Wednesday, January 21, 2026

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು-67 : ನವನಾಜಿ MAGA, ಟ್ರಂಪ್ ಮತ್ತು ICE!

“..ಒಂದು ದೇಶವು ತನ್ನ ಸ್ವಂತ ನಿವಾಸಿಗಳನ್ನು ರಾಜ್ಯದ ಶತ್ರುಗಳೆಂದು ಪರಿಗಣಿಸಿ ಕೊಲ್ಲಲು ಪ್ರಾರಂಭಿಸಿದಾಗ, ಅದು ನಿಜವಾದ ಪ್ರಜಾಪ್ರಭುತ್ವವನ್ನು ಕೊಂದು ಸರ್ವಾಧಿಕಾರತ್ವದ ಪಾತಾಳಕ್ಕೆ ಇಳಿಯಲು ಪ್ರಾರಂಭಿಸುತ್ತದೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಸಾಂವಿಧಾನಿಕವಾಗಿ ಒಂದು ಪ್ರಜಾಪ್ರಭುತ್ವವಾದಿ ಒಕ್ಕೂಟವಾಗಿರುವ ಯುಎಸ್ಎಯು- ಮೂಲತಃ ಸರ್ವಾಧಿಕಾರಿ ಮನೋಭಾವದ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಎರಡನೇ ಅವಧಿಗೆ ಪ್ರವೇಶಿಸುತ್ತಿದ್ದಂತೆ, ಫೆಡರಲ್ (ಕೇಂದ್ರೀಯ) ಕಾನೂನು ಜಾರಿಯ ಸ್ಥಿತಿಗತಿಯು ಹೆಚ್ಚು ಆಕ್ರಮಣಕಾರಿ, ಜನಾಂಗೀಯವಾದಿ, ಮಿಲಿಟರೀಕೃತ ನಿಲುವಿನತ್ತ ಹೊರಳಿದೆ. ಈ ರೂಪಾಂತರದ ಕೇಂದ್ರ ಬಿಂದು- ವಲಸೆ ಮತ್ತು ಕಸ್ಟಮ್ಸ್ ಜಾರಿ (ICE, ಅಂದರೆ Immigration, Customs Enforcement). ಅದು ಈಗ ಅಧ್ಯಕ್ಷರ “ಅಮೇರಿಕಾ ಮೊದಲು” ಕಾರ್ಯಸೂಚಿಯಲ್ಲಿ ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿರುವ ಸಂಸ್ಥೆಯಾಗಿದೆ.

ಮಿನಿಯಾಪೋಲಿಸ್ ಘಟನೆ: ಕೊಲ್ಲಲು ಪರವಾನಗಿ?
2026ರ ಜನವರಿಯಲ್ ಆರಂಭದಲ್ಲಿ ಯುಎಸ್‌ಎಯ ಮಿನ್ನೇಸೋಟ ರಾಜ್ಯದ ಮಿನಿಯಾಪೋಲಿಸ್‌ ನಗರದಲ್ಲಿ  ರೆನೀ ನಿಕೋಲ್ ಗುಡ್ ಎಂಬ ಮಹಿಳೆಯನ್ನು ICE ನಿರ್ದಯವಾಗಿ ಗುಂಡಿಟ್ಟು ಕೊಂದ ನಂತರ ದೇಶದಲ್ಲಿ ಉದ್ವಿಗ್ನತೆ ಉತ್ತುಂಗಕ್ಕೇರಿದೆ. 37 ವರ್ಷ ಪ್ರಾಯದ ಯುಎಸ್‌ಎ ಪ್ರಜೆ ಮತ್ತು ಮೂರು ಮಕ್ಕಳ ತಾಯಿಯಾದ ಗುಡ್ ಅವರು ಸರಕಾರದಿಂದಲೇ ನೇಮಕವಾದ ಕಾನೂನು ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ICE ಏಜೆಂಟ್ ಒಬ್ಬ ಮೂರು ಬಾರಿ ಗುಂಡು ಹಾರಿಸಿದ್ದ. ಈ ಘಟನೆಯ ವೀಡಿಯೊಗಳು- ಟ್ರಂಪ್ ಮತ್ತಾತನ ಚೇಲಾಗಳ ಸಮರ್ಥನೆ ಮತ್ತು “ಸ್ವರಕ್ಷಣೆ”ಯ ಹಕ್ಕುಗಳನ್ನು ಸುಳ್ಳು ಎಂದು ತೋರಿಸುತ್ತವೆ. ಗುಡ್ ಅವರು ICE ಏಜೆಂಟ್‌ಗಳನ್ನು ತನ್ನ ವಾಹನದ ಅಡಿಗೆ ಹಾಕಿ “ಓಡಿಹೋಗಲು ಪ್ರಯತ್ನಿಸುವ” ಬದಲು ಸಮಾಧಾನವಾಗಿ ಮುಗುಳ್ನಗುತ್ತಾ ನಿಧಾನವಾಗಿ ತನ್ನ ವಾಹನವನ್ನು ಮುಂದಕ್ಕೆ ಚಲಾಯಿಸುವುದನ್ನು ಅವು ತೋರಿಸಿವೆ. ಆಕೆಯನ್ನು ಆ ಏಜೆಂಟ್ “ಬಿಚ್” ಎಂದು ನಿಂದಿಸುವುದೂ ಬಾಡಿಕ್ಯಾಮ್‌ನಲ್ಲಿ ದಾಖಲಾಗಿದೆ. ಅಷ್ಟಕ್ಕೂ ಸುತ್ತಲೂ ICEನ ಹಲವು ವಾಹನಗಳು ಸುತ್ತಲೂ ಇದ್ದವು. ಹಲವಾರು ಏಜೆಂಟರು ಇದ್ದರು. ಓಡಿದ್ದರೂ, ಆಕೆಯನ್ನು ಹಿಮತುಂಬಿದ್ದ ಆ ಪ್ರದೇಶದಲ್ಲಿಯೇ ಅಡ್ಡ ಹಾಕಿ ತಡೆಯಬಹುದಿತ್ತು. ಆದರೆ, ನೇರವಾಗಿ ಆಕೆಯ ತಲೆಗೇ ಮೂರು ಗುಂಡು ಹಾರಿಸಿದ್ದು, ಬಲಪಂಥೀಯ ಅಸಹಿಷ್ಣುತೆಯ ಕರಾಳ ಮನಸ್ಥಿತಿಯನ್ನು ತೋರಿಸುತ್ತದೆ. ಮೇಲಾಗಿ, ಹತ್ತಿರವೇ ಇದ್ದ ವೈದ್ಯಕೀಯರು ಅಂಗಲಾಚುತ್ತಿದ್ದರೂ ಆಕೆಗೆ ಪ್ರಥಮ ಚಿಕಿತ್ಸೆ ನೀಡದಂತೆ ತಡೆದುದು ಅಮಾನವೀಯತೆಯ ಎಲ್ಲಾ ಎಲ್ಲೆಗಳನ್ನು ಮೀರುತ್ತದೆ.

​ಏನಿದ್ದರೂ, ಈ ಘಟನೆಯು ತಕ್ಷಣದ ಬಿಕ್ಕಟ್ಟನ್ನು ಮತ್ತು ದೇಶಾದ್ಯಂತ ಭಾರೀ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಮಿನಿಯಾಪೋಲಿಸ್ ಮೇಯರ್ ಸೇರಿದಂತೆ ಸ್ಥಳೀಯ ಸರಕಾರಿ ಅಧಿಕಾರಿಗಳು- ಫೆಡರಲ್ ಏಜೆಂಟ್‌ಗಳು “ಸತ್ಯಗಳನ್ನು ಮರೆಮಾಚುತ್ತಿದ್ದಾರೆ ಮತ್ತು ಸಮುದಾಯಕ್ಕೆ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.  ನೂರಾರು ಪ್ರತಿಭಟನಾಕಾರರು ಬೀದಿಗಿಳಿದು, ICE ಕಚೇರಿಗಳನ್ನು ಸುತ್ತುವರೆದು “ನೀವು ಕೊಲೆ ಮಾಡಿದ್ದೀರಿ!” ಎಂದು ಘೋಷಣೆ ಕೂಗಿದರು. ಈ ದುರಂತವು ಒಂದು ಭಯಾನಕ ಪ್ರಶ್ನೆಯನ್ನು ಹುಟ್ಟುಹಾಕಿದೆ: “ಗಡಿ ಭದ್ರತೆ”ಯ ಹೆಸರಿನಲ್ಲಿ ಫೆಡರಲ್ ಏಜೆಂಟ್‌ಗಳಿಗೆ ವಾಸ್ತವಿಕವಾಗಿ ಗಡಿಯ ಒಳಗಡೆಯೇ, ತಮ್ಮದೇ ಪ್ರಜೆಗಳನ್ನೇ ಕೊಲ್ಲಲು ಪರವಾನಗಿ ನೀಡಲಾಗಿದೆಯೇ? ಕೇಂದ್ರ ತನಿಖಾ ಸಂಸ್ಥೆಯಾಗಿರುವ FBI- ಈ ತನಿಖೆಯನ್ನು ವಹಿಸಿಕೊಂಡಿದ್ದರೂ, ಏಜೆಂಟ್‌ನ ಸಮರ್ಥನೆಗೆ ಟ್ರಂಪ್ ಸರಕಾರ ಅವಸರದಲ್ಲಿ ಮುಂದಾದುದು- ಸರಕಾರದ ಏಜೆಂಟರಿಗೆ ಶಿಕ್ಷೆಯಿಂದ ರಕ್ಷಣೆ ನೀಡುವ ಸರ್ವಾಧಿಕಾರಿ ಸಂಸ್ಕೃತಿ ಈಗ ಆಳವಾಗಿ ಬೇರೂರುತ್ತಿರುವುದನ್ನು ಸೂಚಿಸುತ್ತದೆ.

