Wednesday, June 19, 2024

ಸತ್ಯ | ನ್ಯಾಯ |ಧರ್ಮ

ನೆಹರೂ ಎಂಬ ಎತ್ತರದ ಮನುಷ್ಯ

ಇಂದು ಭಾರತವು ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ 134 ನೇ ಜನ್ಮದಿನವನ್ನು ಆಚರಿಸುತ್ತಿದೆ. ನೆಹರೂ ಆಧುನಿಕ ಭಾರತಕ್ಕೆ ಮತ್ತು ಚೈತನ್ಯ ಶೀಲ ಪ್ರಜಾತಂತ್ರಕ್ಕೆ ಬಲವಾದ ಅಡಿಪಾಯ ಹಾಕಿದರು. ಅದನ್ನು ಕಳಚಿ ಹಾಕುವ ಯಾವ ಯತ್ನವೂ, ಎಂದಿಗೂ ಯಶಸ್ವಿಯಾಗದು. ಇಂತಹ ಮಹೋನ್ನತ ನಾಯಕನನ್ನು ನೆನಪಿಸಿ ಕೊಳ್ಳುವುದರಿಂದ ಮತ್ತು ಆತನ ಕೆಲಸಗಳನ್ನು ಮೆಲುಕು ಹಾಕುವುದರಿಂದ ನಮ್ಮ ತಿಳಿವಳಿಕೆ ಹೆಚ್ಚೀತು, ಮಾತ್ರವಲ್ಲ ಆಶಾವಾದದ ಒಂದು ಬೆಳಕಿನ ಕಿರಣವೂ ದಕ್ಕೀತು- ಶ್ರೀನಿವಾಸ ಕಾರ್ಕಳ

2004 ರಿಂದ 2014 ರ ವರೆಗೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಡಾ. ಮನಮೋಹನ್ ಸಿಂಗ್ ಮೃದುಭಾಷಿ ಮತ್ತು ಮಿತಭಾಷಿ. ಅಹಂಕಾರ, ಸ್ವಮೋಹ, ಸರ್ವಾಧಿಕಾರ, ಆಡಂಬರದ ನಡೆವಳಿಕೆ ಮೊದಲಾದ ದುರ್ಗುಣಗಳನ್ನು ಎಂದೂ ಬಳಿ ಸುಳಿಯಲು ಬಿಡದ ಅವರು, ‘ದೇಶದ ಚುಕ್ಕಾಣಿಯನ್ನು ಹಿಡಿದ ನಾಯಕನೊಬ್ಬ ಹೇಗಿರಬೇಕು’ ಎಂಬುದಕ್ಕೆ ಮಾದರಿಯಂತೆ ಕೆಲಸ ಮಾಡಿದರು.

ಡಾ. ಸಿಂಗ್ ಮಾತನಾಡುತ್ತಿದ್ದುದು ಕಡಿಮೆ. ಆದರೆ ಆಡಿದ ಮಾತುಗಳೆಲ್ಲವೂ ಮುತ್ತಿನಂತಿರುತ್ತಿದ್ದವು. ಅಪಾರ ಅನುಭವ ಮತ್ತು ಆಳ ಜ್ಞಾನದಿಂದ ಬಂದ ಅವರ ಮಾತುಗಳು ಸದಾ ತೂಕದಿಂದ ಕೂಡಿರುತ್ತಿದ್ದವು.

ದೇಶದ ಆರ್ಥಿಕ ಸ್ಥಿತಿಯನ್ನು ಅಲ್ಲೋಲಕಲ್ಲೋಲಗೊಳಿಸಿದ ನೋಟು ನಿಷೇಧ ಸಂದರ್ಭದಲ್ಲಿ, ಲೋಕಸಭೆಯಲ್ಲಿ ಮಾತನಾಡಲು ಅವರು ಎದ್ದುನಿಂತಾಗ, ಅವರು ಏನು ಹೇಳುತ್ತಾರೆ ಎಂದು ಕೇಳಲು ಇಡೀ ಸದನ ಕಾತರದಿಂದ ಕಾಯುತ್ತಿತ್ತು. ‘ನೋಟು ನಿಷೇಧ ದೇಶದ ಆರ್ಥಿಕತೆಗೆ ಮಾರಕ ಹೊಡೆತ ನೀಡಲಿದೆ, ಎರಡು ಪ್ರತಿಶತದಷ್ಟು ಜಿಡಿಪಿ ಬೆಳವಣಿಗೆ ದರ ಕುಸಿಯಲಿದೆ, ನೋಟು ನಿಷೇಧ ಎನ್ನುವುದು organized loot and legalized plunder’ ಎಂದು ಹೇಳಿದ್ದು ಮಾತ್ರವಲ್ಲ, ‘ಮಾತು ಮಾತಿಗೆ in the long run ನಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ’ ಎಂದು ಹೇಳಲಾಗುತ್ತದೆ, ಆದರೆ in the long run all are dead (ದೀರ್ಘಾವಧಿಯಲ್ಲಿ ಎಲ್ಲರೂ ಸತ್ತಿರುತ್ತಾರೆ)’ ಎಂದಿದ್ದರು ಕೂಡಾ.

ಮೋದಿ ಪ್ರಧಾನಿಯಾಗುವುದಾದರೆ ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ, It will be a disaster, if Modi becomes Prime Minister (ಮೋದಿ ಪ್ರಧಾನಿಯಾದರೆ ಅದೊಂದು ವಿಪತ್ತು ಎನಿಸಿಕೊಳ್ಳಲಿದೆ) ಎಂದು ಡಾ. ಸಿಂಗ್ ಹೇಳಿದ್ದರು. ಅವರು ಆಡಿದ ಭವಿಷ್ಯ ನುಡಿಯ ಒಂದೊಂದು ಪದವೂ ನಿಜವೆಂದು ರುಜುವಾತಾಯಿತು.

ತನ್ನ ಅಧಿಕಾರಾವಧಿಯ ಕೊನೆಗಾಲದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸ ಬೇಕಾಯಿತು. ಮಾಧ‍್ಯಮಗಳು, ವಿರೋಧಿಗಳು, ಸಿಎಜಿಯಂತಹ ಸರಕಾರಿ ಸಂಸ್ಥೆಗಳು ಎಲ್ಲರೂ ಅವರ ಮೇಲೆ ಮುಗಿಬಿದ್ದವು. ಅವರನ್ನು ಗೇಲಿ ಮಾಡಲಾಯಿತು, ಆಧಾರವೇ ಇಲ್ಲದೆ ಅವರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿ ಕಟಕಟೆಯಲ್ಲಿ ನಿಲ್ಲಿಸಲಾಯಿತು. ಇಂತಹ ಸಂದರ್ಭದಲ್ಲಿ ನಡೆದ ಒಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ನೋವಿನಿಂದ ಉತ್ತರಿಸಿದ ಅವರು, ತನ್ನ ನಡೆಗಳನ್ನು ಸಮರ್ಥಿಸಿಕೊಳ್ಳುತ್ತಾ, History will be kinder to me than the contemporary media or the opposition parties in parliament (ಸಮಕಾಲೀನ ಮೀಡಿಯಾ ಮತ್ತು ಸಂಸತ್ತಿನ ವಿಪಕ್ಷಗಳಿಗಿಂತಲೂ ಇತಿಹಾಸವು ನನ್ನ ಬಗ್ಗೆ ದಯೆಯಿಂದ ವರ್ತಿಸುತ್ತದೆ; ಅರ್ಥಾತ್ ಇತಿಹಾಸ ನನ್ನ ಕೊಡುಗೆ ಸ್ಮರಿಸುತ್ತದೆ) ಅಂದಿದ್ದರು.

ಈಗ ಅನೇಕರಿಗೆ ಮೋದಿಯವರಿಗಿಂತ ಮನಮೋಹನ್ ಸಿಂಗ್ ಸಾವಿರ ಪಾಲು ಉತ್ತಮ ಅನಿಸುತ್ತಿದ್ದು, ಡಾ ಸಿಂಗ್ ಅವರ ಭವಿಷ್ಯವಾಣಿ ಕೇವಲ ಹತ್ತು ವರ್ಷಗಳಲ್ಲಿ ನಿಜವಾಯಿತು.

ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಎದುರಿಸಿದ ಸವಾಲುಗಳು

History will be kinder to me ಎಂದು ಡಾ ಸಿಂಗ್ ಹೇಳಿದರಲ್ಲ, ಅದು ಜಗತ್ತಿನ ಅನೇಕ ರಾಜಕೀಯ ನಾಯಕರಿಗೆ ಅನ್ವಯಿಸುತ್ತದೆ. ಬದುಕಿದ್ದಾಗ ಅವರ ಬೆಲೆ ತಿಳಿಯುವುದಿಲ್ಲ. ಆದರೆ ಅವರ ಕೆಲಸವನ್ನು ಮುಂದೆ ಇತಿಹಾಸ ಸ್ಮರಿಸುತ್ತದೆ. ಈ ಮಾತು ಅತ್ಯಂತ ಹೆಚ್ಚು ಅನ್ವಯವಾಗುವುದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ.

ಜನವರಿ 30, 1948 ರಂದು ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಗುಂಡು ಹೊಡೆದು ಸಾಯಿಸಿದಾಗ ನೆಹರೂ ಅವರು ತನ್ನ ಬಹುದೊಡ್ಡ ಗುರು ಮತ್ತು ಮಾರ್ಗದರ್ಶಕನನ್ನು ಕಳೆದುಕೊಂಡರು. ಆಗಿನ ಅತ್ಯುನ್ನತ ಮತ್ತು ಮಹಾನ್ ನಾಯಕ ಎಂಬ ನೆಲೆಯಲ್ಲಿ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡ ಪಂಡಿತ್ ನೆಹರೂ ಅವರು, ತಮ್ಮ ವರ್ಚಸ್ಸಿನ ಕಾರಣ ಜನರ ಮೇಲೆ ಒಂದು ಮಾಂತ್ರಿಕ ಹಿಡಿತ ಹೊಂದಿದ್ದರು. ಅವರು ದೇಶದಲ್ಲಿ ಮಾತ್ರವಲ್ಲ ದೇಶದಾಚೆಗೂ ಪ್ರಭಾವಿಯಾಗಿದ್ದರು.

ಮಹಾತ್ಮಾ ಗಾಂಧಿಯ ಆನಂತರ ದೇಶದ ಸರಿಸಾಟಿಯಿಲ್ಲದ ನಾಯಕನಾಗಿ ನೆಹರೂ ಹೊರಹೊಮ್ಮಿದಾಗ ದೇಶದ ಸಂವಿಧಾನ ಇನ್ನೂ ರಚನೆಯಾಗಿರಲಿಲ್ಲ. ದೇಶದ ಖಜಾನೆ ಖಾಲಿಯಿತ್ತು. ಒಂದು ಕಾಲದ ಬಹು ಶ್ರೀಮಂತ ಪರಂಪರೆಯನ್ನು ಹೊಂದಿದ್ದ ದೇಶವನ್ನು ಕ್ಷಾಮದಿಂದ ಬಳಲುತ್ತಿರುವ ಕಡು ಬಡ ರಾಷ್ಟ್ರವನ್ನಾಗಿ ಮಾಡಿಹೋಗಿದ್ದರು ಬ್ರಿಟಿಷರು. ದೇಶ ಬಡತನ, ಅನಕ್ಷರತೆ, ಆರೋಗ್ಯ ಪಾಲನಾ ವ್ಯವಸ್ಥೆಗಳ ಕೊರತೆ, ನಿರುದ್ಯೋಗ ಹೀಗೆ ನಾನಾ ರೀತಿಯ ಸಮಸ್ಯೆಗಳಿಂದ ದೇಶ ಬಳಲುತ್ತಿತ್ತು.

ಅನೇಕ ತುಂಡರಸರು ಮತ್ತು ದೊಡ್ಡ ಭೂಮಾಲೀಕರಿಂದ ದೇಶವು ಛಿದ್ರವಾಗಿ ಹೋಗಿತ್ತು. ತಮ್ಮ ಒಡೆದು ಆಳುವ ನೀತಿಯ ಭಾಗವಾಗಿ ಬ್ರಿಟಿಷರು ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷದ ಕಿಚ್ಚು ಹಚ್ಚಿಹೋಗಿದ್ದರು. ಆ ಕಿಚ್ಚು ಧಗಧಗಿಸುತ್ತಿತ್ತು. ಇಂತಹ ದೇಶವನ್ನು ಬಲಿಷ್ಠವಾಗಿ ಕಟ್ಟಿ ನಿಲ್ಲಿಸುವುದು ಬಹುದೊಡ್ಡ ಸವಾಲಾಗಿತ್ತು.

