ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯಕ್ಕೆ ಹೊಸ ಕರಡು ಅಧಿಸೂಚನೆ: ಕರ್ನಾಟಕದ 20,668 ಚ.ಕಿ.ಮೀ. ಪ್ರದೇಶ ESA ವ್ಯಾಪ್ತಿಗೆ; ಗ್ರಾಮಗಳ ಪಟ್ಟಿಯೂ ಪ್ರಕಟ

ನವದೆಹಲಿ : ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯ (Ecologically Sensitive Area-ESA) ಎಂದು ಘೋಷಿಸುವ ಸಂಬಂಧ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಹೊಸ ಕರಡು ಅಧಿಸೂಚನೆ ಪ್ರಕಟಿಸಿದ್ದು, ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ವ್ಯಾಪಕ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಲು ಮುಂದಾಗಿದೆ. ಕರಡು ಅಧಿಸೂಚನೆಗೆ ಸಾರ್ವಜನಿಕರಿಂದ 60 ದಿನಗಳೊಳಗೆ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕದಲ್ಲಿ ಒಟ್ಟು 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ಗುರುತಿಸಲಾಗಿದ್ದು, ರಾಜ್ಯದ ಹಲವು ಜಿಲ್ಲೆಗಳ ನೂರಾರು ಗ್ರಾಮಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಗ್ರಾಮಗಳ ಪಟ್ಟಿಯನ್ನು ಅಧಿಸೂಚನೆಯ ಅನುಬಂಧ–’ಸಿ’ಯಲ್ಲಿ ರಾಜ್ಯವಾರು, ಜಿಲ್ಲಾವಾರು ಹಾಗೂ ತಾಲ್ಲೂಕುವಾರು ಪ್ರಕಟಿಸಲಾಗಿದೆ.

ಕರ್ನಾಟಕದ ಪಶ್ಚಿಮ ಘಟ್ಟ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳ ಪರಿಸರ ಸೂಕ್ಷ್ಮ ಗ್ರಾಮಗಳ ವಿವರವಾದ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅಂತಿಮ ಅಧಿಸೂಚನೆ ಹೊರಬೀಳುವ ಮೊದಲು ಈ ಪಟ್ಟಿಯ ಕುರಿತು ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

ಕರಡು ಅಧಿಸೂಚನೆಯಲ್ಲಿ ಹೊಸ ಗಣಿಗಾರಿಕೆ, ಕ್ವಾರಿ ಹಾಗೂ ಮರಳು ಗಣಿಗಾರಿಕೆಗೆ ಸಂಪೂರ್ಣ ನಿಷೇಧ ವಿಧಿಸುವ ಪ್ರಸ್ತಾಪ ಮಾಡಲಾಗಿದೆ. ಈಗಿರುವ ಗಣಿಗಳನ್ನು ಐದು ವರ್ಷಗಳೊಳಗೆ ಅಥವಾ ಗುತ್ತಿಗೆ ಅವಧಿ ಮುಗಿದ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗಿದೆ. ಇದೇ ವೇಳೆ ಹೊಸ ಥರ್ಮಲ್ ವಿದ್ಯುತ್ ಸ್ಥಾವರಗಳು, ‘ರೆಡ್’ ವರ್ಗದ ಕೈಗಾರಿಕೆಗಳು ಹಾಗೂ ದೊಡ್ಡ ಪ್ರಮಾಣದ ಕಟ್ಟಡ ಮತ್ತು ಟೌನ್‌ಶಿಪ್ ಯೋಜನೆಗಳಿಗೂ ನಿರ್ಬಂಧ ಹೇರಲಾಗಿದೆ.

ಆದರೆ ಕೃಷಿ, ತೋಟಗಾರಿಕೆ, ಮನೆಗಳ ದುರಸ್ತಿ, ಈಗಿರುವ ಆರೋಗ್ಯ ಸಂಸ್ಥೆಗಳ ಕಾರ್ಯಾಚರಣೆ ಹಾಗೂ ಗ್ರಾಮೀಣ ಜೀವನೋಪಾಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಕರಡು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನಡಿ ‘ಆರೆಂಜ್’ ಮತ್ತು ‘ವೈಟ್’ ವರ್ಗದ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಅರಣ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಬೇಕಾದರೆ ಅರಣ್ಯ ಹಕ್ಕು ಕಾಯ್ದೆಯ ನಿಯಮಗಳನ್ನು ಪಾಲಿಸುವುದು ಹಾಗೂ ಗ್ರಾಮಸಭೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಅಧಿಸೂಚನೆ ತಿಳಿಸಿದೆ.

ಕರಡು ಅಧಿಸೂಚನೆಯ ಪ್ರಕಾರ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯದ ಒಟ್ಟು ವಿಸ್ತೀರ್ಣ 56,825.7 ಚದರ ಕಿಲೋಮೀಟರ್ ಆಗಿದ್ದು, ಇದರಲ್ಲಿ ಕರ್ನಾಟಕದ ಪಾಲು ಅತಿ ಹೆಚ್ಚು ಪ್ರದೇಶಗಳಲ್ಲಿ ಒಂದಾಗಿದೆ. ರಾಜ್ಯವಾರು ಮತ್ತು ಜಿಲ್ಲಾವಾರು ಪರಿಸರ ಸೂಕ್ಷ್ಮ ಗ್ರಾಮಗಳ ಪಟ್ಟಿಯನ್ನು ಪ್ರಕಟಿಸಿರುವ ಕೇಂದ್ರ ಸರ್ಕಾರ, ಸಾರ್ವಜನಿಕರ ಅಭಿಪ್ರಾಯ, ರಾಜ್ಯ ಸರ್ಕಾರಗಳ ಶಿಫಾರಸು ಹಾಗೂ ತಜ್ಞರ ಸಮಿತಿಯ ಸಲಹೆಗಳನ್ನು ಪರಿಗಣಿಸಿ ಅಂತಿಮ ಅಧಿಸೂಚನೆಯನ್ನು ರಾಜ್ಯವಾರು ಅಥವಾ ಒಟ್ಟಾಗಿ ಪ್ರಕಟಿಸುವುದಾಗಿ ತಿಳಿಸಿದೆ.

ಕರ್ನಾಟಕದ ಪರಿಸರ ಸೂಕ್ಷ್ಮ ಗ್ರಾಮಗಳ ಪಟ್ಟಿ ಪ್ರಕಟ
ಈ ಕರಡು ಅಧಿಸೂಚನೆಯ ವಿಶೇಷವೆಂದರೆ, ಕರ್ನಾಟಕದ ಪರಿಸರ ಸೂಕ್ಷ್ಮ ವಲಯಕ್ಕೆ ಸೇರುವ ಗ್ರಾಮಗಳ ಅಧಿಕೃತ ಪಟ್ಟಿಯನ್ನು ಜಿಲ್ಲೆ ಹಾಗೂ ತಾಲ್ಲೂಕುವಾರು ಪ್ರಕಟಿಸಿರುವುದು. ಈ ಪಟ್ಟಿಯ ಆಧಾರದ ಮೇಲೆ ಯಾವ ಗ್ರಾಮಗಳು ESA ವ್ಯಾಪ್ತಿಗೆ ಬರುತ್ತವೆ ಎಂಬುದು ಸ್ಪಷ್ಟವಾಗಿದ್ದು, ಮುಂದಿನ ದಿನಗಳಲ್ಲಿ ಈ ಗ್ರಾಮಗಳ ಬಗ್ಗೆ ಆಕ್ಷೇಪಣೆ ಅಥವಾ ತಿದ್ದುಪಡಿ ಸಲಹೆಗಳನ್ನು ಸಲ್ಲಿಸಲು ಸ್ಥಳೀಯರಿಗೆ ಅವಕಾಶ ಕಲ್ಪಿಸಲಾಗಿದೆ. ಅಂತಿಮ ಅಧಿಸೂಚನೆ ಪ್ರಕಟಿಸುವ ಮುನ್ನ ಈ ಗ್ರಾಮಗಳ ಗಡಿ ಹಾಗೂ ವಿವರಗಳನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಲಿದೆ.

Related Articles

ಇತ್ತೀಚಿನ ಸುದ್ದಿಗಳು