ICEನ ಸ್ವರೂಪ: ಅಧಿಕಾರ ಮತ್ತು ಹೊಣೆಗಾರಿಕೆ
​ICE ಎಂಬ ಸಂಸ್ಥೆಯನ್ನು “ಸೆಪ್ಟೆಂಬರ್ 11”ರ ದಾಳಿಯ ನಂತರ, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ (DHS) ಶಾಖೆಯಾಗಿ 2003ರಲ್ಲಿ ಸ್ಥಾಪಿಸಲಾಯಿತು. ಇದರ ಮೂಲ ಆದೇಶವು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವುದು ಮತ್ತು ಗಡಿ ಸಮಗ್ರತೆಯನ್ನು ನಿರ್ವಹಿಸುವುದಾಗಿತ್ತು. ಅಂದರೆ, ದೇಶದ ಶತ್ರುಗಳಿಂದ ರಕ್ಷಣೆ. ಹೀಗಿದ್ದರೂ, ಇದರ ಅಧಿಕಾರಗಳು ಗಮನಾರ್ಹವಾಗಿ ವಿಶಾಲವಾಗಿವೆ. ನಗರ- ಮಂಡಳಿಗಳು ಮತ್ತು ರಾಜ್ಯ ಕಾನೂನುಗಳಿಗೆ ಜವಾಬ್ದಾರರಾಗಿರುವ ಸ್ಥಳೀಯ ಪೊಲೀಸರಿಗಿಂತ ಭಿನ್ನವಾಗಿ, ICE ಒಂದು ಫೆಡರಲ್ ಘಟಕವಾಗಿದೆ.

ಅತೀ ಮುಖ್ಯ ಎಂದರೆ, ICE ರಾಜ್ಯ ಸರಕಾರಗಳಿಗೆ ಜವಾಬ್ದಾರನಾಗಿರುವುದಿಲ್ಲ. ಸಂವಿಧಾನದ “ಮೇಲ್ಮೆ ಷರತ್ತಿನ” (Supreme Clause) ಅಡಿಯಲ್ಲಿ, ಫೆಡರಲ್ ಏಜೆಂಟ್‌ಗಳು ಸಾಮಾನ್ಯವಾಗಿ ತಮ್ಮ “ಕಾನೂನುಬದ್ಧ ಕರ್ತವ್ಯಗಳನ್ನು” ನಿರ್ವಹಿಸುವವರೆಗೆ, ರಾಜ್ಯ ವಿಚಾರಣೆಯಿಂದ ವಿನಾಯಿತಿ ಹೊಂದಿರುತ್ತಾರೆ. (ಕಾನೂನು ಮೀರಿ ಪ್ರಜೆಗಳನ್ನು ಕೊಲ್ಲುವುದು ಈ ಕರ್ತವ್ಯದಲ್ಲಿ ಸೇರಿಲ್ಲ!) ಇದು- ಹೊಣೆಗಾರಿಕೆಯ ವಿಷಯದಲ್ಲಿ ಒಂದು ಭಾರೀ ಕಂದಕವನ್ನು ಸೃಷ್ಟಿಸುತ್ತದೆ. ಉದಾಹರಣೆಗೆ, ಮಿನ್ನೇಸೋಟದಂತಹ ರಾಜ್ಯವು ಇಂತಾ ಸಾವುಗಳ ತನಿಖೆ ನಡೆಸಲು ಪ್ರಯತ್ನಿಸಿದಾಗ, ಫೆಡರಲ್ ಸರಕಾರವು ಸಾಕ್ಷ್ಯಗಳ ಪರಿಶೀಲನೆ ನಡೆಸುವ ಹಕ್ಕನ್ನು ನಿರ್ಬಂಧಿಸಬಹುದು – ಮತ್ತು ಈಗಾಗಲೇ ನಿರ್ಬಂಧಿಸುತ್ತಿದೆ ಕೂಡಾ.

ICE ಕಾಣಿಸಿಕೊಳ್ಳುವ ರೀತಿಯೂ ಈ ಆಡಳಿತದಲ್ಲಿ ಬದಲಾಗಿದೆ. ಹಿಂದೆ ಸಿವಿಲ್ ಉಡುಪು ಧರಿಸುತ್ತಿದ್ದ ಏಜೆಂಟರು, ಈಗ ಭಯಹುಟ್ಟಿಸುವ ರೀತಿಯಲ್ಲಿ ಹೆಚ್ಚುಹೆಚ್ಚಾಗಿ ಕರಿ ಮುಖವಾಡಗಳು ಮತ್ತು ಮಿಲಿಟರಿ ಶೈಲಿಯ ಯುದ್ಧತಂತ್ರದ ಸಾಧನಗಳನ್ನು ಧರಿಸುತ್ತಾರೆ. ಅವರು ಆಕ್ರಮಣಕಾರಿ ರೈಫಲ್‌ಗಳು ಸೇರಿದಂತೆ, ಭಾರೀ ಬಂದೂಕುಗಳನ್ನು ಹೊಂದಿರುತ್ತಾರೆ. ಯಾರನ್ನು ಕೊಲ್ಲಲು ಈ ಭಾರೀ ಆಯುಧಗಳು? ಸ್ವಂತ ಪ್ರಜೆಗಳನ್ನೆ? ಅವರು ಗುರುತಿಲ್ಲದ ವಾಹನಗಳನ್ನು ಬಳಸುತ್ತಾರೆ. ಈ ಮುಖವಾಡಗಳು ಏಜೆಂಟರನ್ನು “ಭಯೋತ್ಪಾದಕರ ಮೇಲೆ ಸಹಾನುಭೂತಿ ಹೊಂದಿರುವವರಿಂದ” ರಕ್ಷಿಸುತ್ತವೆ ಎಂದು ಏಜೆನ್ಸಿ ಹೇಳುತ್ತದೆ. ಆದರೆ ಟೀಕಾಕಾರರು ಈ ಅನಾಮಧೇಯತೆಯು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಮತ್ತು ಸಾರ್ವಜನಿಕರನ್ನು ಬೆದರಿಸಲು ಒಂದು ಸಾಧನವಾಗಿದೆ ಎಂದು ವಾದಿಸುತ್ತಾರೆ. ಸಾಮಾನ್ಯವಾಗಿ ಯುಎಸ್ಎಯಲ್ಲಿ ಸಂವಿಧಾನ ಪ್ರಕಾರ ಯಾವುದೇ ವ್ಯಕ್ತಿಯನ್ನು ಬಂಧಿಸಬೇಕಾದರೆ ಪೊಲೀಸರು ಮೊದಲು ತಮ್ಮ ಗುರುತು ತಿಳಿಸಬೇಕು, ಬಂಧಿತರ ಹಕ್ಕುಗಳನ್ನು ತಿಳಿಸಬೇಕು. (ಇಂತಿಂತಾ ಕಾರಣಕ್ಕೆ ನಿಮ್ಮನ್ನು ಬಂಧಿಸಲಾಗುತ್ತಿದೆ. ನಿಮಗೆ ಏನನ್ನೂ ಹೇಳದಿರುವ ಸಾಂವಿಧಾನಿಕ ಹಕ್ಕು ಇದೆ. ನೀವು ಈಗ ಏನನ್ನಾದರೂ ಹೇಳಿದಲ್ಲಿ ಅದನ್ನು ಕೋರ್ಟಿನಲ್ಲಿ ನಿಮ್ಮ ವಿರುದ್ಧ ಬಳಸಲಾಗುವುದು). ಹೀಗಿದ್ದರೂ, ಪ್ರಜೆಗಳ ಗುರುತು ಕೇಳುವ ಈ ಏಜೆಂಟ್‌ಗಳು ತಮ್ಮ ಗುರುತನ್ನೇ ಮರೆಮಾಚುವುದು ವಿಪರ್ಯಾಸವಲ್ಲವೆ? ಇದು ಬಲಪಂಥೀಯ ಗೂಂಡಾಗಳು, ಕ್ರಿಮಿನಲ್ ಗ್ಯಾಂಗ್‌ಗಳು ICE ಸೋಗಿನಲ್ಲಿ (ನಮ್ಮ ಹಿಂದೂತ್ವದ ಪೊಲೀಸರಂತೆ) ಸಾಮಾನ್ಯ ಜನರನ್ನು ಬೆದರಿಸಲು ಅವಕಾಶಮಾಡಿಕೊಡುತ್ತದೆ. ಯುದ್ಧ ವಲಯದಲ್ಲಿ ಸೈನಿಕರಂತೆ ಸಮವಸ್ತ್ರ ಧರಿಸುವ  ಮೂಲಕ, ICE ಯುಎಸ್ಎಯ ನೆಲವನ್ನು ಒಂದು ಜನ ಸಮುದಾಯವಾಗಿ ಅಲ್ಲ; ಬದಲಾಗಿ, ಒಂದು ಯುದ್ಧಭೂಮಿಯಾಗಿ ನೋಡುತ್ತಿದೆ ಎಂಬುದನ್ನು ಸಾಂಕೇತಿಕವಾಗಿ ಸೂಚಿಸುತ್ತದೆ.

ಪೂರ್ವಾಗ್ರಹ ಪೀಡಿತ ನೀತಿಗಳು
​ಅಧ್ಯಕ್ಷ ಟ್ರಂಪ್ ಅವರ ಎರಡನೇ ಅವಧಿಯ ನೀತಿಗಳು ಕಾನೂನುಬದ್ಧತೆ ಮತ್ತು ಮಾನವ ಹಕ್ಕುಗಳ ಗಡಿರೇಖೆಗಳನ್ನು ಬದಿಗೆ ತಳ್ಳಿವೆ. ಲ್ಯಾಟಿನ್ ಅಮೇರಿಕಾ, ಏಷ್ಯಾ ಮತ್ತು ಆಫ್ರಿಕಾದಿಂದ ಬಂದ ವಲಸಿಗರು ಹೆಚ್ಚಿರುವ ನೆರೆಹೊರೆಗಳಲ್ಲಿ ಸಾಮೂಹಿಕ ಗಡೀಪಾರು ಹೆಚ್ಚಾಗಿವೆ. ICE- ಸರ್ವಾಧಿಕಾರಿ ದೇಶವೊಂದರ ಮಿಲಿಟರಿ ಗೂಂಡಾಗಳಂತೆ ಒರಟಾಗಿ, ಪ್ರಚೋದಕವಾಗಿ ಮತ್ತು ಹಿಂಸಾತ್ಮಕವಾಗಿ ಜನಸಾಮಾನ್ಯರೊಂದಿಗೆ ವರ್ತಿಸುವ ನೂರಾರು ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. “ನೋ-ನಾಕ್” (No knock) ದಾಳಿಗಳು ಹೆಚ್ಚುತ್ತಿವೆ. ಅಂದರೆ, ಯುಎಸ್ಎಯಲ್ಲಿ ವಾರಂಟ್ ಇಲ್ಲದೇ ಪೊಲೀಸರು ಮನೆಯನ್ನು ಪ್ರವೇಶಿಸುವಂತಿಲ್ಲ; ತಪಾಸಣೆ ನಡೆಸುವಂತಿಲ್ಲ. ವಾರಂಟ್ ಇದ್ದರೂ ಬಾಗಿಲನ್ನು ಬಡಿದು (knock ಮಾಡಿ) ತಾವು ಬಂದಿರುವುದನ್ನು ಘೋಷಿಷಬೇಕು. ಬಾಗಿಲು ತೆರೆಯದಿದ್ದರೆ, ಬಾಗಿಲು ಒಡೆಯುತ್ತಿದ್ದೇವೆ ಎಂದು ಎಚ್ಚರಿಕೆ (warning of breach) ನೀಡಿ ನಂತರವೇ ಒಡೆಯಬೇಕು. ಹೀಗೆ ಮಾಡದೇ ನಡೆದ ಬಂಧನಗಳು ಮತ್ತು ಪಡೆದ ಸಾಕ್ಷ್ಯಗಳು ಕಾನೂನು ಬಾಹಿರವೆಂಬ ಕಾರಣಕ್ಕೆ ಕೋರ್ಟಿನಲ್ಲಿ ನಿಲ್ಲುವುದಿಲ್ಲ. ಆದರೆ, ICE ಮಧ್ಯ ರಾತ್ರಿಯೂ ಯಾವುದೇ ಎಚ್ಚರಿಕೆ ಇಲ್ಲದೇ, ಮಕ್ಕಳೂ ಇರುವ ಬಡಜನರ ಮನೆಗಳಿಗೆ, ಚರ್ಮದ ಬಣ್ಣ ನೋಡಿಕೊಂಡು, ದರೋಡೆಕೋರರಂತೆ ಬಾಗಿಲು ಒಡೆದು ನುಗ್ಗುತ್ತಿದೆ. ಬಹಿರಂಗವಾಗಿಯೇ ಜನಾಂಗೀಯ ತಾರತಮ್ಯವನ್ನು ತೋರಿಸಲಾಗುತ್ತಿದೆ.

