Home ರಾಜಕೀಯ ಜೆಡಿಎಸ್ ಚುನಾವಣಾ ಚಿಹ್ನೆ ಬದಲಾವಣೆಗೆ ಪ್ಲ್ಯಾನ್: 2026ರ ಹೊಸ ವರ್ಷದಲ್ಲಿ ಹೊಸ ಚಿಹ್ನೆ ಬಿಡುಗಡೆ ಸಾಧ್ಯತೆ

ಜೆಡಿಎಸ್ ಚುನಾವಣಾ ಚಿಹ್ನೆ ಬದಲಾವಣೆಗೆ ಪ್ಲ್ಯಾನ್: 2026ರ ಹೊಸ ವರ್ಷದಲ್ಲಿ ಹೊಸ ಚಿಹ್ನೆ ಬಿಡುಗಡೆ ಸಾಧ್ಯತೆ

0

ಜೆಡಿಎಸ್ ಪಕ್ಷ ತನ್ನ ಚುನಾವಣಾ ಚಿಹ್ನೆಯಲ್ಲಿ ಬದಲಾವಣೆ ತರಲು ಪ್ಲ್ಯಾನ್ ರೂಪಿಸುತ್ತಿದೆ. 2026ರ ಹೊಸ ವರ್ಷದಲ್ಲೇ ಪಕ್ಷದ ಚುನಾವಣಾ ಚಿಹ್ನೆಗೆ ಹೊಸ ರೂಪ ನೀಡಲು ಜೆಡಿಎಸ್ ನಿರ್ಧಾರ ಕೈಗೊಂಡಿದೆ. ಸದ್ಯ ಜೆಡಿಎಸ್‌ನ ಅಧಿಕೃತ ಚುನಾವಣಾ ಚಿಹ್ನೆಯಾಗಿ ‘ತೆನೆ ಹೊತ್ತ ಮಹಿಳೆ’ ಗುರುತು ಬಳಕೆಯಲ್ಲಿದೆ. ಇದೀಗ ಈ ಚಿಹ್ನೆಯ ಜೊತೆಗೆ ಪಕ್ಷದ ಹಳೆಯ ‘ಚಕ್ರ’ ಗುರುತನ್ನು ಸೇರಿಸುವ ಕುರಿತು ಚರ್ಚೆ ನಡೆಯುತ್ತಿದೆ.

ನಿನ್ನೆ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಎಚ್.ಡಿ. ದೇವೇಗೌಡರ ಸಲಹೆಯಂತೆ ಈ ವಿಚಾರವನ್ನು ಮುಂದಿಟ್ಟುಕೊಳ್ಳಲಾಗಿದೆ. ಸಭೆಯಲ್ಲಿ ನಡೆದ ಚರ್ಚೆಯ ಬಳಿಕ ಚುನಾವಣಾ ಚಿಹ್ನೆಯಲ್ಲಿ ಸಣ್ಣ ಬದಲಾವಣೆ ಮಾಡಲು ಕೇಂದ್ರ ಚುನಾವಣಾ ಆಯೋಗಕ್ಕೆ ಶೀಘ್ರದಲ್ಲೇ ಅರ್ಜಿ ಸಲ್ಲಿಸಲು ಜೆಡಿಎಸ್ ನಾಯಕತ್ವ ನಿರ್ಧರಿಸಿದೆ. ಚುನಾವಣಾ ಆಯೋಗದಿಂದ ಅನುಮತಿ ದೊರಕಿದ ಕೂಡಲೇ ಜೆಡಿಎಸ್‌ನ ಹೊಸ ಚುನಾವಣಾ ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು.

ಚಿಹ್ನೆ ಬದಲಾವಣೆ ಹಿಂದೆ ಭಾವನಾತ್ಮಕ ಲೆಕ್ಕಾಚಾರಗಳೂ ಇದ್ದು, ‘ತೆನೆ ಹೊತ್ತ ಮಹಿಳೆ’ ಚಿಹ್ನೆಗೆ ‘ಚಕ್ರ’ ಸೇರಿಸಿದರೆ ಚಿಹ್ನೆ ಚಲಿಸುವಂತೆ ಕಾಣುತ್ತದೆ ಎಂಬ ನಂಬಿಕೆ ಪಕ್ಷದ ನಾಯಕರಲ್ಲಿದೆ. ಇದರಿಂದ ಪಕ್ಷಕ್ಕೆ ಸಕಾರಾತ್ಮಕ ಶಕ್ತಿ ಲಭಿಸುತ್ತದೆ ಎಂಬ ಭಾವನೆ ಇದೆ. ಜೊತೆಗೆ, ಚಿಹ್ನೆಗೆ ಪೂರ್ಣ ವೃತ್ತಾಕಾರದ ವಿನ್ಯಾಸ ನೀಡುವುದರಿಂದ ಪಕ್ಷಕ್ಕೆ ಶುಭವಾಗುತ್ತದೆ ಎಂಬ ನಂಬಿಕೆಯೂ ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿದೆ.

ಈ ಮಹತ್ವದ ಬೆಳವಣಿಗೆಯ ಹಿಂದೆ ಯಾವ ಜ್ಯೋತಿಷಿಯ ಸಲಹೆ ಇದೆ ಎಂಬುದು ಈವರೆಗೆ ತಿಳಿದು ಬಂದಿಲ್ಲ.

ಈ ಹಿಂದೆ ಜೆಡಿಎಸ್ ಪಕ್ಷ ‘ಚಕ್ರ’ ಗುರುತನ್ನು ತನ್ನ ಚುನಾವಣಾ ಚಿಹ್ನೆಯಾಗಿ ಹೊಂದಿತ್ತು. ನಂತರ ‘ಟ್ರಾಕ್ಟರ್’ ಗುರುತನ್ನು ಅಳವಡಿಸಿಕೊಂಡಿತ್ತು. ಆದರೆ ಟ್ರಾಕ್ಟರ್‌ಗೆ ಹೋಲುವ ಚಿಹ್ನೆಗಳನ್ನು ಕೆಲವು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಪಡೆದುಕೊಂಡಿದ್ದರಿಂದ, ಜನತಾದಳ ಅಭ್ಯರ್ಥಿಗಳಿಗೆ ಕೆಲವೆಡೆ ಸೋಲು ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆ ಚಿಹ್ನೆ ಬದಲಾವಣೆ ಮಾಡಿ ‘ತೆನೆ ಹೊತ್ತ ಮಹಿಳೆ’ ಗುರುತನ್ನು ಜೆಡಿಎಸ್ ಅಳವಡಿಸಿಕೊಂಡಿತ್ತು.

ಈಗ ಮತ್ತೆ ಆ ತೆನೆ ಹೊತ್ತ ರೈತ ಮಹಿಳೆಯ ಚಿಹ್ನೆಯೊಂದಿಗೆ ‘ಚಕ್ರ’ ಗುರುತನ್ನು ಸೇರಿಸುವ ಹೊಸ ಪ್ರಯೋಗಕ್ಕೆ ಜೆಡಿಎಸ್ ಮುಂದಾಗಿದೆ. ಈ ಚಿಹ್ನೆ ಅಪ್‌ಡೇಟ್ ಪಕ್ಷಕ್ಕೆ ಚುನಾವಣೆಯಲ್ಲಿ ಅದೃಷ್ಟ ತರುತ್ತದೆಯೇ ಎಂಬುದು 2028ರ ವಿಧಾನಸಭಾ ಚುನಾವಣೆಯ ಬಳಿಕವೇ ಗೊತ್ತಾಗಲಿದೆ.

ಕೇಂದ್ರ ಚುನಾವಣಾ ಆಯೋಗದಿಂದ ಬೇಗನೇ ಹೊಸ ಚಿಹ್ನೆಗೆ ಅನುಮತಿ ದೊರೆತರೆ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಜೆಡಿಎಸ್ ಹೊಸ ಚಿಹ್ನೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದು ವೇಳೆ ಅನುಮತಿ ವಿಳಂಬವಾದರೆ, 2028ರ ವಿಧಾನಸಭಾ ಚುನಾವಣೆಗೆ ಹೊಸ ಚಿಹ್ನೆ ಪಡೆದು ಸ್ಪರ್ಧಿಸಲು ಜೆಡಿಎಸ್ ತಯಾರಿ ನಡೆಸಲಿದೆ.

You cannot copy content of this page

Exit mobile version