ನೇಪಾಳದಲ್ಲಿ ಭೋಟೆಕೋಶಿ ನದಿ ದಿಢೀರ್ ಪ್ರವಾಹ: 8 ಮಂದಿ ಸಾವು, 100ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

ನೇಪಾಳದ ರಸುವಾ ಜಿಲ್ಲೆಯಲ್ಲಿ ಭೋಟೆಕೋಶಿ ನದಿಯ ದಿಢೀರ್ ಪ್ರವಾಹಕ್ಕೆ (ಫ್ಲ್ಯಾಶ್ ಫ್ಲಡ್) ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ (ಆಗಸ್ಟ್ 26) ಮುಂಜಾನೆ ಟಿಬೆಟ್ ಕಡೆಯಿಂದ ಹರಿದುಬಂದ ಭಾರಿ ಪ್ರಮಾಣದ ನೀರು ಉತ್ತರ ನೇಪಾಳದಲ್ಲಿ ವ್ಯಾಪಕ ವಿನಾಶವನ್ನುಂಟುಮಾಡಿದೆ. ರಸ್ತೆಗಳು, ಸೇತುವೆಗಳು ಮತ್ತು ವಿದ್ಯುತ್ ಮೂಲಸೌಕರ್ಯಗಳು ಕೊಚ್ಚಿಹೋಗಿದ್ದು, ನದಿ ತೀರದ ಕೆಳಭಾಗದ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ ಸುಮಾರು 9 ಗಂಟೆಗೆ ಭೋಟೆಕೋಶಿ ನದಿಯಲ್ಲಿ ದಿಢೀರನೆ ನೀರಿನ ಮಟ್ಟ ಏರಿಕೆಯಾಗಿದೆ. ಟಿಬೆಟ್ ಭಾಗದಲ್ಲಿ ಹಿಮನದಿ (ಗ್ಲೇಸಿಯರ್) ಕರಗಿದ್ದೇ ಈ ಪ್ರವಾಹಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಹಿಮ ಸರೋವರ ಒಡೆದು ಸಂಭವಿಸುವ ಪ್ರವಾಹವೇ (GLOF – Glacial Lake Outburst Flood) ಅಥವಾ ಭೂಕುಸಿತದಿಂದ ನದಿಯ ಹರಿವು ಕಟ್ಟಿಬಿದ್ದು ಉಂಟಾದ ಪ್ರವಾಹವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಟಿಬೆಟ್‌ನಲ್ಲಿ ಹುಟ್ಟುವ ಈ ನದಿಯು ನೇಪಾಳದಲ್ಲಿ ತ್ರಿಶೂಲಿ ನದಿಯನ್ನು ಸೇರಿ, ಮುಂದೆ ಭಾರತಕ್ಕೆ ಗಂಡಕ್ ನದಿಯಾಗಿ ಪ್ರವೇಶಿಸುತ್ತದೆ.

ನದಿಯ ನೀರಿನ ಮಟ್ಟ ದಿಢೀರನೆ ಏರಿದ್ದರಿಂದ ರಸುವಾ ಜಿಲ್ಲೆಯ ತಿಮುರೆ ಮತ್ತು ಸ್ಯಾಫ್ರುಬೇಸಿ ಪ್ರದೇಶಗಳಲ್ಲಿ ಭಾರಿ ಹಾನಿಯಾಗಿದೆ. ವಾಹನಗಳು, ಸರಕುಗಳು ಹಾಗೂ ನೂತನವಾಗಿ ನಿರ್ಮಿಸಲಾಗಿದ್ದ ಸೇತುವೆಯೊಂದು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ ಎಂದು ನೇಪಾಳ ಸೇನೆ ಮತ್ತು ಸುಂಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಜಲವಿದ್ಯುತ್ ಯೋಜನೆಗಳು ಮತ್ತು ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿರುವುದರಿಂದ ಸುಮಾರು 430 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ನೇಪಾಳದ ಇಂಧನ ಸಚಿವಾಲಯ ಮಾಹಿತಿ ನೀಡಿದೆ.

ಪೊಲೀಸ್ ವಕ್ತಾರ ಅಬಿ ನಾರಾಯಣ್ ಕಾಫ್ಲೆ ಅವರ ಪ್ರಕಾರ ಇದುವರೆಗೆ 8 ಶವಗಳು ಪತ್ತೆಯಾಗಿವೆ. ರಸುವಾದಲ್ಲಿ ನೇಪಾಳದ 26 ಪೊಲೀಸರು ಮತ್ತು 7 ಸಶಸ್ತ್ರ ಪೊಲೀಸ್ ಪಡೆ (APF) ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಇದರ ಜೊತೆಗೆ 100ಕ್ಕೂ ಹೆಚ್ಚು ಭಾರತೀಯ ನಾಗರಿಕರು ಕಾಣೆಯಾಗಿದ್ದು, ನೇಪಾಳದ ಗಡಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶ ಮತ್ತು ಬಿಹಾರದ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ನೇಪಾಳ ಸೇನೆಯು ಬುಧವಾರ ಮಧ್ಯಾಹ್ನದ ವೇಳೆಗೆ ಕನಿಷ್ಠ 25 ಜನರನ್ನು ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದ್ದರೂ, ತೀವ್ರ ಬಾಧಿತ ಪ್ರದೇಶಗಳಾದ ಸ್ಯಾಫ್ರುಬೇಸಿ ಮತ್ತು ತಿಮುರೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಹೆಲಿಕಾಪ್ಟರ್ ಲ್ಯಾಂಡಿಂಗ್ ಕಷ್ಟಕರವಾಗಿತ್ತು. ರಸುವಾ, ನುವಾಕೋಟ್, ಧಾಡಿಂಗ್, ಚಿತ್ವಾನ್ ಮತ್ತು ಗೋರ್ಖಾ ಜಿಲ್ಲೆಗಳ ನದಿ ತೀರದ ನಿವಾಸಿಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (NDRRM) ಸುರಕ್ಷಿತ ಸ್ಥಳಗಳಲ್ಲಿರುವಂತೆ ಎಚ್ಚರಿಕೆ ನೀಡಿದೆ. ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸೂಚನೆಯಂತೆ ಸೇನೆ ಮತ್ತು ಪೊಲೀಸರು ತುರ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರವಾಹದಿಂದಾಗಿ ಟಿಬೆಟ್ ಭಾಗದಲ್ಲೂ ಭಾರಿ ಹಾನಿಯಾಗಿದ್ದು, ಚೀನಾ-ನೇಪಾಳ ಗಡಿ ಭಾಗದ ಗೈರಾಂಗ್ ಬಂದರಿನಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ರಸುವಾ ಜಿಲ್ಲೆಯಲ್ಲಿ ಮಳೆ ಬರದಿದ್ದರೂ ನದಿಯಲ್ಲಿ ಈ ಪ್ರಮಾಣದ ಪ್ರವಾಹ ಬಂದಿರುವುದು ಹಿಮನದಿಯ ಒಡಕು ಅಥವಾ ಸರೋವರದ ಒಡೆತದ ಪರಿಣಾಮವೆಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವರ್ಷವೂ ಇದೇ ಭೋಟೆಕೋಶಿ ನದಿಯಲ್ಲಿ ಸೂಪ್ರಾ-ಗ್ಲೇಸಿಯಲ್ ಸರೋವರ ಒಡೆದು 10 ಮಂದಿ ಪ್ರಾಣ ಕಳೆದುಕೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು