Home ಅಪಘಾತ ಸಹಾರಾ ಮರುಭೂಮಿ: ಲಾರಿ ಕೆಟ್ಟು ನಿಂತು ಬಿಸಿಲು, ದಾಹಕ್ಕೆ ತತ್ತರಿಸಿ ಮಹಿಳೆಯರು, ಮಕ್ಕಳು ಸೇರಿ 49...

ಸಹಾರಾ ಮರುಭೂಮಿ: ಲಾರಿ ಕೆಟ್ಟು ನಿಂತು ಬಿಸಿಲು, ದಾಹಕ್ಕೆ ತತ್ತರಿಸಿ ಮಹಿಳೆಯರು, ಮಕ್ಕಳು ಸೇರಿ 49 ಮಂದಿ ಸಾವು!

0

ನಿಯಾಮೆ (ನೈಜರ್): ಸಹಾರಾ ಮರುಭೂಮಿಯಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ಮಾಲಿ ದೇಶದಲ್ಲಿ ಹಬ್ಬದ ಆಚರಣೆಗಳನ್ನು ಮುಗಿಸಿಕೊಂಡು ವಾಪಸ್ ಪ್ರಯಾಣಿಸುತ್ತಿದ್ದ ಜನರನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಮರುಭೂಮಿಯ ನಡುಬೊಡ್ಡಿನಲ್ಲಿ ಕೆಟ್ಟು ನಿಂತಿದ್ದರಿಂದ, ತೀವ್ರವಾದ ಬಿಸಿಲು ಮತ್ತು ಕುಡಿಯುವ ನೀರಿಲ್ಲದೆ ದಾಹಕ್ಕೆ ತತ್ತರಿಸಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 49 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಉತ್ತರ ನೈಜರ್‌ನ ಅಸ್ಸಾವಾಕಾ ಪಟ್ಟಣದ ಪಶ್ಚಿಮಕ್ಕೆ ಸುಮಾರು 80 ಕಿಲೋಮೀಟರ್ ದೂರದಲ್ಲಿ, ಆಲ್ಜೀರಿಯಾ ದೇಶದ ಗಡಿಯ ಸಮೀಪ ಈ ಭೀಕರ ದುರಂತ ಸಂಭವಿಸಿದೆ. ಈ ಘೋರ ಪ್ರಾಣಾಪಾಯದಿಂದ ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಪವಾಡಸದೃಶವಾಗಿ ಪ್ರಾಣದೊಂದಿಗೆ ಪಾರಾಗಿದ್ದಾರೆ. ಲಾರಿ ಕೆಟ್ಟು ನಿಂತ ನಂತರ ತೀವ್ರ ಆತಂಕದ ನಡುವೆಯೇ ಸಹಾಯಕ್ಕಾಗಿ ಹುಡುಕುತ್ತಾ ಮರುಭೂಮಿಯ ಉರಿಬಿಸಿಲಿನ ಇಸುಕಿನಲ್ಲೇ ಈ ಇಬ್ಬರು ಸುಮಾರು 50 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ. ಕೊನೆಗೆ ಅಸ್ಸಾವಾಕಾ ಪಟ್ಟಣವನ್ನು ತಲುಪಿ ಸ್ಥಳೀಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ ನಂತರವೇ ಈ ಇಡೀ ದುರಂತದ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

ಮರುಭೂಮಿಯಲ್ಲೇ ಸಾಹೂಹಿಕ ಅಂತ್ಯಸಂಸ್ಕಾರ: ಮಾಹಿತಿ ತಿಳಿದ ತಕ್ಷಣವೇ ರಕ್ಷಣಾ ಪಡೆಗಳು ಹಾಗೂ ಅಧಿಕಾರಿಗಳ ತಂಡವು ತೀವ್ರ ಕಾರ್ಯಾಚರಣೆ ನಡೆಸಿ ಘಟನಾ ಸ್ಥಳಕ್ಕೆ ಧಾವಿಸಿದೆ. ಆದರೆ, ದುರದೃಷ್ಟವಶಾತ್ ಅಷ್ಟರಲ್ಲೇ ಲಾರಿಯಲ್ಲಿದ್ದ ಎಲ್ಲಾ 49 ಪ್ರಯಾಣಿಕರು ಮೃತಪಟ್ಟಿದ್ದರು. ಮರುಭೂಮಿಯಲ್ಲಿ ತಾಪಮಾನವು ಅತ್ಯಂತ ಕಠೋರವಾಗಿದ್ದರಿಂದ ಮೃತದೇಹಗಳು ಈಗಾಗಲೇ ಕೊಳೆಯುವ ಸ್ಥಿತಿ ತಲುಪಿದ್ದವು. ಈ ಹಿನ್ನೆಲೆಯಲ್ಲಿ ಬೇರೆ ದಾರಿಯಿಲ್ಲದೆ ಅಧಿಕಾರಿಗಳ ಸಮ್ಮುಖದಲ್ಲೇ ಮೃತರ ದೇಹಗಳನ್ನು ಮರುಭೂಮಿಯಲ್ಲೇ ಸಾಮೂಹಿಕವಾಗಿ ದಫನ (ಖನನ) ಮಾಡಲಾಗಿದೆ.

You cannot copy content of this page

Exit mobile version