ಗಾಂಧಿ ಇಲ್ಲದ ಕಾರಣ ಈ ಕಳವಳಗಳಿಗೆ ನಿರ್ಣಾಯಕ ಉತ್ತರ ಕೊಡುವವರಿರಲಿಲ್ಲ. ನೆಹರೂ ಅವರ ಸಂಗಡಿಗರು ಬುದ್ಧಿವಂತರಾಗಿದ್ದರೂ, ಅವರು ನೆಹರೂ ಅವರಷ್ಟು ಪ್ರಭಾವ ಹೊಂದಿರಲಿಲ್ಲ. ಹಾಗಾಗಿ ನೆಹರೂ ಅವರು ದೇಶದ ನೇತೃತ್ವ ವಹಿಸುವುದು ಅನಿವಾರ್ಯವಾಯಿತು.

ಪ್ರಜಾತಂತ್ರದಲ್ಲಿ ಅಚಲ ನಂಬಿಕೆ

ನೆಹರೂ ಅವರು ಆಗ ಹೊಸದಾಗಿ ಸ್ವತಂತ್ರಗೊಂಡ ಆಫ್ರಿಕನ್ ದೇಶಗಳಂತೆ, ಹುಸಿ ರಾಷ್ಟ್ರವಾದದ ಆಶಾವಾದ ಮತ್ತು ಅಸೀಮ ಅಧಿಕಾರ ಕೈವಶ ಮಾಡಿಕೊಂಡು ಸರ್ವಾಧಿಕಾರದ ಹಾದಿಯಲ್ಲಿ ಸಾಗಬಹುದಿತ್ತು. ಆದರೆ ಅವರು ಆ ಹಾದಿ ಹಿಡಿಯಲಿಲ್ಲ. ಪ್ರಜಾತಂತ್ರದ ಹಾದಿ ಹಿಡಿದರು. ಪ್ರಬಲ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಕಟ್ಟಿ ನಿಲ್ಲಿಸಿದರು.

1952 ರಲ್ಲಿಯಂತೂ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ನಡೆದು ನೆಹರೂ ಕೈ ಇನ್ನೂ ಗಟ್ಟಿಯಾಯಿತು. ಅವರು ಇಲ್ಲಿ ಬಹುಪಕ್ಷೀಯ ಪ್ರಜಾತಂತ್ರ ಇರದಂತೆ ಮಾಡಬಹುದಿತ್ತು. ಸದಾಕಾಲವೂ ಒಂದೇ ಪಕ್ಷವು ಅಧಿಕಾರದಲ್ಲಿರಬಹುದಾಗಿತ್ತು.

ಆದರೆ, ಅವರು ಹಾಗೆ ಮಾಡಲಿಲ್ಲ. ಅವರಿಗೆ ಪ್ರಜಾತಂತ್ರದ ಬಗ್ಗೆ ಅಪಾರ ಒಲವು ಇತ್ತು. ಸರ್ವರಿಗೂ ಮೂಲಭೂತ ಹಕ್ಕು ನೀಡುವುದು, ಸೆಕ್ಯುಲರಿಸಂ, ಸಾಮಾಜಿಕ ಅಸಮಾನತೆ ಮತ್ತು ವಿಭಜನೆ ನಿವಾರಿಸುವ ಒಂದು ಪ್ರಭುತ್ವ ಕಾರ್ಯ ನೀತಿ, ಸಾರ್ವತ್ರಿಕ ವಯಸ್ಕ ಮತದಾನ ಅಧಿಕಾರ, ಮತ್ತು ಹಿಂದೂ ಕೋಡ್ ಬಿಲ್ ಈ ಎಲ್ಲವುಗಳೆಡೆಗೆ ಜವಾಹರಲಾಲ್ ನೆಹರೂ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ನಿಷ್ಠೆಯಿಂದ ದುಡಿದರು.

