Monday, June 17, 2024

ಸತ್ಯ | ನ್ಯಾಯ |ಧರ್ಮ

ಬಡತನ ಮತ್ತು ಅಸಮಾನ ಹಂಚಿಕೆಯ ಇತಿಹಾಸ

ನಾವು ನೋಡಿರುವಂತೆ ವ್ಯವಸ್ಥೆಗಳು ಬದಲಾಗಿವೆಯೇ ಹೊರತು ದೋಚುವ, ವಂಚಿಸುವ ಮೂಲ ಉದ್ದೇಶ ಬದಲಾಗಿಲ್ಲ ಮತ್ತು ಈಗಿನ ನವ ಉದಾರೀಕರಣದ ಕಾಲಘಟ್ಟದಲ್ಲಿ ಅವು ಇನ್ನಷ್ಟು ಧನದಾಹಿಯಾಗಿ, ನಾಜೂಕಾಗಿ ಕುತ್ತಿಗೆ ಕೊಯ್ಯುವ ವ್ಯವಸ್ಥೆಗಳಾಗಿವೆ. ಬಡತನದ ಕುರಿತು ನಿಖಿಲ್ ಕೋಲ್ಪೆ ಬರೆಯುವ  ಮಹತ್ವದ ಸರಣಿ ಲೇಖನಗಳನ್ನುಓದಿ

ಹಸಿವಿನ ಮತ್ತು ಅದರಿಂದ ಉಂಟಾದ ನರಳಿಕೆ ಹಾಗೂ ಸಾವುಗಳ ಇತಿಹಾಸ ಮೊದಲಿನದು;  “ಬಡತನ”ದ  ಮತ್ತು ಅದರಿಂದ ಉಂಟಾದ ನರಳಿಕೆ ಹಾಗೂ ಸಾವುಗಳ ಇತಿಹಾಸ ನಂತರದ್ದು ಎಂದು ಹೇಳಿದರೆ ಬಹಳಷ್ಟು ಮಂದಿಗೆ ಆಶ್ಚರ್ಯ ಆಗಬಹುದಲ್ಲವೆ? ಇದು ನಿಜ. ಮಾನವ ಕುಲದ ನಿಜ ಇತಿಹಾಸ ಇದನ್ನೇ ಹೇಳುತ್ತದೆ. ಹಸಿವು ಮತ್ತು ಬಡತನಗಳ ಸಂಬಂಧವೇನು? ಇವುಗಳನ್ನು ಉಂಟು ಮಾಡಿರುವವರು ಯಾರು? ಯಾಕೆ? ಇದು ಈಗಿನ “ಆಧುನಿಕ” ಕಾಲಘಟ್ಟದಲ್ಲಿಯೂ ಮುಂದುವರಿದಿರುವುದು ಏಕೆ? ಬಡತನ ನಿರ್ಮೂಲನೆಯ ಇತಿಹಾಸ ಪ್ರಸಿದ್ಧ, ದೇಶ-ಕಾಲ-ಧರ್ಮಾತೀತ ವಂಚನಾ ನಾಟಕ ಮುಂದುವರಿದಿರುವಂತೆಯೇ, ಈ ಬಗ್ಗೆ ಕೆಲವು ವಾಸ್ತವಾಂಶಗಳನ್ನು ತಿಳಿದುಕೊಳ್ಳೋಣ ಮತ್ತು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳೋಣ.

