Sunday, June 23, 2024

ಸತ್ಯ | ನ್ಯಾಯ |ಧರ್ಮ

ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ರಾಜ್ಯದಲ್ಲಿ ಅವಕಾಶವಿಲ್ಲ – ಡಿ ಕೆ ಶಿವಕುಮಾರ್

ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ʼರಾಷ್ಟ್ರೀಯ ಶಿಕ್ಷಣ ನೀತಿʼಯನ್ನು ರದ್ದುಗೊಳಿಸಲಾಗುವುದು ಎಂದು ಸೋಮವಾರ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಇವರು ರಾಜ್ಯದಲ್ಲಿ ʼರಾಜ್ಯ ಶಿಕ್ಷಣ ನೀತಿ – ಎಸ್.ಎ.ಪಿʼಯನ್ನು ಜಾರಿಗೊಳಿಸುವ ಸೂಚನೆಯನ್ನು ನೀಡಿದ್ದಾರೆ.

ಮಾಧ್ಯಮಗಳನ್ನು ಉದ್ದೇಶಿಸಿ ಡಿಕೆ ಶಿವಕುಮಾರ್ “ಕರ್ನಾಟಕ ಸರ್ಕಾರವು ಉಪಕುಲಪತಿಗಳು ಮತ್ತು ನಮ್ಮ ಅಧಿಕಾರಿಗಳು ಸೇರಿದಂತೆ ವಿವಿಧ ಶಿಕ್ಷಣ ತಜ್ಞರೊಂದಿಗೆ ಸಭೆ ನಡೆಸಿದೆ. ಎನ್ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಯನ್ನು 2021ರಲ್ಲಿ ಬಿಜೆಪಿ ತಂದಿದೆ. ಆದರೆ ಬಿಜೆಪಿ ಆಡಳಿತದ ಯಾವುದೇ ರಾಜ್ಯಗಳಿಗೂ ಇದರಲ್ಲಿ ಆಸಕ್ತಿ ವಹಿಸಿಲ್ಲ. ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳು ಎನ್‌ಇಪಿಯನ್ನು ತಿರಸ್ಕರಿಸಿವೆ. ನಾವು ಪಾಲಿಸಿಯ ಎಲ್ಲಾ ಅಂಶಗಳನ್ನು ಪರಿಶೀಲಿಸಿದ್ದೇವೆ ಮತ್ತು ನಾವು ಎನ್‌ಇಪಿಯನ್ನು ರದ್ದುಗೊಳಿಸಲಿದ್ದೇವೆ. ಮುಂದಿನ ವರ್ಷದಿಂದ ನಾವು ನಮ್ಮದೇ ಆದ ಶಿಕ್ಷಣ ನೀತಿಯನ್ನು ತರುತ್ತೇವೆ. ಅದಕ್ಕಾಗಿ ಒಂದು ವಾರದೊಳಗೆ ನಾವು ಸಮಿತಿಯನ್ನು ರಚಿಸುತ್ತೇವೆ,” ಎಂದು ಹೇಳಿದರು.

ಎಸ್‌ಇಪಿಯನ್ನು ಜಾರಿಗೊಳಿಸುವುದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಚುನಾವಣಾ ಭರವಸೆಯಾಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ಶಾಲಾ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳನ್ನು ರದ್ದುಗೊಳಿಸುವುದಾಗಿ ಪಕ್ಷವು ಭರವಸೆ ನೀಡಿತ್ತು.

ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಆಗಸ್ಟ್ 2021 ರಲ್ಲಿ ಉನ್ನತ ಶಿಕ್ಷಣದಲ್ಲಿ ಎನ್.ಇ.ಪಿಯನ್ನು ಅಳವಡಿಸಿಕೊಂಡಿತ್ತು. ಈ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕವಾಗಿದೆ. ಕಾಂಗ್ರೆಸ್ ಎನ್.ಇ.ಪಿಯನ್ನು “ನಾಗ್ಪುರ ಶಿಕ್ಷಣ ನೀತಿ” ಎಂದು ಕರೆದಿತ್ತು.

Related Articles

ಇತ್ತೀಚಿನ ಸುದ್ದಿಗಳು