸಿ ಪ್ರತಿಯೊಬ್ಬರೂ ಚಿತ್ರನಟರೇ. ಅಲ್ಲೂ ಸಹ ಒಬ್ಬೇ ಒಬ್ಬ ಹೆಣ್ಣು ಮಕ್ಕಳೂ ಚಿತ್ರೀಕರಣದ ದೃಶ್ಯದಲ್ಲಿ ಕಾಣಸಿಗುವುದಿಲ್ಲ. ಹಾಗಾದರೆ ಕರ್ನಾಟಕದ ಮಟ್ಟಿಗೆ ಸಾಧನೆ ಮಾಡಬೇಕು ಎಂದರೆ ಸಿನಿಮಾ ನಟರೇ ಆಗಿರಬೇಕು, ಅದರಲ್ಲೂ ಗಂಡಸರೇ ಆಗಬೇಕೇ? ಎಂದು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಚಿತ್ರನಟರಾದ ದರ್ಶನ್ ಮತ್ತು ಯಶ್ ಅವರನ್ನು ಈ ಹಾಡಿನ ಚಿತ್ರೀಕರಣದ ಒಳಗೆ ಸೇರಿಸದೇ ಇರುವುದು ಮತ್ತೊಂದಷ್ಟು ಅನುಮಾನಕ್ಕೆ ಕಾರಣವಾಗಿದೆ.

ಚಿತ್ರೀಕರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಬಳಸಿದ ದೃಶ್ಯವೊಂದರಲ್ಲಿ ಮರಾಠಿ ಸಾಮ್ರಾಜ್ಯಶಾಹಿ ಶಿವಾಜಿ ಫೋಟೊ ಕೂಡಾ ಹಾಕಲಾಗಿದೆ. ಶಿವಾಜಿ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂಬುದು ಇಲ್ಲಿ ಎದ್ದಿರುವ ಮತ್ತೊಂದು ಪ್ರಶ್ನೆ.

ಇನ್ನು ತ್ರಿವರ್ಣ ಧ್ವಜದ ಬಗ್ಗೆ ರಾಷ್ಟ್ರವ್ಯಾಪಿ ದೊಡ್ಡ ಅಭಿಯಾನವನ್ನೇ ಮಾಡಿದ ಬಿಜೆಪಿ ಪಕ್ಷ ದೃಶ್ಯವೊಂದರಲ್ಲಿ ಬರುವ ಭಾರತ ಮಾತೆಯ ಕೈಯಲ್ಲಿ ತ್ರಿವರ್ಣ ಧ್ವಜದ ಬದಲು ಭಗವಾಧ್ವಜ ಕೊಟ್ಟಿದೆ. ಇದೂ ಸಹ ಬಿಜೆಪಿ ಪಕ್ಷದ ನಕಲಿ ರಾಷ್ಟ್ರಭಕ್ತಿ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ಇಂತಹ ಸಾಲುಸಾಲು ಯಡವಟ್ಟುಗಳನ್ನು ಬೊಮ್ಮಾಯಿ ನೇತೃತ್ವದ ಸರ್ಕಾರ ಉದ್ದೇಶಪೂರ್ವಕವಾಗಿಯೇ ಮಾಡುತ್ತಿದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕುರ್ಚಿ ತಪ್ಪಿಹೋಗುವ ಭಯದಿಂದ RSS ಮೆಚ್ಚಿಸಲು ಇಂತಹ ಪ್ರಮಾದ ಮಾಡುತ್ತಿದೆ ಎಂಬ ಟೀಕೆ ವ್ಯಾಪಕವಾಗಿ ಸಾರ್ವಜನಿಕವಾಗಿ ಮತ್ತು ಜಾಲತಾಣಗಳ ಮೂಲಕ ಕೇಳಿ ಬರುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು