ನೆಲದ ಜಾತಿಯ ದುಡಿ

ಬಡಿಯುತ್ತಿದೆ ಜಾತಿಯ ದುಡಿ
ರಾಜಕೀಯದ ಪರಿಕಲ್ಪನೆಯಲಿ
ವರ್ಣದ ದುಡಿ ಎದ್ದು
ಸದ್ದು ಮಾಡುತಿದೆ…..

ಜಯಂತಿಯ ಬಡಬಡಿಕೆಗೆ
ಚರ್ಮ ಸದ್ದೇರಿ ಭಾರಿಸುತಿದೆ.
ಇದಕೆ ತಿಲಕದ ಹಾಹಾಕಾರ
ಸಲ್ಲದ ಜೈಕಾರ…..

ಕುಲ ಮತ ಭೇದವಿಲ್ಲದ
ದುಡಿಗೆ ಜಾತಿಯ ನಂಟು
ಅಂಟಾಗಿ ಸೆಡ್ದೊಡೆಯುತಿದೆ…

ಕಿವಿ ತಮಟೆಗೆ ಇಂಪು ಕೊಟ್ಟ
ಅಂದಿನ ದುಡಿ
ತಮಟೆ ಪೊರೆ ಹರಿವ
ಇಂದಿನ ಹಲಗೆಯ ಸ್ವೇಚ್ಛೆಯ ದುಡಿ….

ನೆಲದ ಮೇಲೆ ಜಾತಿಯ ಸದ್ದೋ
ಅಥವಾ ಜಾತಿಯ ಕಿಡಿಗೆ
ದುಡಿಯ ಸದ್ದೋ….?

ಈ ಸದ್ದು ಗದ್ದಲದಿ
ಗೆದ್ದಲಿನ ಹಾರಾಟ
ಕಳ್ಳ ಬಟ್ಟಿಯು
ನೆಲದ ತುಲನೆಯಿಲ್ಲದೆ
ಸರಾಗವಾಗಿ ಹರಿಯುತಿದೆ….

ಕರುಣೆಯಿಲ್ಲದ
ಕಾಗೆ ಗೂಬೆಗಳ ಬಾಧೆಗೆ
ಶಾಂತಿಯ ದೂತ ಕೂಡಾ
ಸುಮ್ಮನೆ ನಿಂತಿದ್ದಾನೆ….

ಬೆಳಕ ಬಿಸಿಲಿಗೆ
ಗಾಂಧಾರಿಯ ಕಣ್ಪಟ್ಟಿ?…
ಡೊಳ್ಳು ಸದ್ದಿಗೆ
ಹರಕೆಯ ವಾಗ್ದಾನ
ಇದಕೆ ವಿಧಿಯಿಲ್ಲದೇ ಸೋತಿವೆಯಲ್ಲ ಕೊಂಬುಗಳು…

ಯಾವುದೂ ಕತ್ತಲೆಯಲ್ಲಿಲ್ಲ
ಆದರೂ ಕಗ್ಗತ್ತಲಲಿ
ಮಂಕು ದಿಣ್ಣೆಯ ಹೆಜ್ಜೆಯ
ಇಡುತಿದೆಯಲ್ಲ
ಒಡಲು….

ಅಂತರ ಪಟದ ವಿಚಾರಕೆ
ಸಿಂಧೂ(ಹಿಂಧೂ) ಧ್ವಜದಡಿಯಲಿ
ಇನ್ನೂ ನಡೆಯುತ್ತಿದೆಯಲ್ಲಾ
ಪ್ರಾದೇಶಿಕತೆಯ ಬಾಡಿಗೆ?….

ಬೀಗುವ ಕುಲದ ವೈರತ್ವಕೆ
ಬಾಗಿದೆ ತಲೆಯ ರುಮಾಲು?

ಜಗದ ಮಂದಿರಕೆ
ಜಾತ್ಯಾತೀತತೆಯ ಜ್ಯೋತಿ
ಬೆಳಕ ಹರಿಸಲು
ಮಬ್ಬಾಗಿ ಇಬ್ಭಾಗವಾಗಿದೆಯಲ್ಲಾ
ವಿಷದ ವೈಷಮ್ಯತೆ….

ಕೊನೆಗೂ ಸಾಗುತಿದೆಯಲ್ಲ
ಯಾವ ದುಡಿಯ ಸದ್ದಿಲ್ಲದೇ
ಎಲ್ಲಾ ಕುಲವನ್ನು ಒಟ್ಟಾಗಿ
ಸೇರಿಸಿ ಸಮಾನತೆಯ
ಹಳಿಯೊಳು ಚಲಿಸುವ
ಜಾತ್ಯಾತೀತತೆಯ ಉಗಿ ಬಂಡಿ….

ಡಾಕ್ಟರ್. ಕೃಷ್ಣವೇಣಿ ಆರ್. ಗೌಡ.

ಉಪನ್ಯಾಸಕರು ಮತ್ತು ಬರಹಗಾರರು

Related Articles

ಇತ್ತೀಚಿನ ಸುದ್ದಿಗಳು