ನೆಹರೂ ಅವರ ಆರ್ಥಿಕ ಆಲೋಚನೆಗಳ ಮೇಲೆ ಮಾರ್ಕ್ಸ್ ವಾದದ ಪ್ರಭಾವ ಇದ್ದರೂ, ಅವರು ಮಾರ್ಕ್ಸ್  ವಾದವನ್ನು ಸಂಪೂರ್ಣ ಆವಾಹಿಸಿಕೊಳ್ಳಲಿಲ್ಲ. ಅವರ ಮೇಲೆ ಗಾಂಧೀಜಿಯ ವ್ಯಕ್ತಿತ್ವದ ಪ್ರಭಾವ ಹೆಚ್ಚೇ ಇತ್ತು.

ಗಾಂಧಿಯದ್ದು ಒಂದು ಸಂಕೀರ್ಣ ವ್ಯಕ್ತಿತ್ವ. ಸಾಮಾಜಿಕ ಸಂಪ್ರದಾಯಬದ್ಧರಾಗಿದ್ದುಕೊಂಡೇ ಅವರು ಹಿಂದೂಧರ್ಮವನ್ನು ಸೆಕ್ಯುಲರ್ ಮಾಡಲು ಯತ್ನಿಸಿದರು. ಆಧುನಿಕರಾಗಿದ್ದೂ ಬದ್ಧ ವೈಷ್ಣವ ಹಿಂದೂ ಆಗಿದ್ದರು. ಅವರ ಧಾರ್ಮಿಕ ಮತ್ತು ಸಾಂಪ್ರದಾಯಿಕ ಮನೋಭಾವ ನೆಹರೂ, ಬೋಸ್ ರಂತಹ ತರುಣ ಮನಸುಗಳಿಗೆ ಹಿನ್ನಡೆಯಾಗಲಿಲ್ಲ. ಗಾಂಧಿಯ ಜೀವನದ ಬಗೆಗಿನ ಪರಿಪೂರ್ಣ ವಿಧಾನವು ಸತ್ಯ, ಪ್ರಾಮಾಣಿತೆ ಮತ್ತು ನೈತಿಕ ಧೈರ್ಯದ ತತ್ತ್ವಗಳನ್ನು ಆಧರಿಸಿತ್ತು. ಅವರ ಸರಳ ಬದುಕು ಮತ್ತು ಆಲೋಚನೆಗಳು ನೆಹರೂ ಮೇಲೆ ಪ್ರಭಾವ ಬೀರಿತ್ತು.

ಶ್ರೀಮಂತ ಹಿನ್ನೆಲೆಯಿಂದ ಬಂದ ನೆಹರೂ ಅವರು ಮಹಾತ್ಮರ ಆದರ್ಶ ನಡೆನುಡಿಯ ಸಮ್ಮೋಹಕ್ಕೆ ಒಳಗಾಗಿದ್ದರು. ಹಾಗಾಗಿಯೇ ಅವರಿಗೆ ಗಾಂಧಿಯ ಸಮರ್ಥ ಶಿಷ್ಯನಾಗಿ ಸಮರ್ಪಣಾ ಭಾವದಿಂದ ದುಡಿಯುವುದು ಸಾಧ್ಯವಾಯಿತು.

ಆಧುನಿಕ ಭಾರತಕ್ಕೆ ಅಡಿಪಾಯ

ಅವರಿಗೆ ವಿಜ್ಞಾನದಲ್ಲಿ ಅಪಾರ ನಂಬಿಕೆ ಇತ್ತು. ವೈಜ್ಞಾನಿಕ ಮತ್ತು ತಂತ್ರಜ್ಞಾನೀಯ ಮನೋಭಾವ ಅವರಲ್ಲಿ ಮೈಗೂಡಿತ್ತು. ವಿಜ್ಞಾನದ ವಿದ್ಯಾರ್ಥಿಯಾಗಿ ನೆಹರೂ ಅವರು ಕೇಂಬ್ರಿಜ್ ವಿವಿಯಲ್ಲಿ ಭೌತಶಾಸ್ತ್ರ, ಕೆಮಿಸ್ಟ್ರಿ ಓದಿದ್ದವರು ಕೂಡಾ.

1927 ರಲ್ಲಿ ಮಾಡಿದ ರಶ‍್ಯಾ ಪ್ರವಾಸ ನೆಹರೂ ಅವರ ವಿಶ‍್ವದೃಷ್ಟಿಯ ಮೇಲೆ ಅಳಿಸಲಾಗದ ಗುರುತು ಮೂಡಿಸಿತು. ಆದರೆ ರಶ್ಯಾದ ಕ್ರಾಂತಿಯ ಲಾಭಗಳ ಜತೆಯಲ್ಲಿಯೇ ಅದರ ಲೋಪಗಳ ಬಗ್ಗೆಯೂ ನೆಹರೂಗೆ ಅರಿವಿತ್ತು.

ನೆಹರೂಗೆ ಭಾರತದ ಪ್ರಾಚೀನ ವೈವಿಧ‍್ಯಮಯ ಮೌಲ್ಯಗಳ ಬಗ್ಗೆ ಸಾಂಸ್ಕೃತಿಕ ಅಂಶಗಳ ಬಗ್ಗೆ ಅಭಿಮಾನ  ಇತ್ತು. ಗಾಂಧಿಯ ಆದರ್ಶಗಳನ್ನು ವಾಸ್ತವಕ್ಕೆ ಇಳಿಸುವ ತುಡಿತವಿತ್ತು. ಹಾಗಾಗಿ ನೆಹರೂ ಅವರು ವೈಜ್ಞಾನಿಕ ಮನೋಭಾವ ಅಪ್ಪಿಕೊಳ್ಳುತ್ತಲೇ ಭಾರತವನ್ನು ಜನಾಂಗೀಯ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಒಳಗೊಂಡ ಸ್ವತಂತ್ರ ಸೆಕ್ಯುಲರ್ ದೇಶವಾಗಿ ರೂಪಿಸುವ ಕನಸು ಕಂಡರು. ಭಾರೀ ಕೈಗಾರಿಕೆಯಿಂದ ಹಿಡಿದು, ಅಣೆಕಟ್ಟುಗಳು, ಅಣುವಿದ್ಯುತ್ ನಿಂದ ಹಿಡಿದು ರಾಕೆಟ್ ವರೆಗೆ ಎಂಜೀನಿಯರಿಂಗ್ ಮಹಾಸಾಧನೆಗೆ ಬಲಿಷ್ಠ ಅಡಿಪಾಯ ಹಾಕುವ ದೂರದೃಷ್ಟಿಯ ದೃಷ್ಟಾರ ಆಗಿದ್ದರು ನೆಹರೂ.

ಒಂದೆಡೆಯಲ್ಲಿ ಭಾರತವು ಸಾಂವಿಧಾನಿಕ ಪ್ರಜಾತಂತ್ರವಾಗಿ ಹೊರಹೊಮ್ಮುವಾಗ ಭಾರತವನ್ನು ವೈಜ್ಞಾನಿಕ ಅವಿಷ್ಕಾರ ಮತ್ತು ತಂತ್ರಜ್ಞಾನೀಯ ಅಭಿವೃದ್ಧಿಯ ಆಧುನಿಕ ಯುಗಕ್ಕೆ ಒಯ್ಯುವ ಬಗ್ಗೆ ನೆಹರೂ ಹೆಚ್ಚು ಆಸಕ್ತಿ ಹೊಂದಿದ್ದರು. ಐಐಟಿಗಳು, ಏಮ್ಸ್ ಗಳು ಮತ್ತು ಇತರ ಪ್ರೀಮಿಯರ್ ಅಧ್ಯಯನ ಸಂಸ್ಥೆಗಳು ಮತ್ತು ಸಂಶೋಧನೆ ಗೆ ಬಲವಾದ ಅಡಿಪಾಯ, ನ್ಯೂಕ್ಲಿಯರ್ ಕಾರ್ಯಕ್ರಮ, ಬಾಕ್ರಾ ನಂಗಲ್ ಅಣೆಕಟ್ಟೆಯ ಯೋಜನೆ ಮತ್ತು ಅದೇ ತೆರನ ನದಿ ಕಣಿವೆ ಅಭಿವೃದ್ಧಿ ಯೋಜನೆಗೆ ನಾಂದಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಬ್ಯಾಂಕಿಂಗ್ ವಲಯ, ಭಾರೀ ಕೈಗಾರಿಕೆಗಳಲ್ಲಿ ಹಣಕಾಸು ಹೂಡಿಕೆಯ ನಾನಾ ಆರ್ಥಿಕ ಪಾಲಿಸಿಗಳು … ಇವೆಲ್ಲ ಮಹಾನ್ ರಾಷ್ಟ್ರವೊಂದನ್ನು ಕಟ್ಟುವೆಡೆಗಿನ ನೆಹರೂ ಅವರ ಮುಂಗಾಣ್ಕೆಗಳಾಗಿದ್ದವು.

ಸೋವಿಯತ್ ನ ಕೈಗಾರಿಕೀಕರಣದಿಂದ ಪ್ರಭಾವಿತರಾದ ನೆಹರೂ ಅವರು ಭಾರತದಲ್ಲಿ ಕೈಗಾರಿಕಾ ನೆಲೆ ನಿರ್ಮಿಸುವಲ್ಲಿ ರಶ್ಯನ್ ನೆರವು ಮತ್ತು ತಾಂತ್ರಿಕ ನೆರವು ಪಡೆದುಕೊಂಡರು. ಭಾರತದ ವಿಜ್ಞಾನಿಗಳನ್ನು ಹುರಿದುಂಬಿಸಿದರು ಮತ್ತು ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಮುಕ್ತ ಅವಕಾಶ ನೀಡಿದರು. ಸಾಹಿತ್ಯ, ಕಲೆ ಮತ್ತು ಸಿನಿಮಾ ಕ್ಷೇತ್ರಗಳಲ್ಲಿಯೂ ಇದೇ ಮನೋಭಾವ ತೋರಿದರು.

Indian statesman Jawaharlal Nehru (1869 – 1964), known as Pandit Nehru, and his wife Kamala on their wedding day, 8th February 1916. (Photo by Keystone/Getty Images)

ಇತಿಹಾಸದಿಂದ ನೆಹರೂವನ್ನು ಅಳಿಸಿಹಾಕುವುದು ಅಸಾಧ್ಯ

ನೆಹರೂ ಅವರ ಹೆಸರಿಗೆ ಮಸಿ ಬಳಿಯುವುದು, ಅವರನ್ನು ಕೆಟ್ಟವರನ್ನಾಗಿ ಬಿಂಬಿಸುವುದು ಇವೆಲ್ಲ ಹಿಂದುತ್ವವಾದಿಗಳ ಅತ್ಯಂತ ಪ್ರಿಯವಾದ ಕೆಲಸವಾಗಿದೆ. ಇದಕ್ಕಾಗಿ ಪಠ್ಯಪುಸ್ತಕಗಳ ಸಹಿತ ಎಲ್ಲೆಡೆಯಿಂದಲೂ ನೆಹರೂ ನೆನಪನ್ನು ಅಳಿಸಿಹಾಕುವುದು,  ನೆಹರೂ ಪ್ರತಿಮೆಯನ್ನು ಆನಂದಭವನದಿಂದ ತೆಗೆಯುವುದು, ಫೇಕ್ ಫೋಟೋ ಶಾಪ್ ಇಮೇಜುಗಳನ್ನು ಹರಡುವುದು, ಅವಮಾನಕಾರಿ ಕಮೆಂಟ್ ಗಳನ್ನು ಹಾಕುವುದು ಇತ್ಯಾದಿ ಚಿಲ್ಲರೆ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ. ಆದರೂ ಸ್ವಾತಂತ್ರ್ಯದ ಏಳು ದಶಕಗಳ ಬಳಿಕವೂ ನೆಹರೂ ಅವರ ಶ್ರೇಷ್ಠತೆ ಮುಕ್ಕಾಗದೆ ಉಳಿದುಕೊಂಡಿದೆ. ಭಾರತದ ರಾಜಕಾರಣಿಗಳನ್ನು ಉಲ್ಲೇಖಿಸುವಾಗಲೆಲ್ಲ ಜಗತ್ತು ನೆಹರೂ ಅವರನ್ನು ತಪ್ಪದೆ ನೆನಪಿಸಿ ಕೊಳ್ಳುತ್ತದೆ. ನೆಹರೂ ಅವರನ್ನು ಪಠ್ಯದಿಂದ, ಬೀದಿಯಿಂದ, ಮ್ಯೂಸಿಯಂ ಗಳಿಂದ ತೆಗೆಯಬಹುದು, ಆದರೆ ಇತಿಹಾಸದಿಂದ ತೆಗೆಯುವುದು ಅಸಾಧ್ಯ.

ನೆಹರೂ ಕಟ್ಟಿದ್ದನ್ನು ಮೋದಿ ಮಾರುತ್ತಿದ್ದಾರೆ

ಕಡುಕಷ್ಟದ ಆರಂಭದ ವರ್ಷಗಳಲ್ಲಿ ನೆಹರೂ ಅವರ ಮಾರ್ಗದರ್ಶನ ಪಡೆದ ಭಾರತ ನಿಜಕ್ಕೂ ಭಾಗ್ಯಶಾಲಿಯಾಗಿದೆ. ಟೊಳ್ಳು ಮಾತುಗಳ ಮೂಲಕವಲ್ಲ, ಏನೂ ಇಲ್ಲದ ಸ್ಥಿತಿಯಿಂದ ಎಲ್ಲವೂ ಇರುವ ಬಲಿಷ್ಠ ಸ್ಥಿತಿಗೆ ದೇಶವನ್ನು ಅವರು ಮುನ್ನಡೆಸಿದರು.

70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿಯವರು, ನೆಹರೂ ಅಂದು ಕಟ್ಟಿದ ಸಾರ್ವಜನಿಕ ರಂಗದ ಸಂಸ್ಥೆಗಳು ಮತ್ತು ಬ್ಯಾಂಕ್ ಗಳನ್ನೇ  ಮಾರುತ್ತಾ, ಖಾಲಿ ಬಿದ್ದ ಖಜಾನೆಯನ್ನು ತುಂಬಿಸುತ್ತಿದ್ದಾರೆ. ರಾಷ್ಟ್ರೀಯ ಸಂಪತ್ತು ಸೃಷ್ಟಿಸುವ ಸಾಮರ್ಥ್ಯ ಕ್ಷಮತೆಯನ್ನಾಗಲೀ, ತಿಳಿವಳಿಕೆಯನ್ನಾಗಲೀ ಹೊಂದಿರದ ಮೋದಿ ಸಾಹೇಬರಿಗೆ ನೆಹರೂ ಅವರನ್ನಾಗಲೀ, ನೆಹರೂ ಅವರ ದೂರದೃಷ್ಟಿಯನ್ನಾಗಲೀ ಅರ್ಥಮಾಡಿಕೊಳ್ಳುವುದು ಸಾಧ್ಯವೇ ಇಲ್ಲ.

ಸತ್ಯ ಏನೆಂದರೆ, ಸಾವಿರ ಸುಳ್ಳುಗಳು ಕೂಡಾ ಪಂಡಿತ್ ನೆಹರೂ ಅವರ ಎತ್ತರದ ವ್ಯಕ್ತಿತ್ವವನ್ನು ಸಣ್ಣದಾಗಿಸದು. ಅವರು ಆಧುನಿಕ ಭಾರತಕ್ಕೆ ಮತ್ತು  ಚೈತನ್ಯಶೀಲ ಪ್ರಜಾತಂತ್ರಕ್ಕೆ  ಬಲವಾದ ಅಡಿಪಾಯ ಹಾಕಿದರು. ಅದನ್ನು ಕಳಚಿಹಾಕುವ ಯಾವ ಯತ್ನವೂ, ಎಂದಿಗೂ ಯಶಸ್ವಿಯಾಗದು. ಇಂತಹ ಮಹೋನ್ನತ ನಾಯಕನನ್ನು ನೆನಪಿಸಿಕೊಳ್ಳುವುದರಿಂದ ಮತ್ತು ಆತನ ಕೆಲಸಗಳನ್ನು ಮೆಲುಕು ಹಾಕುವುದರಿಂದ ನಮ್ಮ ತಿಳಿವಳಿಕೆ ಹೆಚ್ಚೀತು, ಮಾತ್ರವಲ್ಲ ಆಶಾವಾದದ ಒಂದು ಬೆಳಕಿನ ಕಿರಣವೂ ದಕ್ಕೀತು.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ- ಮನೆಯೇ ಮೊದಲ ಪಾಠಶಾಲೆ – ಕಲಿಕೆಯಾದ್ರೂ ಎಂಥದ್ದು?!https://peepalmedia.com/home-is-the-first-school-what-is-learning/

Related Articles

ಇತ್ತೀಚಿನ ಸುದ್ದಿಗಳು