ದೈಹಿಕ ಬಣ್ಣ, ನೋಟವನ್ನು ಆಧರಿಸಿ, ಅವರು- ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದ ಬೆಂಬಲಿಗರಲ್ಲವೆಂಬುದನ್ನು ನೋಡಿ, ಇಡೀ ಜನವಸತಿಯನ್ನು ಸೀಲ್ ಮಾಡಿ ಮನೆಮನೆಗೆ ನುಗ್ಗಿ ತಪಾಸಣೆ ನಡೆಸುವುದು, ತಾವು ಇಚ್ಚಿಸಿದ ವ್ಯಕ್ತಿಗಳನ್ನು ಗಡೀಪಾರು ಮಾಡಲು ಸಹಾಯ ಮಾಡಲು ನಿರಾಕರಿಸುವ ಸ್ಥಳೀಯ ಸರಕಾರಗಳನ್ನು ಶಿಕ್ಷಿಸಲು ಫೆಡರಲ್ ಅಧಿಕಾರವನ್ನು ಬಳಸುವುದು, ಇದೇ ಜನಾಂಗೀಯ ಲಕ್ಷಣಗಳ ಆಧಾರದಲ್ಲಿ ಸ್ವಂತ ಪ್ರಜೆಗಳನ್ನೂ ಹಾದಿ ಬೀದಿಗಳಲ್ಲಿ “ಸಂಶಯ”ದ ಮೇಲೆ ಸುತ್ತುವರಿದು ಅಟಕಾಯಿಸಿ ಕಿರುಕುಳ ನೀಡುವುದು, ಪ್ರತಿಭಟಿಸಿದವರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಪ್ರಯೋಗಿಸುವುದು, ಸಾಮೂಹಿಕ “ಬಂಧನ” ನಡೆಸಿ, ಮೇಲ್ವಿಚಾರಣೆ ಕಡಿಮೆ ಇರುವ ಮತ್ತು ದೈಹಿಕ ಮತ್ತು ಲೈಂಗಿಕ ಶೋಷಣೆಯ ವರದಿಗಳು ಆಗಾಗ್ಗೆ ಬರುತ್ತಿರುವ ಅಮಾನವೀಯ ಬಂಧನ ಕೇಂದ್ರಗಳಲ್ಲಿ ಇರಿಸುವುದು ಇತ್ಯಾದಿ ಕ್ರಮಗಳು “ಪ್ರಪಂಚದ ಅತ್ಯಂತ ಮುಂದುವರಿದ ಪ್ರಜಾಪ್ರಭುತ್ವ”ದಲ್ಲಿ ನಡೆಯುತ್ತಿದೆ ಎಂದರೆ, ಪ್ರಜಾಪ್ರಭುತ್ವ ಈಗಷ್ಟೇ ಬೆಳೆಯುತ್ತಿರುವ ಮತ್ತು ಸರ್ವಾಧಿಕಾರಿ ದೇಶಗಳ ಪ್ರಜೆಗಳ ಪಾಡೇನು?

ಒಳನುಸುಳುವಿಕೆ ಮತ್ತು ಜನಾಂಗೀಯ ಭಯೋತ್ಪಾದನೆ”
​ICEಯ ಒಳಗೆ ತೀವ್ರ ಬಲಪಂಥೀಯ ಜನರು ನುಸುಳಿದ್ದಾರೆ ಎಂಬ ಕಳವಳಗಳು ಹೆಚ್ಚುತ್ತಿವೆ.  “MAGA” (ಟ್ರಂಪ್‌ನ Make America Great Again) ಗೂಂಡಾಗಳು ಮತ್ತು “ಪೇಟ್ರಿಯಾಟ್ ಫ್ರಂಟ್‌”ನಂತಹ ಉಗ್ರಗಾಮಿ ಗುಂಪುಗಳ ಸದಸ್ಯರು ಕಾನೂನು ಜಾರಿಗೊಳಿಸುವ  ಸಂಸ್ಥೆಗಳನ್ನು ಯಶಸ್ವಿಯಾಗಿ ಪ್ರವೇಶಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಅನೇಕ ವಿಮರ್ಶಕರು ಇದನ್ನು “ರಾಜ್ಯ ಪ್ರಾಯೋಜಿತ ಸೌಮ್ಯ ಜನಾಂಗೀಯ ಭಯೋತ್ಪಾದನೆ” ಎಂದು ಬಣ್ಣಿಸುತ್ತಾರೆ. ಅಂದರೆ, ಅಲ್ಪಸಂಖ್ಯಾತ ಸಮುದಾಯಗಳನ್ನು ನಿರಂತರ ಭಯದ ಸ್ಥಿತಿಯಲ್ಲಿಡಲು ಸರಕಾರವು ತನ್ನ ಅಧಿಕೃತ ಉಪಕರಣವನ್ನು ಬಳಸುವ ತಂತ್ರ. ಏಜೆಂಟರು ಶ್ವೇತಭವನದ ಬೆಂಬಲದೊಂದಿಗೆ ಅತಿಯಾದ ಬಲಪ್ರಯೋಗ ಅಥವಾ ಜನಾಂಗೀಯ ನಿಂದನೆಯನ್ನು ಬಳಸಿದಾಗ, “ಕಾನೂನು ಜಾರಿ” ಮತ್ತು “ರಾಜಕೀಯ ದರೋಡೆ”ಯ ನಡುವಿನ ರೇಖೆಯು ಕಣ್ಮರೆಯಾಗುತ್ತದೆ.

