Monday, February 23, 2026

ಸತ್ಯ | ನ್ಯಾಯ |ಧರ್ಮ

ನೇಪಾಳ: ನದಿಗೆ ಉರುಳಿದ ಬಸ್ – 18 ಜನರ ಸಾವು

ನೇಪಾಳದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಸ್ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ 18 ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ 28 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ನೇಪಾಳದ ಧಾಡಿಂಗ್ ಜಿಲ್ಲೆಯ ತೃಶೂಲಿ ನದಿಗೆ ಬಸ್ ಉರುಳಿ ಈ ಅವಘಡ ಸಂಭವಿಸಿದೆ. ಭಾನುವಾರ ರಾತ್ರಿ ಪೋಖರಾದಿಂದ ಕಠ್ಮಂಡುವಿಗೆ 45 ಪ್ರಯಾಣಿಕರೊಂದಿಗೆ ಹೊರಟಿದ್ದ ಬಸ್, ಇಂದು ಮುಂಜಾನೆ ಒಂದು ಗಂಟೆಯ ಸುಮಾರಿಗೆ ಬೆನಿಘಾಟ್ ರೋರಾಂಗ್ ಸಮೀಪದ ತೃಶೂಲಿ ನದಿಗೆ ನಿಯಂತ್ರಣ ತಪ್ಪಿ ಬಿದ್ದಿದೆ. ಪ್ರಯಾಣಿಕರು ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಸುಮಾರು 18 ಜನರು ಮೃತಪಟ್ಟಿದ್ದರು.

ಗಾಯಗೊಂಡಿರುವ 25ಕ್ಕೂ ಹೆಚ್ಚು ಜನರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮೃತರ ಪೈಕಿ ನ್ಯೂಜಿಲೆಂಡ್ ಮೂಲದ ಪ್ರವಾಸಿಗರೊಬ್ಬರು ಸೇರಿದ್ದಾರೆ. ಗಾಯಗೊಂಡವರಲ್ಲಿ ಜಪಾನ್ ಮತ್ತು ಡಚ್ ಮೂಲದ ಪ್ರಜೆಗಳಿದ್ದಾರೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನೇಪಾಳ ಸೈನ್ಯ, ಸಶಸ್ತ್ರ ಪೊಲೀಸ್ ಪಡೆ ಮತ್ತು ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡರು. ಘಟನೆಯು ರಾತ್ರಿ ವೇಳೆ ನಡೆದಿದ್ದರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಅಡಚಣೆಯಾಯಿತು. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತಿ ವೇಗವೇ ಈ ಅಪಘಾತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.


Related Articles

ಇತ್ತೀಚಿನ ಸುದ್ದಿಗಳು

You cannot copy content of this page