ಆದಿ ಮಾನವ ಸಮಾಜ

ಆದಿ ಮಾನವ ಸಮಾಜದಲ್ಲಿ ಗುಂಪಾಗಿ ಮನುಷ್ಯ ಬೇಟೆಯಾಡಿ ಅಥವಾ ಆಹಾರ ಸಂಗ್ರಹಿಸಿ ಬದುಕುತ್ತಿದ್ದ ಕಾಲದಲ್ಲಿ ಹಸಿವು ಇತ್ತಾದರೂ, ಬಡತನ ಅಥವಾ ಶ್ರೀಮಂತಿಕೆಯ ಪರಿಕಲ್ಪನೆ ಇರಲಿಲ್ಲ. ಬಹಳಷ್ಟು ಬಲಿಷ್ಟ ಪ್ರಾಣಿಗಳು ಓಡಾಡುತ್ತಿದ್ದ ಕಾಲದಲ್ಲಿ ತಾವೇ ಆಹಾರ ಆಗಬಹುದಾದ ದುರ್ಬಲ ಪ್ರಾಣಿಗಳಾದ ಮಾನವರು ಬೇಟೆಯಾಡ ಬೇಕೆಂದರೆ ಜೊತೆಯಾಗಿಯೇ ಇರಬೇಕಿತ್ತು. ಈ ಅನಿವಾರ್ಯತೆ ಸಮಾಜವನ್ನು ಕಟ್ಟಿತು. ಇದ್ದರೆ ಎಲ್ಲರಿಗೂ ಉಂಟು, ಇಲ್ಲದಿದ್ದರೆ ಯಾರಿಗೂ ಇಲ್ಲ. ಎಲ್ಲವನ್ನೂ ಹಂಚಿತಿನ್ನುವ ಈ ಮೊದಲ ಸಮಾಜವಾದಿ ಪರಿಕಲ್ಪನೆಯ ಸಮಾಜವು ಮಳೆ, ಬಿಸಿಲು, ಗಾಳಿ, ಚಳಿ, ರೋಗರುಜಿನ ಎಲ್ಲವನ್ನೂ ಸಮಾನವಾಗಿ ಮತ್ತು ಜೊತೆಯಾಗಿ ಎದುರಿಸಬೇಕಿತ್ತು. ಸುತ್ತಲೂ ಬೇಟೆ ಮತ್ತು ಆಹಾರದ ಲಭ್ಯತೆಯ ಆಧಾರದಲ್ಲಿ ಒಂದು ಪಂಗಡದ ಬಡತನವೋ, ಶ್ರೀಮಂತಿಕೆಯೋ ನಿರ್ಧಾರವಾಗುತ್ತಿತ್ತೇ ಹೊರತು, ನಿನ್ನ ತಲೆಗೆ ನಿನ್ನ ಕೈ ಎಂಬ ಪರಿಸ್ಥಿತಿ ಇರಲಿಲ್ಲ. ಗುಂಪುಗಳ ನಡುವೆ ಆಹಾರ ಮತ್ತು ಅದು ಸಿಗುವ ಪ್ರದೇಶಕ್ಕಾಗಿ ಟೆರಿಟೋರಿಯಲ್ ಕಚ್ಚಾಟಗಳು ನಡೆಯುತ್ತಿದ್ದವು. ಆಗ ಎಲ್ಲವೂ ಸ್ವರ್ಗವಾಗಿತ್ತು ಎಂದು ಭಾವಿಸಬೇಕಿಲ್ಲ. ಬದುಕುವುದು ಸವಾಲಾಗಿತ್ತು ಮತ್ತು ಸರಾಸರಿ ಆಯಸ್ಸು ಬಹಳ ಕಡಿಮೆ ಇತ್ತು. ಆದರೂ, ಬಡತನ- ಶ್ರೀಮಂತಿಕೆಯ ಮೇಲುಕೀಳು ಇರಲಿಲ್ಲ. ಆಸ್ತಿ ಮತ್ತು ಒಡೆತನದ ಕಲ್ಪನೆಯೇ ಇರಲಿಲ್ಲ

ಮುಂದೆ ಬೇಟೆಯಾಡಲೆಂದು ರೂಪಿಸಿದ ಆಯುಧಗಳೇ ಮಾನವ ವಿಕಾಸಕ್ಕೆ ಕಾರಣವಾಗುವುದರ ಜೊತೆಗೆ, ಈ ಆಯುಧಗಳು ಮತ್ತು ಟೆರಿಟೋರಿಯಲ್ ಗುಣಗಳೇ ರಾಜ್ಯಗಳ ಸ್ಥಾಪನೆ ಮತ್ತು ಯುದ್ಧಗಳಿಗೆ ತಳಹದಿಯಾಗುವುದರ ಜೊತೆಗೆ, ಬಡವರ ಬದಲಾಗಿ ಬಡತನವನ್ನು ಪೋಷಿಸುವ ಅಸಮಾನ ಹಂಚಿಕೆಯ ವ್ಯವಸ್ಥೆಗಳನ್ನು ರೂಪಿಸಿದ್ದು ವಿಪರ್ಯಾಸ.

ಆಸ್ತಿ ಮತ್ತು ಒಡೆತನ

ಮುಂದೆ ಮಾನವರು ಕೃಷಿ ಮಾಡಲು ಕಲಿತು, ಬೇಲಿ ಹಾಕಲು ಆರಂಭಿಸಿದಾಗ ಆಸ್ತಿ ಮತ್ತು ಒಡೆತನದ ಕಲ್ಪನೆಯು ಹುಟ್ಟಿತು. ಜೊತೆಗೆ ಸಾಮುದಾಯಿಕ ಬೇಟೆಗಾಗಿ ಆವಿಷ್ಕರಿಸಿದ್ದ ಆಯುಧಗಳೇ ಅಭಿವೃದ್ಧಿ ಹೊಂದಿ, ಹಕ್ಕು ಸ್ಥಾಪನೆಗೆ ಬಳಕೆಯಾದವು. ಇಡೀ ವಿಶಾಲ ಭೂ ಪ್ರದೇಶಗಳನ್ನು ತಮ್ಮದೆಂದು ಹೇಳಿಕೊಳ್ಳುವುದು ಆರಂಭವಾಯಿತು. ರಾಜ್ಯಗಳು, ಪಾಳೆಯಗಾರಿಕೆ ಆರಂಭವಾಯಿತು. ಬಲಪ್ರಯೋಗ ಮತ್ತು ಯುದ್ಧ ಸಾಮರ್ಥ್ಯವೇ ಆಸ್ತಿ ಮತ್ತು ಶ್ರೀಮಂತಿಕೆಗೆ ಸಾಧನವಾಯಿತು. ಶಕ್ತಿವಂತರು ಆ ಕಾಲದ ಸಂಪನ್ಮೂಲಗಳಾದ ಜಮೀನನ್ನು ತಮ್ಮದನ್ನಾಗಿ ಮಾಡಿಕೊಂಡಾಗ, ಭೂರಹಿತರು ಬಡವರಾದರು. ಹಲವರು ಕಾಡುಪಾಲಾಗಿ ಆದಿ ಮಾನವ ಜೀವನವನ್ನೇ ಮುಂದುವರಿಸಬೇಕಾಯಿತು. ಭೂರಹಿತರಿಗೆ ಗುಲಾಮರಾಗುವುದು, ಉಳ್ಳವರ ಚಾಕರಿ ಮಾಡುವುದು, ಅಡಿಯಾಳುಗಳಾಗುವುದು, ಸೈನಿಕರಾಗುವುದು ಅಥವಾ ಆ ಕಾಲದ ದೈನಂದಿನ ಅಗತ್ಯಗಳನ್ನು ಪೂರೈಸುವ ಇತರ ಉದ್ಯೋಗ, ಕುಶಲ ಕರ್ಮಗಳಲ್ಲಿ ತೊಡಗುವುದರ ಹೊರತು ಬೇರೆ ದಾರಿಯಿರಲಿಲ್ಲ. ಗುಲಾಮರು, ಸಾಮಾನ್ಯ ಕೆಲಸಗಾರರು, ಗೇಣಿ ಕೊಡುವ ಸಣ್ಣ ರೈತರು, ಕಪ್ಪಕೊಡುವ ಜಮೀನ್ದಾರರು, ಪಾಳೆಯಗಾರರು, ಸಾಮಂತರು ಮತ್ತು ಅಂತಿಮವಾಗಿ ರಾಜ-ಸಾಮ್ರಾಟ- ಹೀಗೆ ಒಂದು ಶ್ರೇಣಿಕೃತ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಸಮಾನ ವ್ಯವಸ್ಥೆ ರೂಪುಗೊಂಡಿತು. ಈ ವ್ಯವಸ್ಥೆಯ ಆಧಾರದಲ್ಲಿಯೇ ಹಕ್ಕುಗಳು ನಿರ್ಧಾರವಾದವು. ರಾಜ್ಯಗಳು, ರಾಜ ಮನೆತನಗಳು ಹುಟ್ಟಿದವು, ವಿಸ್ತರಿಸಿದವು, ಕುಸಿದವು. 