ಹಿಟ್ಲರ್‌ನ SS ಗೂಂಡಾಗಳು
ಪ್ರಸ್ತುತ ಘಟನೆಗಳು ಮತ್ತು 20ನೇ ಶತಮಾನದ ಫ್ಯಾಸಿಸಂನ ಉದಯದ ಹೊತ್ತಿನ ನಡುವೆ ಭಯಾನಕ ಸಮಾನಾಂತರಗಳನ್ನು ಇತಿಹಾಸಕಾರರು ಈಗಾಗಲೇ ಚಿತ್ರಿಸಲು ಪ್ರಾರಂಭಿಸಿದ್ದಾರೆ. 1920ರ ದಶಕದಲ್ಲಿ, ನಾಜಿ ಪಕ್ಷವು “ಬ್ರೌನ್‌ಶರ್ಟ್‌ಗಳು” ಎಂದು ಕರೆಯಲ್ಪಡುವ “ಸ್ವಯಂಸೇವಕ” “ಸ್ಟರ್ಮಾಬ್ಟೀಲುಂಗ್” (SA) ಎಂಬ ಬಜರಂಗಿಗಳಂತಾ ಜನಾಂಗೀಯವಾದಿ ಗೂಂಡಾಗಳನ್ನು ಬಳಸಿತು. ಇವು ರಾಜಕೀಯ ವಿರೋಧಿಗಳನ್ನು ನಿಗ್ರಹಿಸಲು ಹಿಂಸೆ ಮತ್ತು ಬೆದರಿಕೆಯನ್ನು ಬಳಸುವ ಅರೆಸೈನಿಕ ಗುಂಪುಗಳಾಗಿದ್ದವು. ಕಾಲಾನಂತರದಲ್ಲಿ, SA ಅಧಿಕೃತ ಸರಕಾರದ ಪಡೆಗಳಲ್ಲಿ ವಿಲೀನವಾಯಿತು ಮತ್ತು SS ಆಗಿ ವಿಕಸನಗೊಂಡಿತು, ಇದು ಕಾನೂನನ್ನು ಮೀರಿ ಕಾರ್ಯನಿರ್ವಹಿಸಿ, ಲಕ್ಷಾಂತರ ಜನರನ್ನು ಕೊಂದ ಕ್ರೂರ, ಭಯಾನಕ ಪಡೆಯಾಗಿದೆ. ಆರೆಸ್ಸೆಸ್ಸಿನ ಮೂಲ ಪ್ರೇರಣೆ ಇದೇ ಎಂಬುದನ್ನು ನಾವು ನೆನಪಿಲ್ಲಿ ಇಡೋಣ. (ಎಂ.ಎಸ್. ಗೋಲ್ವಾಳ್ಕರ್ ಪುಸ್ತಕಗಳನ್ನು ನೋಡಿ.)

ಆಧುನಿಕ ಯುಎಸ್ಎಯಲ್ಲಿ ಈ ಸಮಾನಾಂತರವು- MAGA ಮತ್ತದರ ಪರಿವಾರ ಗುಂಪುಗಳು ಮತ್ತು ಫೆಡರಲ್ ಸಂಸ್ಥೆಗಳು ಬಲಪಂಥೀಯ ನೀತಿಗಳ ಜಾರಿಗೆ ಜೊತೆಜೊತೆಯಾಗಿ ಕೆಲಸ ಮಾಡುವಾಗ ಸ್ಪಷ್ಟವಾಗಿ ಕಾಣುತ್ತವೆ. ICE ಏಜೆಂಟ್‌ಗಳು – ಮುಖವಾಡ ಧರಿಸಿ, ಮಿಲಿಟರಿ ಸಲಕರಣೆಗಳಿಂದ ಶಸ್ತ್ರಸಜ್ಜಿತರಾಗಿ, ಪೊಳ್ಳು ರಾಷ್ಟ್ರೀಯತಾವಾದಿ ಸಿದ್ಧಾಂತದಿಂದ ಪ್ರೇರಿತರಾಗಿ- ಸ್ಥಳೀಯ ಆಡಳಿತದ ಮೂಗಿನಡಿ ಹೊಣೆಗಾರಿಕೆಯಿಲ್ಲದೆ ರಾಜಾರೋಷವಾಗಿ ಕಾರ್ಯನಿರ್ವಹಿಸಿದಾಗ, ಅವರು- ಫ್ಯಾಸಿಸ್ಟ್ ಆಡಳಿತಗಳು “ಸೈದ್ಧಾಂತಿಕ ಶುದ್ಧತೆ”ಯನ್ನು ಜಾರಿಗೊಳಿಸಲು ಬಳಸುವ “ಫ್ಲೈಯಿಂಗ್ ಸ್ಕ್ವಾಡ್”ಗಳನ್ನು ನೆನಪಿಗೆ ತರುತ್ತಾರೆ. ವಲಸಿಗರನ್ನು ಬಣ್ಣಿಸಲು ಆಡಳಿತವು ಬಳಸುತ್ತಿರುವ ಅಮಾನವೀಯ ಭಾಷೆಯೇ (filth-ಕೊಳಕು) ಈ ಹೋಲಿಕೆಯನ್ನು ಮತ್ತಷ್ಟು ದೃಢಪಡಿಸುತ್ತದೆ.

