Thursday, June 20, 2024

ಸತ್ಯ | ನ್ಯಾಯ |ಧರ್ಮ

ನೆಹರೂ ಕನಸುಗಳು ಮತ್ತು ಇಂದಿನ ಮನಸುಗಳು…

ಭಾರತ ದೇಶದ ಅಸ್ತಿತ್ವ ಮತ್ತು ಅಸ್ಮಿತೆಯ ಹಿಂದೆ ದುಡಿದ ಮುತ್ಸದ್ದಿಗಳಲ್ಲಿ ಜವಾಹರ್‌ಲಾಲ್ ಅವರ ಹೆಸರು ಪ್ರಮುಖವಾದದ್ದು ಎನ್ನುವುದನ್ನು ವಿರೋಧಿಗಳು ಎಷ್ಟು ಕುತಂತ್ರ ನಡೆಸಿದರೂ ಮರೆಸಲಾಗದು, ಎನ್ನುವುದು ಇತಿಹಾಸದ ಸತ್ಯ ಮತ್ತು ವರ್ತಮಾನದ ವ್ಯಂಗ್ಯವೂ ಆಗಿದೆ  ಡಾ.ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ಪಂಡಿತ್ ನೆಹರೂ ಅವರ ಮೇಲೆ ಇಂದು ಅಧಿಕಾರ ಹಿಡಿದಿರುವ ಶಕ್ತಿಗಳು ಮುಗಿಬೀಳಲು ಕಾರಣಗಳಾದರೂ ಏನಿರಬಹುದು ಎನ್ನುವುದು ನನ್ನನ್ನು ಸದಾ ಕಾಡುವ ಪ್ರಶ್ನೆಗಳಾಗಿವೆ. ಕಾಂಗ್ರೆಸ್‌ನಲ್ಲಿ ಇರುವ ಬೇರಾವ ನಾಯಕರ ಮೇಲೂ ಇಲ್ಲದ ದ್ವೇಷ, ವೈರತ್ವಕ್ಕೆ ಕಾರಣವಾದರೂ ಏನು? ತನ್ನ ಜೀವನದ ಅಮೂಲ್ಯವಾದ ಎಂಟು ವರ್ಷ, ಹನ್ನೊಂದು ತಿಂಗಳು, ಹನ್ನೆರಡು ದಿನವನ್ನು ಜೈಲು ವಾಸದಲ್ಲಿ ಕಳೆದ,  ಆಡಂಬರದ ಬದುಕನ್ನು ಬಿಟ್ಟು, ಇಲ್ಲದ ಒತ್ತಡಗಳನ್ನು ಅನುಭವಿಸಿ, ಬೆಳೆಯುವ ಹಂತದಲ್ಲಿ ತನ್ನ ಏಕೈಕ ಪುತ್ರಿಗೆ ಸಾಕಷ್ಟು ಪ್ರೀತಿ, ಗಮನ ಕೊಡಲಾಗದೆ, ಕೊನೆಗೆ ತನ್ನ ತಂದೆ, ಮಡದಿಯನ್ನೂ ಕಳೆದುಕೊಂಡ ನೆಹರೂ ಯಾಕಾಗಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ? ತನ್ನ ಮರಣದ ಅರವತ್ತು ವರ್ಷಗಳ ನಂತರವೂ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾದ ವಿಚಿತ್ರ ಸನ್ನಿವೇಷದಲ್ಲಿ ನೆಹರೂ ಯಾಕಿದ್ದಾರೆ? ಸ್ವಾತಂತ್ರ್ಯ ಹೋರಾಟದ ಫಲವನ್ನು ನೆಹರೂ ಬೇರೆಯವರಿಗಿಂತ ಹೆಚ್ಚು ಅನುಭವಿಸಿದರೇ, ಅಥವಾ ನೆಹರೂ ಅವರು ಸಾಮ್ರಾಜ್ಯಶಾಹಿಯೊಂದಿಗೆ ಕಣ್ಣು ಮುಚ್ಚಾಲೆ ಆಡುತ್ತಿದ್ದ ಕೆಲವೊಂದು ಶಕ್ತಿಗಳಿಗೆ ತಲೆಯೆತ್ತಲು ಬಿಡದೆ, ಬಹಳ ಗಟ್ಟಿ ನಿಲುವುಗಳನ್ನು ತಳೆದಿರಬಹುದೇ? ಇತ್ಯಾದಿ ಪ್ರಶ್ನೆಗಳ ಬೆನ್ನು ಹತ್ತಿ ನೆಹರೂ ಕುರಿತು ತಿಳಿಯಲು ಹೊರಟಾಗ ದಕ್ಕಿದ ಒಂದಷ್ಟು ಮಾಹಿತಿಗಳನ್ನು ಈ ಲೇಖನದಲ್ಲಿ ಓದುಗರೊಂದಿಗೆ ಹಂಚಿಕೊಳ್ಳಲಾಗಿದೆ.

mage Credit: mid-day.com

ಶ್ರೀಮಂತ ಮನೆತನದಲ್ಲಿ ಹುಟ್ಟಿದ ಜವಾಹರಲಾಲ್ ನಿಜವಾಗಿಯೂ ಮೋತಿಲಾಲ್, ಸ್ವರೂಪ ರಾಣಿ ಕುಟುಂಬದ ಕಣ್ಮಣಿಯೇ ಆಗಿದ್ದವರು. ಹದಿನೈದು ವರ್ಷದವರೆಗೂ ಮನೆಯಲ್ಲಿಯೇ ಶಿಕ್ಷಣ ಪಡೆದ ಇವರು ಮುಂದೆ ಇಂಗ್ಲೆಂಡಿನ ಪ್ರತಿಷ್ಠಿತ ‘ಹ್ಯಾರೋ’ ಶಿಕ್ಷಣ ಸಂಸ್ಥೆ, ಅಲ್ಲಿಂದ ಮುಂದೆ ಟ್ರಿನಿಟಿ ಕಾಲೇಜ್‌ನಲ್ಲಿ ಓದಿ ಸುಶಿಕ್ಷಿತರಾದವರು. ಮಗನನ್ನು ಇಂಗ್ಲೆಂಡ್‌ನಲ್ಲಿ ಓದಲಿಕ್ಕೆಂದು ಬಿಟ್ಟು ಬರುತಿರುವ ವೇಳೆ ಮೋತಿಲಾಲ್, ಮಗ ಜವಾಹರ ಲಾಲ್ ಅವರಿಗೆ “ಜೀವನ ಪೂರ್ತಿ ಕೂತು ಉಣ್ಣುವಷ್ಟು ಆಸ್ತಿಯನ್ನು ನಾನು ಏನೂ ಕಷ್ಟವಿಲ್ಲದೆ ನಿನಗೆ ನೀಡಬಲ್ಲೆ, ಆದರೆ ನೀನು ನಿನ್ನದೇ ಆದ ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಅದರ ಮೂಲಕ ಗುರುತಿಸಲ್ಪಡಬೇಕು ಎನ್ನುವುದು ನಮ್ಮ ಮನದಿಂಗಿತ ಎಂದು ಹೇಳುತ್ತಾರೆ. ಕಲಿಯುವುದರಲ್ಲಿ ಮಹಾ ಬುದ್ಧಿವಂತನಲ್ಲದಿದ್ದರೂ, ಅಧ್ಯಯನದ ಮೂಲಕ ಅರಿವಿನ ಪರಿಧಿಯನ್ನು ಸದಾ ವಿಸ್ತರಿಸುತ್ತಾ ತನ್ನ ವ್ಯಕ್ತಿತ್ವ ಬೆಳೆಸಿದವರು ಜವಾಹರ್‌ ಲಾಲ್.

ಇಂಗ್ಲೆಂಡಿನಲ್ಲಿರುವಾಗಲೂ ಭಾರತದಲ್ಲಿ ರಾಷ್ಟ್ರೀಯ ಚಳುವಳಿಯ ಬಗ್ಗೆ ಕುತೂಹಲವುಳಿಸಿಕೊಂಡು ಆ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾ ಬಂದಿದ್ದರು ಯುವಕ ಜವಾಹರ್‌ ಲಾಲ್. ಮೋತಿಲಾಲ್ ನೆಹರೂ ಅವರು ರಾಷ್ಟ್ರೀಯ ಚಳುವಳಿಯಲ್ಲಿ ತೊಡಗಿಕೊಂಡಿದ್ದರೂ ಬ್ರಿಟೀಷ್ ವಸಾಹತುಶಾಹಿಯ ಬಗ್ಗೆ ಬಹಳ ಕಹಿಯನ್ನೇನೂ ಹೊಂದಿರಲಿಲ್ಲವೆಂದೇ ತೋರುತ್ತದೆ. ಆದರೆ ಮಗ ರಾಷ್ಟ್ರೀಯ ಚಳುವಳಿಯ ಬಗ್ಗೆ ತೋರುತ್ತಿದ್ದ ಆಸಕ್ತಿ ಮತ್ತು ಬರ ಬರುತ್ತಾ ವಸಾಹತು ಶಕ್ತಿಯ ದಮನಕಾರೀ ನೀತಿಗಳ ಬಗ್ಗೆ ಮಗನ ರಾಜಿರಹಿತ ವಿರೋಧ ಕೆಲವು ಸಲ ಮೋತಿಲಾಲ್ ಅವರಿಗೂ ಕಸಿವಿಸಿ ಉಂಟುಮಾಡುತ್ತಿತ್ತು ಎನಿಸುತ್ತದೆ. ಆರಂಭದ ದಿನಗಳಿಂದಲೇ ಸಮಾಜವಾದೀ ನಿಲುವು ಹೊಂದಿದ್ದ ಜವಾಹರ ಲಾಲ್, ಬಹುಷಃ ಗಾಂಧೀಜಿಯವರ ಪ್ರಭಾವ ವಲಯಕ್ಕೆ ಬರದೇ ಇದ್ದಿದ್ದರೆ ಇನ್ನೊಬ್ಬ ಲೋಹಿಯಾ ಅಗುತ್ತಿದ್ದರೋ ಏನೋ? ಸ್ವಾತಂತ್ರ್ಯದ ಹೋರಾಟವನ್ನು ಹಂತ ಹಂತವಾಗಿ ಬಲಗೊಳಿಸುತ್ತಾ ಪೂರ್ಣ ಸ್ವಾತಂತ್ರ್ಯದ  ಕಡೆಗೆ ಮುನ್ನಡೆಯ ಬೇಕೆನ್ನುವ ಹಿರಿಯರ ನಿಲುವೇಕೋ ಯುವಕ ಬಿಸಿರಕ್ತದ ತರುಣ ಜವಾಹರ್ ಅವರಿಗೆ ಸರಿ ಬರುತ್ತಿರಲಿಲ್ಲ. ವಸಾಹತುಶಾಹಿ ಶಕ್ತಿಗಳು ರಾಷ್ಟ್ರೀಯ ಚಳುವಳಿಯ ವೇಗ ಮತ್ತು ಗತಿಗಳನ್ನು ಗಮನಿಸುತ್ತಾ ಸಾಧ್ಯವಾದಲ್ಲಿ ಎಲ್ಲಾ ನಾಯಕರ ಮತ್ತು ಹೋರಾಟದಲ್ಲಿ ಬಿರುಕು ಉಂಟುಮಾಡಲು ಪ್ರಯತ್ನಿಸುತ್ತಲೇ ಇದ್ದುವು.

image credit : wikipedia

ಮೊದಲ ಸ್ವಾತಂತ್ರ್ಯ ಸಮರದ ನಂತರ ಹಿಂದೂ ಮುಸ್ಲಿಂ ಒಗ್ಗಟ್ಟನ್ನು ಯಾವ ಬೆಲೆ ತೆತ್ತಾದರೂ ತಡೆಯಬೇಕೆನ್ನುವ ವಸಾಹತುಶಾಹಿಯ ನಿಲುವನ್ನು ನಾವು ಗಮನಿಸಬಹುದು. ರಾಜವಂಶಸ್ಥರ ಮೂಲಕ ಬಹಳಷ್ಟು ಕಡೆ ತಮ್ಮ ಕಾರ್ಯಸೂಚಿ ಅನುಷ್ಠಾನ ಗೊಳಿಸಿದರೆ ಉಳಿದೆಡೆ ಪ್ರಾಂತೀಯ ಸರಕಾರಗಳ ಮೂಲಕ ಸಾಮ್ರಾಜ್ಯಶಾಹೀ ಶಕ್ತಿ ಆಡಳಿತ ನಡೆಯುತ್ತಿತ್ತು. ಈ ಸಾಮ್ರಾಜ್ಯಶಾಹೀ ಶಕ್ತಿಯ ಹಿಂದಿದ್ದ ಲಾಭಬಡುಕತನದ ವಾಂಛೆಯನ್ನು ತರುಣ ನೆಹರೂ ಸರಿಯಾಗಿಯೇ ಗುರುತಿಸಿದ್ದರು ಎನ್ನುವುದನ್ನು ಅವರ ಕೆಲವೊಂದು ನಿರ್ಧಾರ ಮತ್ತು ನಿಲುವುಗಳು ವಿಷದ ಪಡಿಸಿವೆ ಎಂದು ಹೇಳಬಹುದು.  ಪ್ರಾಯಶಃ ಈ ಸೂಕ್ಷ್ಮವನ್ನು ನೆಹರೂ ಬಹಳ ಚೆನ್ನಾಗಿಯೇ ತಿಳಿದಿದ್ದರು ಎನ್ನುವುದು ರಾಷ್ಟ್ರೀಯ ಚಳುವಳಿಯಲ್ಲಿ ನೆಹರೂ ಅವರ ಪಾತ್ರದ ಕುರಿತ ಅಧ್ಯಯನ ನಮಗೆ ತಿಳಿಸಿ ಕೊಡುತ್ತದೆ. ಹಿಂದು ಮುಸ್ಲಿಂ ಒಗ್ಗಟ್ಟು ಪೂರ್ಣ ಸ್ವಾತಂತ್ರ್ಯ ಪಡೆಯಲು ಬಹು ಮುಖ್ಯವಾದ ಸ್ವರೂಪಾತ್ಮಕ ಕ್ರಮ ಎನ್ನುವುದನ್ನು ತಿಳಿದ ಪ್ರಮುಖರು ಮಹಾತ್ಮಾ ಗಾಂಧೀಯವರು. ಗಾಂಧೀಯವರ ಈ ನಿಲುವು ಮತ್ತು ತಿಳುವಳಿಕೆಯನ್ನು ಉಳಿದೆಲ್ಲರಿಗಿಂತ ಹೆಚ್ಚು ನಿಖರವಾಗಿ ಅರ್ಥಮಾಡಿಕೊಂಡ ಕಾರಣಕ್ಕೆ ನೆಹರೂ ಅವರನ್ನು ತನ್ನ ಉತ್ತರಾಧಿಕಾರಿ ಎಂದು ಅವರು ಪರಿಗಣಿಸಿರಬಹುದು. ಹಲವಾರು ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕತ್ವದ ಪ್ರಶ್ನೆ ಬಂದಾಗ ಮಹಾತ್ಮ ಗಾಂಧೀಯವರ ಒಲವು ನೆಹರೂ ಕಡೆಗಿದ್ದದ್ದು ಬಹಳ ಸ್ಪಷ್ಟವಾಗಿಯೇ ಇದೆ. ಆದರೆ ಇಂತಹ ಕೊಂಚ ಪಕ್ಷಪಾತಿಯಂತೆ ಇರುವ ನಿಲುವಿಗೊಂದು ಕಾರಣ ಬೇಕಲ್ಲ? ಅದೇನಿರಬಹುದು ಎಂದು ಯೋಚಿಸಿದರೆ ಎರಡು ಕಾರಣಗಳು ಕಂಡು ಬರುತ್ತವೆ. ಒಂದು, ನೆಹರೂ ಅವರು ಸ್ವಾತಂತ್ರ್ಯ ಗಳಿಸಲು, ದೇಶದ ಬಲವರ್ಧನೆಗೆ ಮತ್ತು ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಲು, ಹಿಂದು, ಮುಸ್ಲಿಂ ಒಗ್ಗಟ್ಟು ಮುಖ್ಯ ಎಂದು ಭಾವಿಸಿರುವುದು, ಎರಡನೆಯದು, ಸ್ವತಂತ್ರ ಭಾರತ ಜಾತ್ಯಾತೀತ ನಿಲುವಿಗೆ ಬದ್ಧವಾಗಿ ರೂಪುಗೊಳ್ಳಬೇಕು ಎನ್ನುವುದು. ಇವೆರಡೂ ಕೂಡಾ ಗಾಂಧೀ ಭಾವಿಸಿದ ಭಾವೀ ಭಾರತದ ಪ್ರಮುಖ ಲಕ್ಷಣಗಳು.

ಗಾಂಧೀ ಮತ್ತು ನೆಹರೂ ಅವರ ನಡುವೆ ಕೂಡಾ ಅಭಿಪ್ರಾಯ ಭೇದ ಮೂಡಿಸುವ ರೀತಿಯ ಪ್ರಯತ್ನಗಳನ್ನು ಅಂದಿನ ವಸಾಹತು ಸರಕಾರ ಬಹಳಷ್ಟು ಸಂದರ್ಭಗಳಲ್ಲಿ ಮಾಡುತ್ತಾ ಬಂದಿತ್ತು. ಆದರೆ ಗಾಂಧೀಯವರು ನೆಹರೂ ಅವರನ್ನು ಮುಖಾಮುಖಿಯಾಗಿ ವಿಚಾರ ವಿಮರ್ಶೆ ಮಾಡಿ, ಅವರ ನಿಲುವಿನಲ್ಲಿ ಇರಬಹುದಾದ ಮಿತಿಗಳನ್ನು ತೋರಿಸಿಕೊಟ್ಟಾಗ ನೆಹರೂ ಗಾಂಧೀಯವರ ಮಾತಿಗೆ ಮನ್ನಣೆ ನೀಡುತ್ತಾ ಬಂದಿರುವುದನ್ನೂ ನಾವು ಗಮನಿಸಬಹುದು. “ಭವಿಷ್ಯದಲ್ಲಿ ಅಸ್ತಿತ್ವಕ್ಕೆ ಬರಬಹುದಾದ ಒಂದು ದೇಶದ ಸ್ವರೂಪ, ಲಕ್ಷಣಗಳು, ಏನಿರಬೇಕು ಮತ್ತು ಅವುಗಳನ್ನು ಯಾವ ರೀತಿಯಲ್ಲಿ ಪರಿಭಾವಿಸಬೇಕು, ಪರಿಭಾವಿಸಿದ ಸಂಗತಿಗಳನ್ನು ಯಾವ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎನ್ನುವ ಸ್ಪಷ್ಟ ಚಿಂತನೆಯನ್ನು ನೆಹರೂ ಅವರಲ್ಲಿ ಕಾಣಬಹುದು. ಇದೆಲ್ಲದರೊಂದಿಗೆ ಹಲವು ಸಂದರ್ಭಗಳಲ್ಲಿ ಅತ್ಯಂತ ಭಾವನಾತ್ಮಕವಾಗಿ ಯೋಚಿಸಿ, ವಾಸ್ತವ ಜಗತ್ತಿನ ಕಾರ್ಯನಿರ್ವಹಣೆಗೆ ಅಗತ್ಯವಾದ ವಿವೇಕವನ್ನು ಮರೆಯುವ ಅಭ್ಯಾಸವೂ ಅವರಲ್ಲಿ ಇದ್ದದ್ದನ್ನೂ ನಾವು ಮರೆಯುವ ಹಾಗಿಲ್ಲ.  ಮಹಾತ್ಮಾ ಗಾಂಧೀಯವರು ತಾವು ಬದುಕಿದಷ್ಟು ದಿನ ನೆಹರೂ ಅವರ ಅತಿ ಉತ್ಸಾಹಕ್ಕೆ ಲಗಾಮು ಹಾಕುತ್ತಾ, ಅವರಿಗೆ ಮಾರ್ಗದರ್ಶನ ಮಾಡುತ್ತಾ ಅವರನ್ನು ಮುನ್ನಡೆಸಿದ್ದರು. ಆದರೆ ಗಾಂಧೀಜಿಯವರ ಮರಣಾನಂತರ ನೆಹರೂ ಅವರನ್ನು ತಿದ್ದಿತೀಡಿ ಮುನ್ನಡೆಸಬಲ್ಲ ಹಿರಿಯರು ಇಲ್ಲದೇ ಹೋಗಿರುವುದೂ ಪಾಕಿಸ್ತಾನ ಮತ್ತು ಚೀನಾ ಯುದ್ಧದ ಸಂದರ್ಭಗಳಲ್ಲಿ ಆಗಿ ಹೋದ ಪ್ರಮಾದಗಳಿಗೆ ಕಾರಣವಿರಲೂಬಹುದು. ಸ್ವತಂತ್ರ ಪೂರ್ವದಲ್ಲಿ ನಿರ್ಧಾರಗಳಲ್ಲಿರಬಹುದಾದ ದೋಷಗಳ ಪರಿಣಾಮ ಹಾಗೂ ಸ್ವಾತಂತ್ರ್ಯ ಬಳಿಕದ ದಿನಗಳಲ್ಲಿ ಸರಕಾರ ತಮ್ಮ ತಪ್ಪು ನಿರ್ಧಾರಗಳಿಗೆ ತೆರಬೇಕಾದ ಬೆಲೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ.

