ನವದೆಹಲಿ: ಉತ್ತರ ಪ್ರದೇಶದ ಝಾನ್ಸಿಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಸಂಭವಿಸಿದ ಬೆಂಕಿಯ ಬಗ್ಗೆ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಆಕ್ರೋಶ ವ್ಯಕ್ತಪಡಿಸಿದೆ.
ಇದೇ ತಿಂಗಳ 15ರಂದು ನಡೆದ ಈ ಭೀಕರ ಘಟನೆಯಲ್ಲಿ 10 ನವಜಾತ ಶಿಶುಗಳು ಮರಣಹೊಂದಿದ್ದವು. ಸಂತ್ರಸ್ತ ಮಕ್ಕಳನ್ನು ರಕ್ಷಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ವರದಿಗಳು ಹೊರಬಿದ್ದಿವೆ. ಪರಾಮರ್ಶೆಗೆ ತೆರಳಿದ ಉಪಮುಖ್ಯಮಂತ್ರಿಗಳಿಗೆ ಅದ್ಧೂರಿ ಸ್ವಾಗತ ವ್ಯವಸ್ಥೆ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಸ್ಪತ್ರೆಯತ್ತ ಕಣ್ಣು ಹಾಯಿಸದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಕ್ಕೆ ಟೀಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎನ್‌ಎಚ್‌ಆರ್‌ಸಿ ರಾಜ್ಯ ಸರ್ಕಾರ ಮತ್ತು ಡಿಜಿಪಿಗೆ ನೋಟಿಸ್ ಜಾರಿ ಮಾಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬರುತ್ತಿರುವ ಸುದ್ದಿ ಆತಂಕಕಾರಿಯಾಗಿದೆ ಎಂದು ಅದು ಹೇಳಿದೆ. ಒಂದು ವಾರದೊಳಗೆ ಸಂಪೂರ್ಣ ವರದಿ ಸಲ್ಲಿಸಬೇಕು. ಅಪಘಾತವು ನಿರ್ಲಕ್ಷ್ಯದ ಕಾರಣದಿಂದಾಗಿ ನಡೆದಿದೆ ಮತ್ತು ಸರ್ಕಾರಿ ಏಜೆನ್ಸಿಯ ಆರೈಕೆಯಲ್ಲಿರುವ ಸಂತ್ರಸ್ತರ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು NHRC ತನ್ನ ನೋಟೀಸ್‌ನಲ್ಲಿ ತಿಳಿಸಿದೆ. ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಸ್ಥಿತಿಗತಿ, ಹೊಣೆಗಾರರ ವಿರುದ್ಧ ಕೈಗೊಂಡ ಕ್ರಮ, ಗಾಯಾಳುಗಳಿಗೆ ಚಿಕಿತ್ಸೆ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಪಾವತಿ ಇತ್ಯಾದಿಗಳನ್ನು ವರದಿಯಲ್ಲಿ ಸೇರಿಸಬೇಕು ಎಂದು ನಿರ್ದೇಶಿಸಿದೆ.