ಆದರೆ, ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಬಡವರು ಬಡವರಾಗುತ್ತಾ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಾ ನಡೆದರು. ಇದಕ್ಕೆ ವ್ಯತಿರಿಕ್ತವಾದ ನಿದರ್ಶನಗಳು ಆಗೊಮ್ಮೆ ಈಗೊಮ್ಮೆ ಆಗಲೂ, ಈಗಲೂ ಸಿಗುತ್ತವೆ. ಒಟ್ಟಿನಲ್ಲಿ ಬಡಜನರ ಬೆವರಿನ ಫಲವು ಹಂತಹಂತವಾಗಿ ಒಂದೇ ಕಡೆ ಸೇರುವ ವ್ಯವಸ್ಥೆಯಿದು. ರಾಜನ ಸ್ವಭಾವ, ರಾಜಕೀಯ ಸಂದರ್ಭಗಳಿಗೆ ಅನುಗುಣವಾಗಿ ಜನರೇ ತಮ್ಮ ದುಡಿಮೆಯನ್ನು ಭಿಕ್ಷೆಯಾಗಿ, ಕೊಡುಗೆಯಾಗಿ ಆಳುವವರ ಔದಾರ್ಯವೋ ಎಂಬಂತೆ ಪಡೆಯುವ ವ್ಯವಸ್ಥೆಯಿದು. ಇತಿಹಾಸದ ಉದ್ದಕ್ಕೂ ಪಕ್ಕದ ರಾಜ್ಯಗಳ ಮೇಲೆ ಆಕ್ರಮಣ ಮಾಡಿ ಲೂಟಿ ಹೊಡೆದಾಗ ಹೋದ ಜೀವಗಳಿಗೆ, ನಡೆದ ಅತ್ಯಾಚಾರ- ಅನಾಚಾರಗಳಿಗೆ ಲೆಕ್ಕ ಇಟ್ಟವರಿಲ್ಲ. ಬರ, ಹಸಿವುಗಳಿಂದ ಸತ್ತವರಿಗೂ ಲೆಕ್ಕ ಇಲ್ಲ. ಬಡವರ ಲೆಕ್ಕಕ್ಕೆ ಇನ್ನಷ್ಟು ಜನರು ಸೇರುತ್ತಾ ಹೋದರು ಅಷ್ಟೇ. ಅವರ ಜೀವನ ಶಾಂತಿಕಾಲದಲ್ಲಿಯೂ ಅಷ್ಟೇ. ಯುದ್ಧಕಾಲದಲ್ಲೂ ಅಷ್ಟೇ.

ಒಟ್ಟಿನಲ್ಲಿ ಹೇಳಬೇಕೆಂದರೆ, ಎಲ್ಲರ ಸೊತ್ತಾದ ಸಂಪನ್ಮೂಲಗಳಿಗೆ ಕೆಲವರೇ ಒಡೆಯರಾದಾಗ ಬಡತನ ಹುಟ್ಟುತ್ತದೆ. ನಾವು ಈಗ ಓದುವ ಇತಿಹಾಸದಲ್ಲಿ ರಾಜ, ಅವನ‌ ರಾಣಿಯರು, ಮಾಡಿದ ಯುದ್ಧಗಳು, ಕಟ್ಟಿದ ಮಹಲುಗಳು, ಮಾಡಿದ ದಾನದತ್ತಿಗಳು, ಸಾಲು ಮರ ನೆಡಿಸಿದ್ದು, ಬೀದಿಬದಿ ಮುತ್ತುರತ್ನ ವ್ಯಾಪಾರ ಇತ್ಯಾದಿ ಜುಜುಬಿ ವಿಷಯಗಳ ಬಗ್ಗೆ ಇದೆಯೇ ಹೊರತು, ಬಡಜನರ ಜೀವನದ ಪಾಡಿನ ಬಗ್ಗೆ ಏನೂ ಇಲ್ಲ. ಕೆಲವೊಮ್ಮೆ ಒಳ್ಳೆಯ ಜನಪ್ರೇಮಿ ರಾಜರು ಆಗಿ ಹೋಗಿದ್ದಾರೆ. ಅವರನ್ನು ನಾವು ಈಗಲೂ ಹಾಡಿಹೊಗಳುತ್ತೇವೆ. ಆದರೆ, ಇಡೀ ರಾಜಪ್ರಭುತ್ವ ವ್ಯವಸ್ಥೆಯೇ ಅಸಮಾನ ಹಂಚಿಕೆಯ ಒಂದು ಪ್ರತಿಷ್ಟಿತ, ಸುಸಜ್ಜಿತ ದರೋಡೆಕೋರ ವ್ಯವಸ್ಥೆ. ನಮ್ಮ ಪುರಾಣಗಳ ರಾಜಸೂಯ ಮತ್ತು ಅಶ್ವಮೇಧ ಯಾಗಗಳಿಂದ ಹಿಡಿದು ಪ್ರಪಂಚದ ಬೇರೆಬೇರೆ ರಾಜವಂಶಗಳು ಮಾಡಿದ ದಂಡಯಾತ್ರೆಗಳೆಂಬ ವೈಭವೀಕೃತ ಮತ್ತು ಘೋರ ದರೋಡೆ ಆಭಿಯಾನಗಳ ಬಗ್ಗೆ ನಾವು ತಿಳಿದೇ ಇದ್ದೇವೆ.

ವಸಾಹತುಶಾಹಿಯ ದರೋಡೆ

ರಾಜ ಪ್ರಭುತ್ವಗಳ ಹಣದಾಹದ ಮುಂದುವರಿದ ಭಾಗವೇ ವಸಾಹತುಶಾಹಿ ವ್ಯವಸ್ಥೆ. ಈ ವ್ಯವಸ್ಥೆಯೇ ಮುಂದೆ ಬಂಡವಾಳಶಾಹಿ ವ್ಯವಸ್ಥೆಗೆ ದಾರಿಮಾಡಿ ಕೊಟ್ಟಿತು. ಬ್ರಿಟಿಷ್, ಸ್ಪಾನಿಷ್, ಫ್ರೆಂಚ್, ಪೋರ್ಚುಗೀಸ್, ಡಚ್, ಡೇನ್, ಚೀನಿ, ಜಪಾನಿ ಮುಂತಾದ ರಾಜಪ್ರಭುತ್ವಗಳು- ಕೇವಲ ಆಕ್ರಮಣ ಮಾಡಿ, ದೋಚಿ ಓಡಿಹೋಗುವ ಬದಲು ದೇಶದೇಶ ಮತ್ತು ದೊಡ್ಡ ದೊಡ್ಡ ಭೂಭಾಗಗಳನ್ನು ಆಕ್ರಮಣ ಮಾಡಿ, ಶಾಶ್ವತವಾಗಿ ವಶಪಡಿಸಿಕೊಂಡು, ಅಲ್ಲಿನ ಜನರನ್ನು ಅಡಿಯಾಳಾಗಿಸಿ ದೋಚುವ ವ್ಯವಸ್ಥೆಯೇ ವಸಾಹತುಶಾಹಿ. ಇಡೀ ಆಫ್ರಿಕಾ, ಎರಡು ಅಮೇರಿಕಾ ಖಂಡಗಳು, ಏಷ್ಯಾ ಈ ವಸಾಹತುಶಾಹಿಯಿಂದ ಕೊಳ್ಳೆಹೋದವು. ಭಾರತೀಯರಿಗೆ ಇದರ ಅನುಭವ ಬಹಳಷ್ಟು ಇದೆ. 