ನೆಹರೂ ಒಬ್ಬ ಕನಸುಗಾರ, ಮುಂದಿನ ತಲೆಮಾರಿನ ಬದುಕನ್ನು ತಿಳಿಯಲು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಯಾವ ರೀತಿಯ ಸಿದ್ಧತೆಯ ಅಗತ್ಯವಿದೆ ಎನ್ನುವ ಬಗ್ಗೆ ತಿಳಿದವರು. ಹತ್ತು ವರ್ಷ ವಯಸ್ಸಿನ ತನ್ನ ಮಗಳಿಗೆ ಬರೆದ ಪತ್ರಗಳನ್ನು ಗಮನಿಸಿದರೇ ಇದು ತಿಳಿಯುತ್ತದೆ. ಈ ಜಗತ್ತು ಹೇಗೆ ಸೃಷ್ಟಿಯಾಯಿತು, ಸಂಸ್ಕೃತಿ, ಭಾಷೆ, ದೇಶ ರೂಪುಗೊಂಡ ವಿವರಗಳನ್ನು ಸರಳವಾಗಿ ಸ್ಪಷ್ಟವಾಗಿ ವಿವರಿಸುವ ನೆಹರೂ, ಎಳೆಯ ಜೀವ ಒಂದು ಈ ವಿಶ್ವಕ್ಕೆ ತನ್ನನ್ನು ಪರಿಚಯಿಸಿಕೊಳ್ಳಬಹುದಾದ ರೀತಿಯನ್ನು ಬಹಳ ಸುಂದರವಾಗಿ ನಿರ್ವಚನ ಮಾಡಿದ್ದಾರೆ. ಈ ಲೇಖನ ಮಾಲೆ ಬರೆದು ಹತ್ತಿರ ಹತ್ತಿರ ನೂರು ವರ್ಷಗಳಾದರೂ ಅದಿನ್ನು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ. ಅದನ್ನು ಈಗಿನ ಮಕ್ಕಳೂ ಓದಿ ಮನನ ಮಾಡಿಸಿಕೊಳ್ಳುವ ಮೂಲಕ ಜ್ಞಾನ ಸಂಪನ್ನರಾಗಬಹುದು. ಇಂತಹ ಲೇಖನ ಮಾಲೆಯನ್ನು ಬರೆದ ನೆಹರೂ ಭಾರತದ ಚರಿತ್ರೆಯನ್ನೂ ಬರೆದರು, ಮುಂದೆ ದೇಶದ ಪ್ರಧಾನಿಯಾದ ನಂತರ ಸಂವಿಧಾನ ರಚನೆ, ಅಭಿವೃದ್ಧಿ ಮತ್ತು ಆಡಳಿತ ನೀತಿಯ ಕುರಿತು ರಾಜ್ಯಗಳ ಮುಖ್ಯ ಮಂತ್ರಿಗಳಿಗೂ ಪತ್ರ ಬರೆಯುತ್ತಾರೆ. ಇದೆಲ್ಲ ಸಂಗತಿಗಳ ಮೂಲಕ ನಮಗೆ ಸ್ಪಷ್ಟವಾಗುವ ಅಂಶ ಏನೆಂದರೆ ರಾಜಕೀಯ ನಾಯಕತ್ವಕ್ಕೆ ಆಸೆಪಡುವ ಒಬ್ಬ ವ್ಯಕ್ತಿ ತಾನು ಎಲ್ಲರ ನಿರೀಕ್ಷೆಗಳಿಗೆ ಸ್ಪಂದಿಸುವ ಮತ್ತು ತಾನು ಮುನ್ನಡೆಸುವ ಜನರಿಂದ ಮೌಲ್ಯಮಾಪನಕ್ಕೆ ಒಳಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎನ್ನುವ ಆಲೋಚನೆ ಹೊಂದಿರುವುದೇ ಆಗಿದೆ. ಪ್ರಜಾಪ್ರಭುತ್ವದ ಆಶಯಗಳಿಗೆ ಬದ್ಧನಾಗಿ ಕೆಲಸ ಮಾಡುತ್ತಿರುವ ವೇಳೆಯಲ್ಲಿಯೂ ಮೇರೆ ಮೀರಿದಲ್ಲಿ ಜನ ಬೆಂಬಲ ತನ್ನನ್ನು ‘ನಿರಂಕುಶ ಮತಿ’ಯನ್ನಾಗಿ ಮಾಡಿ ಬಿಡುವ ಅಪಾಯವಿದೆ ಎನ್ನುವ ಎಚ್ಚರವನ್ನೂ ನೆಹರೂ ಹೊಂದಿದ್ದರು.

ಈ ಮೊದಲೇ ಉಲ್ಲೇಖಿಸಿದಂತೆ ಸಾಮ್ರಾಜ್ಯಶಾಹೀ ಶಕ್ತಿಯ ಹಿಂದಿದ್ದ ಲಾಭಬಡುಕತನದ ವಾಂಛೆಯನ್ನು ಸೂಕ್ಷ್ಮವನ್ನು  ಅರಿತಿದ್ದ ನೆಹರೂ, ಭಾರತ ಒಂದು ಸಾರ್ವಭೌಮ ದೇಶವಾಗಿ ಅಮೇರಿಕಾ ಯುರೋಪ್‌ನ ಶಕ್ತಿ ಕೇಂದ್ರಗಳಿಗಿಂತ ದೂರ ಉಳಿದು, ತನ್ನ ಪರಂಪರೆ ಇತಿಹಾಸದ ಹಿನ್ನೆಲೆಯಲ್ಲಿ ವರ್ತಮಾನದ ಅವಕಾಶಗಳನ್ನು ಬಳಸಿಕೊಂಡು ‘ಸ್ವಾಯತ್ತ ಶಕ್ತಿಯಾಗಿ’ ಬೆಳೆಯಬೇಕು ಎನ್ನುವ ನೆಹರೂ ಅವರ ಬಯಕೆ, ಕೆಲವೊಂದು ಸಲ ಭಾವನಾತ್ಮಕ ತಿರುವುಗಳನ್ನೂ ತೆಗೆದುಕೊಂಡಿದೆ. ಬಹುಶಃ ಚೀನಾ ದೇಶದ ಜೊತೆಗೆ ವ್ಯವಹರಿಸುವ ವೇಳೆ, ‘ಏಷ್ಯಾ’ ದ ದೇಶಗಳು ಬಲಾಢ್ಯರ ಪ್ರಭಾವ ವಲಯದಿಂದ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅವಕಾಶಗಳನ್ನು ರೂಡಿಸಿಕೊಳ್ಳುವ ಕಾರಣದಿಂದ ಚೀನಾದೊಂದಿಗೆ ನೆಹರೂ ಅಗತ್ಯಕ್ಕಿಂತ ಹೆಚ್ಚು ಉದಾರವಾಗಿ ನಡೆದುಕೊಂಡರೇನೋ? ದೇಶದ ಮಟ್ಟಿಗಂತೂ ವಿದೇಶಿ ನೀತಿಯ ಪ್ರಾಥಮಿಕ ಪಾಠವೇ ಕಹಿಯಾಗಿ ಪರಿಣಮಿಸಿ, ಸಂಕಟದ ಪರಿಸ್ಥಿತಿಗೆ ದೂಡಲ್ಪಟ್ಟಿದ್ದು ದುರಂತವೇ ಸರಿ. ಇದೆಲ್ಲದರ ಹೊರತಾಗಿಯೂ ಭಾರತ ದೇಶದ ಅಸ್ತಿತ್ವ ಮತ್ತು ಅಸ್ಮಿತೆಯ ಹಿಂದೆ ದುಡಿದ ಮುತ್ಸದ್ದಿಗಳಲ್ಲಿ ಜವಾಹರ್‌ಲಾಲ್ ಅವರು ಹೆಸರು ಪ್ರಮುಖವಾದದ್ದು ಎನ್ನುವುದನ್ನು ವಿರೋಧಿಗಳು ಎಷ್ಟು ಕುತಂತ್ರ ನಡೆಸಿದರೂ ಮರೆಸಲಾಗದು, ಎನ್ನುವುದು ಇತಿಹಾಸದ ಸತ್ಯ ಮತ್ತು ವರ್ತಮಾನದ ವ್ಯಂಗ್ಯವೂ ಆಗಿದೆ.

ಡಾ.ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ-ನೆಹರೂ ಎಂಬ ಎತ್ತರದ ಮನುಷ್ಯ

Related Articles

ಇತ್ತೀಚಿನ ಸುದ್ದಿಗಳು