ಅಡ್ಡಹಾದಿಯಲ್ಲಿ ಪ್ರಜಾಪ್ರಭುತ್ವ
​ICEಯ ಪ್ರಸ್ತುತ ದಾರಿಯು ಯುಎಸ್ಎಯ ಪ್ರಜಾಪ್ರಭುತ್ವಕ್ಕೆ ಮತ್ತು ಅದರಿಂದ ಪ್ರಭಾವಿತವಾದ ದೇಶಗಳ ಪ್ರಜಾಪ್ರಭುತ್ವಗಳಿಗೆ ಕರಾಳ ಭವಿಷ್ಯವನ್ನು ಸೂಚಿಸುತ್ತದೆ. ಒಂದು ಫೆಡರಲ್ ಏಜೆನ್ಸಿಗೆ ಅಧ್ಯಕ್ಷರಿಗೆ ಮಾತ್ರ ಉತ್ತರಿಸಬಹುದಾದ ಮತ್ತು ರಾಜ್ಯ ಮೇಲ್ವಿಚಾರಣೆಯಿಂದ ವಿನಾಯಿತಿ ಹೊಂದಿರುವ “ರಹಸ್ಯ ಪೊಲೀಸ್” ರೀತಿಯಲ್ಲಿ ಕಾರ್ಯನಿರ್ವಹಿಸಲು ಅಧಿಕಾರ ನೀಡಿದಾಗ, ಅದು ಟ್ರಂಪ್ ಸರಕಾರವು ಸರ್ವಾಧಿಕಾರದ ಕಡೆಗೆ ಹೆಜ್ಜೆ ಇಡುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ.

​ಇದು ಕ್ರಮೇಣ ಅಲ್ಲಿ ಮಿಲಿಟರೀಕೃತ ನಾಗರಿಕ ಜೀವನದ ಶಾಶ್ವತ ಸ್ಥಿತಿಗೆ ಕಾರಣವಾಗಬಹುದು. ಅಲ್ಲಿ ಪೌರತ್ವವು ಇನ್ನು ಮುಂದೆ ಸರಕಾರಿ ಹಿಂಸಾಚಾರದಿಂದ ಒಬ್ಬ ವ್ಯಕ್ತಿಯನ್ನು ರಕ್ಷಿಸುವುದಿಲ್ಲ. ರೆನೀ ನಿಕೋಲ್ ಗುಡ್ ಅವರ ಕೊಲೆ ಈ ನಿಟ್ಟಿನಲ್ಲಿ ಒಂದು ಗಂಭೀರ ಎಚ್ಚರಿಕೆಯಾಗಿದೆ. ಒಂದು ದೇಶವು ತನ್ನ ಸ್ವಂತ ನಿವಾಸಿಗಳನ್ನು ರಾಜ್ಯದ ಶತ್ರುಗಳೆಂದು ಪರಿಗಣಿಸಿ ಕೊಲ್ಲಲು ಪ್ರಾರಂಭಿಸಿದಾಗ, ಅದು ನಿಜವಾದ ಪ್ರಜಾಪ್ರಭುತ್ವವನ್ನು ಕೊಂದು ಸರ್ವಾಧಿಕಾರತ್ವದ ಪಾತಾಳಕ್ಕೆ ಇಳಿಯಲು ಪ್ರಾರಂಭಿಸುತ್ತದೆ. ನಾವು ಭಾರತೀಯರೂ ಇಂತಾ ಅಪಾಯಕಾರಿ ಬೆಳವಣಿಗೆಗಳ ಬಗ್ಗೆ ಜಾಗ್ರತರಾಗಿ ವಿರೋಧಿಸದಿದ್ದರೆ, ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗಳಿಗೆ ಭವಿಷ್ಯವಿಲ್ಲ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page