ದಕ್ಷಿಣ ಅಮೇರಿಕಾದ ಮೂಲ ನಿವಾಸಿಗಳನ್ನು ಪ್ರಾಣಿಗಳಂತೆ ಕೊಂದು, ಟನ್ನುಗಟ್ಟಲೆ ಚಿನ್ನ ಬೆಳ್ಳಿ ಸಾಗಿಸಿದ ಸ್ಪ್ಯಾನಿಶ್ ಮತ್ತಿತರ ವಸಾಹತುಶಾಹಿ ಮತ್ತು ಉತ್ತರ ಅಮೇರಿಕಾದಲ್ಲಿ ರೆಡ್ ಇಂಡಿಯನ್ಸ್ ಎಂದು ಕರೆಯಲಾಗುವ, ತಮ್ಮ ಪಾಡಿಗೆ ತಾವು ಬದುಕಿಕೊಂಡಿದ್ದ ಆಪಾಚಿ, ಕೊಮಾಂಚೆ, ಕಿಯೋವ ಇತ್ಯಾದಿ ನೂರಾರು ಬುಡಕಟ್ಟುಗಳ ಲಕ್ಷಾಂತರ ಜನರನ್ನು ಪ್ರಾಣಿಗಳಂತೆ ಕೊಂದು ಜಮೀನನ್ನು ಸ್ವಾಧೀನಪಡಿಸಿಕೊಂಡು ಯುಎಸ್‌ಎ, ಕೆನಡಾ ದೇಶಗಳನ್ನು ಸ್ಥಾಪಿಸಿ ತಮ್ಮದೆಂದು ಹೇಳಿಕೊಳ್ಳುತ್ತಿರುವ ಐರೋಪ್ಯ ವಲಸಿಗರು, ಆಫ್ರಿಕಾ ಖಂಡವನ್ನೇ ಕೊಳ್ಳೆ ಹೊಡೆದದ್ದು ಮಾತ್ರವಲ್ಲ; ಕರಿಯ ಜನರನ್ನು ಹಿಡಿದು ಅಮಾನುಷವಾಗಿ ಸಾಗಿಸಿ ಗುಲಾಮರನ್ನಾಗಿ ಮಾಡಿಕೊಂಡು, ಪುಕ್ಕಟೆ ದುಡಿಸಿದ ಐರೋಪ್ಯ ದೇಶಗಳ ವಸಾಹತುಶಾಹಿಯ ರಕ್ತಚರಿತ್ರೆಯ ಕುರಿತು ಪ್ರತ್ಯೇಕ ಬರೆಯಬಹುದು.

ಇವೆಲ್ಲವೂ ಸಾಧ್ಯವಾದುದು ಬಂದೂಕು ಮತ್ತು ಮದ್ದುಗುಂಡುಗಳ ಆವಿಷ್ಕಾರದಿಂದ ಮತ್ತು ನಿರ್ದಯಿ ಹತ್ಯಾಕಾಂಡಗಳಿಂದ. ಇಂಗ್ಲೆಂಡ್ ಮತ್ತು ಇತರ ಐರೋಪ್ಯ ದೇಶಗಳಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯು ವಸಾಹತುಶಾಹಿಯ ಬೆಳವಣಿಗೆಗೆ ಕಾರಣವಾದಂತೆಯೇ, ಅದರ ಪತನಕ್ಕೂ ಕಾರಣವಾಯಿತು. ಹೊಸ ಕಾರ್ಮಿಕ ವರ್ಗದ ಉಗಮ ಮತ್ತು ಪ್ರಜಾಪ್ರಭುತ್ವದ ಹುಟ್ಟಿಗೂ ಕಾರಣವಾಯಿತು. ಆದರೆ, ದೋಚಲೆಂದೇ  ಹುಟ್ಟಿಕೊಂಡ ವಸಾಹತುಶಾಹಿಯು ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಒದಗಿಸುವ ಸಲುವಾಗಿ ಇನ್ನಷ್ಟು ಬೆಳೆಯಿತು. ಇದು ಜೊತೆಗೆ ಹೆಚ್ಚು ನಾಜೂಕಾದ ಬಂಡವಾಳಶಾಹಿ ವ್ಯವಸ್ಥೆಯನ್ನೂ ಹುಟ್ಟುಹಾಕಿತು.

ಬಂಡವಾಳಶಾಹಿ ವ್ಯವಸ್ಥೆ

ಮೇಲೆ ಹೇಳಿದ ರೀತಿಯಲ್ಲಿ ದೋಚಿದ ಸಂಪತ್ತು ಮತ್ತು ಅಗ್ಗದ ಕೂಲಿ, ಗುಲಾಮರ ಬಿಟ್ಟಿ ಶ್ರಮದಿಂದ ಕಟ್ಟಿದ ಸಂಪತ್ತೇ ಇಂದಿನ ಐರೋಪ್ಯ ಶ್ರೀಮಂತಿಕೆಗೆ ಮತ್ತು ಹಿಂದುಳಿದ  ರಾಷ್ಟ್ರಗಳ ಬಡತನಕ್ಕೆ ಮೂಲಕಾರಣ ಮಾತ್ರವಲ್ಲ, ಬಂಡವಾಳಶಾಹಿ ವ್ಯವಸ್ಥೆಯ ಮೂಲ ಬಂಡವಾಳ. ಈ ಬಂಡವಾಳಶಾಹಿ ವ್ಯವಸ್ಥೆ ಎಂಬುದು ಎಂತಾ ನಾಜೂಕಾದ ಮೋಸದ ವ್ಯವಸ್ಥೆ ಎಂದರೆ, ಅದು ಸಮಾನ ಅವಕಾಶ, ರಾಜಕೀಯ ಅಧಿಕಾರ, ಪ್ರಜಾಪ್ರಭುತ್ವ, ಮುಕ್ತ ಸಮಾಜ ಮುಂತಾದ ಕನಸುಗಳನ್ನು ತೋರಿಸಿಯೇ ಬೆಳೆಯುತ್ತಿದೆ. ವಾಸ್ತವದಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಪ್ರಜಾಪ್ರಭುತ್ವದ ಅನಿವಾರ್ಯ ಭಾಗ ಎಂಬಂತೆ ಬಿಂಬಿಸಿ ನಂಬಿಸಲಾಗುತ್ತದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ನೈತಿಕ ಆಯಾಮಗಳಿರುವ ಪ್ರಜಾಪ್ರಭುತ್ವ ವ್ಯವಸ್ಥೆಗೂ, ಕೇವಲ ಆರ್ಥಿಕವಾದ, ಆದರೆ ಬೇರೆಯವುಗಳ ಮೇಲೆ ಗಾಢ ಪ್ರಭಾವ ಬೀರಿ, ಅವುಗಳ ಮೇಲೆ ಉಕ್ಕಿನ ಹಿಡಿತ ಹೊಂದಿರುವ ಬಂಡವಾಳಶಾಹಿಗೂ ಯಾವುದೇ ಸಂಬಂಧವಿಲ್ಲ. ಸರ್ವಾಧಿಕಾರಿ ವ್ಯವಸ್ಥೆ ಒಂದರಲ್ಲೂ ಬಂಡವಾಳಶಾಹಿ ಹುಲುಸಾಗಿ ಬೆಳೆಯಬಲ್ಲದು. ಅದೇ ರೀತಿಯಲ್ಲಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯಲ್ಲಿ ಸಮಾಜವಾದಿ ವ್ಯವಸ್ಥೆ ಕೂಡಾ ಅಷ್ಟೇ ಹುಲುಸಾಗಿ ಬೆಳೆಯಬಹುದು ಎಂಬುದು ಬಹುತೇಕರಿಗೆ ಅರ್ಥವಾಗದಿರುವುದು ದುರಂತ. ಒಟ್ಟಿನಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಅಡಿಪಾಯವೇ ಅನ್ಯಾಯದಿಂದ ಗಳಿಸಿದ ರಕ್ತಸಿಕ್ತ ಸಂಪತ್ತು ಎಂಬುದು ನಮಗೆ ನೆನಪಿರಲಿ.

ಮೇಲಾಗಿ ಈ ಭೂಮಿಯು ಇತರ ಜೀವಿಗಳ ಜೊತೆಗೆ ಮಾನವ ಕುಲದ ಸಮಾನ‌ ಸಂಪತ್ತು ಎಂದು ನೈತಿಕವಾಗಿ ಒಪ್ಪುವುದಾದರೆ, ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅಧಿಕೃತವಾಗಿಯೇ ದೋಚುವ ಅವಕಾಶ ನೀಡುವ ವ್ಯವಸ್ಥೆ ನ್ಯಾಯಬದ್ಧವಾಗಿ ಇರಲು‌ ಹೇಗೆ ಸಾಧ್ಯ? ಇದನ್ನು ಅರ್ಥ ಮಾಡಿಕೊಂಡರೆ, ಈ ಲೇಖನ ಸರಣಿಯ ಮೂಲಾಧಾರವಾದ ಸಂಪತ್ತು ಮತ್ತು ಅವಕಾಶಗಳ ಅಸಮಾನ ಹಂಚಿಕೆಯೇ ಬಡತನಕ್ಕೆ ಕಾರಣ ಮತ್ತು ಇದನ್ನು ಸರಿಪಡಿಸದೆ, ಕೇವಲ ದಾನಧರ್ಮ, ಕೊಡುಗೆಗಳಿಂದ ಬಡತನ ನಿವಾರಣೆ ಸಾಧ್ಯವಿಲ್ಲ ಎಂಬ ಸತ್ಯ ಮನದಟ್ಟಾಗುತ್ತದೆ.

ಈ ಬರಹದಲ್ಲಿ ಮೇಲುಮೇಲಕ್ಕೆ ಬಡತನ ಮತ್ತು ಅಸಮಾನ ಹಂಚಿಕೆಯ ಇತಿಹಾಸವನ್ನು ಹೇಳಲಾಗಿದೆ. ನಾವು ನೋಡಿರುವಂತೆ ವ್ಯವಸ್ಥೆಗಳು ಬದಲಾಗಿವೆಯೇ ಹೊರತು- ದೋಚುವ, ವಂಚಿಸುವ ಮೂಲ ಉದ್ದೇಶ ಬದಲಾಗಿಲ್ಲ ಮತ್ತು ಈಗಿನ ನವ ಉದಾರೀಕರಣದ ಕಾಲಘಟ್ಟದಲ್ಲಿ ಅವು ಇನ್ನಷ್ಟು ಧನದಾಹಿ ಮತ್ತು ಕೂದಲಲ್ಲಿ ಬೆಣ್ಣೆ ಸೀಳಿದಷ್ಟು ನಾಜೂಕಾಗಿ ಕುತ್ತಿಗೆ ಕೊಯ್ಯುವ ವ್ಯವಸ್ಥೆಗಳಾಗಿವೆ. ಇಲ್ಲಿನ ತನಕ ಎತ್ತಲಾದ ವಿಷಯಗಳು ಎಷ್ಟು ಆಳವಾಗಿವೆ ಮತ್ತು ಒಂದಕ್ಕೊಂದು ಎಷ್ಟೊಂದು ತಳಕುಹಾಕಿಕೊಂಡಿವೆ ಎಂದರೆ, ಪ್ರತಿಯೊಂದು ಅಂಶಗಳ ಬಗ್ಗೆ ಮುಂದೆ ಪ್ರತ್ಯೇಕವಾಗಿಯೇ ಬರೆಯ ಬಹುದು.

(ಮುಂದಕ್ಕೆ: ಬಡತನ ಮತ್ತು ಧರ್ಮಗಳ ಇತಿಹಾಸ)

ನಿಖಿಲ್ ಕೋಲ್ಪೆ

ಹಿರಿಯ ಪತ್ರಕರ್ತರು

Related Articles

ಇತ್ತೀಚಿನ ಸುದ್ದಿಗಳು