ದೇಶದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ (NEET) ಹಗರಣದ ಬೆನ್ನಲ್ಲೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಇದೀಗ ಮತ್ತೊಂದು ದೊಡ್ಡ ವಿವಾದಕ್ಕೆ ಸಿಲುಕಿದೆ. ಪ್ರತಿಷ್ಠಿತ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ’ (NIFT-2026) ಪ್ರವೇಶ ಪರೀಕ್ಷೆಯ ಫಲಿತಾಂಶ, ಅಂಕಪಟ್ಟಿ ಮತ್ತು ಹಾಜರಾತಿ ದಾಖಲೆಗಳಲ್ಲಿ ಭಾರಿ ಅಕ್ರಮ ಹಾಗೂ ಗೊಂದಲಗಳು ನಡೆದಿವೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.
ಜೂನ್ 3 ರಂದು ಪ್ರಕಟವಾದ ನಿಫ್ಟ್-2026 ಫಲಿತಾಂಶಗಳಲ್ಲಿ ತಮಗೆ ಬಂದಿರುವ ಅಂಕಗಳು ತಮ್ಮ ನಿರೀಕ್ಷೆಗೆ ತದ್ವಿರುದ್ಧವಾಗಿವೆ ಎಂದು ನೂರಾರು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಫ್ಟ್ ಪ್ರವೇಶ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ ಅಭ್ಯರ್ಥಿಗಳು ಜನರಲ್ ಎಬಿಲಿಟಿ ಟೆಸ್ಟ್ (GAT) ಮತ್ತು ಕ್ರಿಯೇಟಿವ್ ಎಬಿಲಿಟಿ ಟೆಸ್ಟ್ (CAT) ಬರೆಯಬೇಕಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರು ಮುಂದಿನ ಸಿಚುಯೇಷನ್ ಟೆಸ್ಟ್‌ಗೆ ಹಾಜರಾಗುತ್ತಾರೆ.
ಸಿಎಟಿ ಮತ್ತು ಜಿಎಟಿ ಅಂಕಗಳಲ್ಲಿ ಭಾರಿ ವ್ಯತ್ಯಾಸ: ಪರೀಕ್ಷೆಯ ಕ್ರಿಯೇಟಿವ್ ಎಬಿಲಿಟಿ ಟೆಸ್ಟ್ (CAT) ಸ್ಕೋರ್‌ಗಳಲ್ಲಿ ಭಾರಿ ತಾರತಮ್ಯ ನಡೆದಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಒಟ್ಟು 3 ಪ್ರಶ್ನೆಗಳನ್ನು ಒಳಗೊಂಡಿರುವ 100 ಅಂಕಗಳ ಈ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಬರೆದು ಹೆಚ್ಚಿನ ಅಂಕಗಳನ್ನು ನಿರೀಕ್ಷಿಸಿದ್ದ ನಮಗೆ ಕೇವಲ 15 ರಿಂದ 17 ಅಂಕಗಳನ್ನು ನೀಡಲಾಗಿದೆ ಎಂದು ಹಲವು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಜನರಲ್ ಎಬಿಲಿಟಿ ಟೆಸ್ಟ್‌ನಂತೆ ಕ್ರಿಯೇಟಿವ್ ಎಬಿಲಿಟಿ ಟೆಸ್ಟ್‌ಗೆ ಯಾವುದೇ ಅಧಿಕೃತ ಕೀ ಉತ್ತರಗಳನ್ನು (Answer Key) ಬಿಡುಗಡೆ ಮಾಡದಿರುವುದರಿಂದ, ಎನ್‌ಟಿಎ ನೀಡಿರುವ ಅಂಕಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ಕಷ್ಟಕರವಾಗಿದೆ. ಇನ್ನು ಜಿಎಟಿ (GAT) ಪರೀಕ್ಷೆಯಲ್ಲೂ ಲೋಪಗಳಾಗಿದ್ದು, ಎನ್‌ಟಿಎ ಬಿಡುಗಡೆ ಮಾಡಿದ್ದ ಅಧಿಕೃತ ಕೀ ಉತ್ತರಗಳೊಂದಿಗೆ ತಾವು ಬರೆದ ಉತ್ತರಗಳನ್ನು ತಾಳೆ ಮಾಡಿ ನೋಡಿದಾಗ ಬರಬೇಕಿದ್ದ ಅಂಕಗಳಿಗಿಂತ, ಅಂತಿಮ ಸ್ಕೋರ್‌ಕಾರ್ಡ್‌ನಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ನಮೂದಿಸಲಾಗಿದೆ ಎಂದು ವಿದ್ಯಾರ್ಥಿಗಳು ಆಪಾದಿಸಿದ್ದಾರೆ.
ಹಾಜರಾತಿ ಮತ್ತು ಬಯೋಮೆಟ್ರಿಕ್‌ನಲ್ಲೂ ಎಡವಟ್ಟು: ಪರೀಕ್ಷೆಯ ದಿನದ ಹಾಜರಾತಿ ದಾಖಲೆಗಳಲ್ಲೂ ಎನ್‌ಟಿಎ ಭಾರಿ ಎಡವಟ್ಟು ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಪರೀಕ್ಷೆಗೆ ಗೈರುಹಾಜರಾಗಿದ್ದ ಕೆಲವು ವಿದ್ಯಾರ್ಥಿಗಳನ್ನು ‘ಹಾಜರ್’ (Present) ಎಂದು ತೋರಿಸಲಾಗಿದ್ದರೆ, ಪರೀಕ್ಷೆಯನ್ನು ಬರೆದಿದ್ದ ಹಲವು ಅಭ್ಯರ್ಥಿಗಳನ್ನು ಸ್ಕೋರ್‌ಕಾರ್ಡ್‌ನಲ್ಲಿ ‘ಗೈರುಹಾಜರು’ (Absent) ಎಂದು ನಮೂದಿಸಲಾಗಿದೆ. ಇದರೊಂದಿಗೆ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಕಡ್ಡಾಯ ಬಯೋಮೆಟ್ರಿಕ್ ಪರಿಶೀಲನೆಯನ್ನೇ ನಡೆಸಲಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಸಮರ್ಥನೆ: ಈ ಎಲ್ಲಾ ಗಂಭೀರ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಎನ್‌ಟಿಎ ಮೂಲಗಳು, ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 12,000 ಅಭ್ಯರ್ಥಿಗಳಲ್ಲಿ ಕೇವಲ 15 ವಿದ್ಯಾರ್ಥಿಗಳು ಮಾತ್ರ ಫಲಿತಾಂಶದ ಸಮಸ್ಯೆಗೆ ಸಂಬಂಧಿಸಿದಂತೆ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಿದ್ದಾರೆ ಎಂದು ತಿಳಿಸಿವೆ. ತಮಗೆ ಬಂದಿರುವ ಇಂತಹ ಎಲ್ಲಾ ದೂರುಗಳನ್ನು ಈಗಾಗಲೇ ಪರಿಶೀಲಿಸಿ ಬಗೆಹರಿಸಲಾಗಿದೆ ಎಂದು ಎನ್‌ಟಿಎ ಸಮರ್ಥಿಸಿಕೊಂಡಿದೆ. ಆದರೆ, ಎನ್‌ಟಿಎ ಹೇಳಿಕೆಯನ್ನು ತಳ್ಳಿಹಾಕಿರುವ ವಿದ್ಯಾರ್ಥಿಗಳು, ತಾವು ಇಮೇಲ್ ಮತ್ತು ಫೋನ್ ಕರೆಗಳ ಮೂಲಕ ಸಂಸ್ಥೆಯನ್ನು ಹಲವು ಬಾರಿ ಸಂಪರ್ಕಿಸಿದ್ದರೂ ತಮ್ಮ ಅಂಕಗಳ ವ್ಯತ್ಯಾಸದ ಕುರಿತು ಯಾವುದೇ ತೃಪ್ತಿಕರ ವಿವರಣೆ ಸಿಕ್ಕಿಲ್ಲ ಮತ್ತು ತಮ್ಮ ದೂರುಗಳು ಇನ್ನು ಇತ್ಯರ್ಥವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
