Home ದೇಶ ಜಾರ್ಖಂಡ್ ನಲ್ಲಿ ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆ ರದ್ದಾದ ಬೆನ್ನಲ್ಲೇ ಹೊಸ ವಿವಾದ ; 2,000 ನೌಕರರು ಬೀದಿಗಿಳಿದು...

ಜಾರ್ಖಂಡ್ ನಲ್ಲಿ ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆ ರದ್ದಾದ ಬೆನ್ನಲ್ಲೇ ಹೊಸ ವಿವಾದ ; 2,000 ನೌಕರರು ಬೀದಿಗಿಳಿದು ಪ್ರತಿಭಟನೆ

0

ರಾಂಚಿ: ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗದ (ಜೆಎಸ್‌ಎಸ್‌ಸಿ-ಸಿಜಿಎಲ್) ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿರುವ ನಿರ್ಧಾರ ಹೊಸ ಪ್ರತಿಭಟನೆಗೆ ಕಾರಣವಾಗಿದೆ. ಪರೀಕ್ಷೆಯಲ್ಲಿ ಆಯ್ಕೆಯಾಗಿ ಈಗಾಗಲೇ ಸರ್ಕಾರಿ ಸೇವೆಗೆ ಸೇರಿರುವ ಸುಮಾರು 2,000ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಉದ್ಯೋಗ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿ ಧರಣಿ ಆರಂಭಿಸಿದ್ದಾರೆ.

ವಿದ್ಯಾರ್ಥಿ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರ, ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆ ಸೇರಿದಂತೆ 2014ರಿಂದ ಹೊರಗುತ್ತಿಗೆ ಸಂಸ್ಥೆ ಟಿಡಿಪಿಎಲ್ ನಡೆಸಿದ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಸೋಮವಾರ ಘೋಷಿಸಿತ್ತು. ಈ ನಿರ್ಧಾರದಿಂದ ಈಗಾಗಲೇ ನೇಮಕಗೊಂಡಿರುವ ಅಭ್ಯರ್ಥಿಗಳ ಭವಿಷ್ಯ ಪ್ರಶ್ನಾರ್ಥಕವಾಗಿದ್ದು, ರಾಜ್ಯದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಸಚಿವಾಲಯದ ಎದುರು ಜಮಾಯಿಸಿರುವ ನೌಕರರು, ಯಾವುದೇ ತನಿಖೆ ನಡೆಸದೆ ತಮ್ಮನ್ನು ತಪ್ಪಿತಸ್ಥರಂತೆ ಪರಿಗಣಿಸುವುದು ಅನ್ಯಾಯ ಎಂದು ಆರೋಪಿಸಿದ್ದಾರೆ. “ನಾವು ನ್ಯಾಯಾಲಯದ ಆದೇಶ ಹಾಗೂ ನಿಯಮಾನುಸಾರವೇ ನೇಮಕಗೊಂಡಿದ್ದೇವೆ. ನಮ್ಮ ಬಳಿ ಅಗತ್ಯ ದಾಖಲೆಗಳಿವೆ. ಅಕ್ರಮ ನಡೆದಿದ್ದರೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಉದ್ಯೋಗವನ್ನು ಕಸಿಯಬಾರದು” ಎಂದು ಅವರು ಆಗ್ರಹಿಸಿದ್ದಾರೆ.

ಪ್ರತಿಭಟನಾನಿರತ ಅಭ್ಯರ್ಥಿಗಳ ಪ್ರಕಾರ, ಹಲವರು ಈಗಾಗಲೇ ನೇಮಕಾತಿಗೆ ನಿಗದಿಪಡಿಸಿರುವ ವಯೋಮಿತಿಯನ್ನು ದಾಟಿದ್ದಾರೆ. ಹೀಗಾಗಿ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವೂ ಅವರಿಗೆ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವರು ಕೇಂದ್ರ ಸರ್ಕಾರ ಸೇರಿದಂತೆ ಇತರೆ ಪ್ರತಿಷ್ಠಿತ ಹುದ್ದೆಗಳಿಗೆ ರಾಜೀನಾಮೆ ನೀಡಿ ಈ ಸೇವೆಗೆ ಸೇರಿರುವುದಾಗಿ ತಿಳಿಸಿದ್ದಾರೆ.

ಸರ್ಕಾರ ತನ್ನ ಆದೇಶವನ್ನು ಮರುಪರಿಶೀಲಿಸದಿದ್ದರೆ ಉಪವಾಸ ಸತ್ಯಾಗ್ರಹ ಮತ್ತು ಕಾನೂನು ಹೋರಾಟ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ. ಪರೀಕ್ಷೆ ರದ್ದತಿ ನಿರ್ಧಾರವು ಜಾರ್ಖಂಡ್‌ನಲ್ಲಿ ನೇಮಕಾತಿ ಪ್ರಕ್ರಿಯೆಗಳ ವಿಶ್ವಾಸಾರ್ಹತೆ ಮತ್ತು ಉದ್ಯೋಗ ಭದ್ರತೆ ಕುರಿತ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

You cannot copy content of this page

Exit mobile version