ದೆಹಲಿ: ದೇಶದ 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾಗಿ ವಿವೇಕ್ ಜೋಶಿ ಬುಧವಾರ ಅಧಿಕಾರ ವಹಿಸಿಕೊಂಡರು. ಕೇಂದ್ರ ಸರ್ಕಾರ ಸೋಮವಾರ ರಾತ್ರಿ ಇಬ್ಬರನ್ನೂ ಅವರವರ ಹುದ್ದೆಗಳಿಗೆ ನೇಮಕ ಮಾಡಿ ಅಧಿಕೃತ ಪ್ರಕಟಣೆಗಳನ್ನು ಹೊರಡಿಸಿತ್ತು.
ಇಲ್ಲಿಯವರೆಗೆ ಚುನಾವಣಾ ಆಯುಕ್ತರಾಗಿದ್ದ ಜ್ಞಾನೇಶ್ ಅವರನ್ನು ಸಿಇಸಿಯಾಗಿ ಬಡ್ತಿ ನೀಡಲಾಯಿತು ಮತ್ತು ವಿವೇಕ್ ಜೋಶಿ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು. ಜೋಶಿ ಈ ಹಿಂದೆ ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಸುಖಬೀರ್ ಸಿಂಗ್ ಸಂಧು ಚುನಾವಣಾ ಆಯೋಗದಲ್ಲಿ ಮತ್ತೊಬ್ಬ ಆಯುಕ್ತರಾಗಿ ಮುಂದುವರಿದಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಸದಸ್ಯರ ನೇಮಕಾತಿಗಾಗಿ 2023 ರ ಕಾಯಿದೆಯ ನಿಬಂಧನೆಗಳನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮುಂದೂಡಿದೆ.
ಹೋಳಿ ರಜೆಯ ನಂತರ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ತಿಳಿಸಿದೆ.
ಸಿಇಸಿ ಮತ್ತು ಇಸಿ ಆಯ್ಕೆ ಸಮಿತಿಯಲ್ಲಿ ಸಿಜೆಐ ಅವರನ್ನು ಕೂಡ ಸೇರಿಸಬೇಕೆಂಬ ಸುಪ್ರೀಂ ಕೋರ್ಟ್‌ನ ಸಲಹೆಯನ್ನು 2023 ರ ಕಾಯ್ದೆಯಲ್ಲಿ ಸೇರಿಸಲಾಗಿಲ್ಲ ಎಂದು ಆರೋಪಿಸಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದರು.