ನೈಜೀರಿಯಾದಲ್ಲಿ ಸೇನಾ ವಿಮಾನ ಪತನ: 32 ಮಂದಿ ಸಾವು

ಅಬುಜಾ: ಪಶ್ಚಿಮ ಆಫ್ರಿಕಾ ರಾಷ್ಟ್ರ ನೈಜೀರಿಯಾದಲ್ಲಿ ಸೋಮವಾರ ಸಂಭವಿಸಿದ ಭೀಕರ ಸೇನಾ ವಿಮಾನ ಅಪಘಾತದಲ್ಲಿ, ವಿಮಾನದಲ್ಲಿದ್ದ ಎಲ್ಲಾ 32 ಮಂದಿ ಮೃತಪಟ್ಟಿದ್ದಾರೆ. ನೈಜೀರಿಯಾ ವಾಯುಪಡೆಗೆ ಸೇರಿದ ಎಟಿಆರ್-42 (ATR-42) ಮಿಲಿಟರಿ ವಿಮಾನವು ಒಂಡೋ ರಾಜ್ಯದ ಇಗ್ಬೊಕೊಡಾ ಪ್ರದೇಶದಲ್ಲಿ ಪತನಗೊಂಡಿದೆ.

ಬೆನಿನ್‌ನಿಂದ ಲಾಗೋಸ್‌ಗೆ ತೆರಳುತ್ತಿದ್ದ ಈ ಸೇನಾ ವಿಮಾನವು (ನೋಂದಣಿ ಸಂಖ್ಯೆ: NGR 931) ಇಗ್ಬೊಕೊಡಾದ ನೌಕಾ ನೆಲೆ ಸಮೀಪ ರಾಡಾರ್ ಸಂಪರ್ಕ ಕಳೆದುಕೊಂಡಿತ್ತು. ಬೆಳಗ್ಗೆ ಸುಮಾರು 9:13 ರ ಸುಮಾರಿಗೆ ವಿಮಾನ ಕೊನೆಯ ಬಾರಿಗೆ ಸಂವಹನ ನಡೆಸಿತ್ತು, ಬಳಿಕ ರೇಡಿಯೋ ಸಂಪರ್ಕ ಕಡಿದುಹೋಗಿತ್ತು ಎಂದು ವಾಯುಯಾನ ಮತ್ತು ಏರೋಸ್ಪೇಸ್ ಅಭಿವೃದ್ಧಿ ಸಚಿವ ಫೆಸ್ಟಸ್ ಕೀಯಮೊ ತಿಳಿಸಿದ್ದಾರೆ. ವಿಮಾನದಲ್ಲಿ 25 ಪ್ರಯಾಣಿಕರು ಹಾಗೂ ಏಳು ಸಿಬ್ಬಂದಿ ಸೇರಿದಂತೆ ಒಟ್ಟು 32 ಜನರಿದ್ದರು.

ದುರ್ಘಟನೆ ಸಂಭವಿಸಿದ ತಕ್ಷಣ ನೈಜೀರಿಯನ್ ಏರ್ ಫೋರ್ಸ್ (NAF) ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ನೌಕಾ ನೆಲೆ ಸಮೀಪದ ನದಿಯ ಬಳಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಸೇನಾ ವಿಮಾನಗಳ ನಿಯಂತ್ರಣ ತಮ್ಮ ಸಚಿವಾಲಯದ ವ್ಯಾಪ್ತಿಗೆ ಬರದಿದ್ದರೂ, ರಕ್ಷಣಾ ಕಾರ್ಯಾಚರಣೆಗೆ ಸಂಪೂರ್ಣ ನೆರವು ನೀಡುವುದಾಗಿ ಸಚಿವ ಕೀಯಮೊ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಆದೇಶಿಸಿರುವುದಾಗಿ ನೈಜೀರಿಯಾ ಅಧ್ಯಕ್ಷ ಬೋಲಾ ತಿನುಬು ಘೋಷಿಸಿದ್ದು, ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು