ತಂಬಾಕು, ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಾ ಮೇಲೆ ಹೊಸ ಉಪಕರ (ಸೆಸ್) ವಿಧಿಸುವ ಸಂಬಂಧಿಸಿದ ಮಸೂದೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿದ್ದಾರೆ.
ಜಿಎಸ್‌ಟಿ ದರಗಳನ್ನು ಕಡಿತಗೊಳಿಸಿದ ನಂತರವೂ ಈ ಉತ್ಪನ್ನಗಳ ಬೆಲೆ ಇಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರವು ಇವುಗಳ ಮೇಲೆ ಹೊಸದಾಗಿ ಸೆಸ್ ವಿಧಿಸಲು ನಿರ್ಧರಿಸಿದೆ.
ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣೆ ಸಂದರ್ಭದಲ್ಲೇ ಈ ಉತ್ಪನ್ನಗಳ ಮೇಲೆ ಪರಿಹಾರಾತ್ಮಕ ಸೆಸ್ (Compensation Cess) ವಿಧಿಸುವುದಾಗಿ ಪ್ರಕಟಿಸಿತ್ತು. ಸದ್ಯಕ್ಕೆ 2026ರ ಮಾರ್ಚ್‌ವರೆಗೆ ಈ ಪರಿಹಾರಾತ್ಮಕ ಸೆಸ್ ಅನ್ನು ವಿಧಿಸಲಾಗುತ್ತಿದೆ. ಇದರ ಬದಲಾಗಿ, ಇನ್ನು ಮುಂದೆ ಈ ಉತ್ಪನ್ನಗಳ ಮೇಲೆ ‘ಆರೋಗ್ಯ ಮತ್ತು ಭದ್ರತಾ ಸೆಸ್’ (Health and Security Cess) ರೂಪದಲ್ಲಿ ಸುಂಕ ವಿಧಿಸಲಾಗುತ್ತದೆ.
ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯಕ್ಕಾಗಿ ಸರ್ಕಾರ ಮಾಡುವ ವೆಚ್ಚವನ್ನು ಭರಿಸುವ ಸಲುವಾಗಿ ನಿರ್ದಿಷ್ಟ ಉತ್ಪನ್ನಗಳ ಮೇಲೆ ಈ ಸುಂಕವನ್ನು ವಿಧಿಸಲಾಗುತ್ತಿದೆ ಎಂದು ಲೋಕಸಭೆಗೆ ಸಿದ್ಧಪಡಿಸಿರುವ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ಈ ಸೆಸ್‌ನಿಂದ ಕ್ರೋಢೀಕರಿಸಿದ ಸಂಪನ್ಮೂಲಗಳ ಸಹಾಯದಿಂದ ಸರ್ಕಾರವು ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗಲಿದೆ. ಈ ಮಸೂದೆಗೆ ಚಳಿಗಾಲದ ಅಧಿವೇಶನದಲ್ಲೇ ಅನುಮೋದನೆ ಪಡೆದು, ಅಗತ್ಯ ಬಿದ್ದಾಗ ಹೊಸ ದಿನಾಂಕವನ್ನು ಗುರುತಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸದಲ್ಲಿ ಸರ್ಕಾರವಿದೆ.
ಈ ಉತ್ಪನ್ನಗಳ ಮೇಲೆ ಹೊಸ ಸುಂಕ ವಿಧಿಸುವುದರ ಹಿಂದಿನ ಉದ್ದೇಶ, ಅವುಗಳ ಬೆಲೆಯನ್ನು ಇದೇ ಮಟ್ಟದಲ್ಲಿ ಉಳಿಸಿಕೊಳ್ಳುವುದು. ಇದು ಸರ್ಕಾರಕ್ಕೆ ಆದಾಯ ಹೆಚ್ಚಿಸುವ ಕ್ರಮವಲ್ಲ ಎಂದು ಸರ್ಕಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
