Monday, June 17, 2024

ಸತ್ಯ | ನ್ಯಾಯ |ಧರ್ಮ

ನಿಮ್ಮ ಹೃದಯದ ಮಾತನ್ನು ಆಲಿಸಿ ಮುನ್ನಡೆಯಿರಿ: ನಿಶಾ

ತನಗಾಗದು ಎಂದು ಕೈ ಚೆಲ್ಲಿ ಕುಳಿತಿದ್ದರೆ ಅವರ ಹೆಸರು ಇಂದು ಯಾರಿಗೂ ತಿಳಿಯುತ್ತಿರಲಿಲ್ಲ. ಆ ಒಂದು ಕನಸು ಅವರ ಬದುಕಿನ ಚಿತ್ರಣವನ್ನೇ ಪಲ್ಲಟ ಮಾಡಿ ಬಿಟ್ಟಿತು. ಪತ್ರಕರ್ತೆ ನವ್ಯ ಪರಿಚಯಿಸಿರುವ, ಯುವ ಜನತೆಗೆ ಸ್ಫೂರ್ತಿಯಾಗಬಹುದಾದ ಕಲಾವಿದೆ ನಿಶಾ ಅವರನ್ನು ತಿಳಿದುಕೊಳ್ಳಲು ಮುಂದೆ ಓದಿ..

ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳು ಎದುರಾದಾಗ ತಲೆಮೇಲೆ ಕೈ ಹೊತ್ತು ಕೂರದೆ ಕಷ್ಟಗಳ ಸರಮಾಲೆಗಳನ್ನು ಹೊದೆದೇ ಅಸಾಧಾರಣ ಸಾಧನೆಗಳನ್ನು ಮಾಡಿದವರನ್ನು ಓದಿ ತಿಳಿದು, ಸ್ಪೂರ್ತಿ ಪಡೆಯಬೇಕು. ಸಾಧನೆಗೆ ಯಾವುದೇ ಪರಿಮಿತಿಯಿಲ್ಲ. ಸಾಧಿಸಬೇಕು ಎನ್ನುವ ಛಲ, ಹುಮ್ಮಸ್ಸು, ಕಠಿಣ ಶ್ರಮವಿದ್ದರೆ  ತಮ್ಮಿಷ್ಟದ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗ ಏರಬಹುದು ಎಂದು ನಿರೂಪಿಸಿದ ಬಹುಮುಖ ಪ್ರತಿಭೆ ನಿಶಾ. ಇವರು ನಟನೆ, ನೃತ್ಯ, ಬೋಧನೆ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ ಪ್ರತಿಭಾನ್ವಿತೆ.

ನಿಶಾ ಮೂಲತಃ ಬೆಂಗಳೂರಿನವರು. ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳು. ಬಾಲ್ಯದಲ್ಲಿಯೇ ನೃತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಮಗಳ ಕನಸಿಗೆ ಪೋಷಕರ ಪ್ರೋತ್ಸಾಹ ಇದ್ದೇ ಇತ್ತು. ಶಿಸ್ತಿನಿಂದ ನಿರಂತರ ನೃತ್ಯಾಭ್ಯಾಸ ನಡೆಸಿದ ಬಾಲೆಯ ಪ್ರತಿಭೆ ಕಲಾ ಜಗತ್ತಿನ ಹಲವರ ಕಣ್ಮನ ಸೆಳೆಯಿತು. ಪರಿಣಾಮವಾಗಿ 2010ರಲ್ಲಿ ತೆರೆಕಂಡ ಜಾಕಿ ಸಿನಿಮಾದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ ಪುನೀತ್‌ ರಾಜ್‌ಕುಮಾರ್‌ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿ ಕೊಂಡರು. “ಅಪ್ಪು ನನ್ನ ನೆಚ್ಚಿನ ನಟ. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಮರೆಯಲಾರದ ಘಳಿಗೆ” ಎನ್ನುತ್ತಾರೆ ನಿಶಾ.

ತನ್ನಿಷ್ಟದ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಡುವುದಕ್ಕೆ ಆರಂಭಿಸಿದ್ದ ನಿಶಾ ತನ್ನ ಬದುಕಿನಲ್ಲಿ ನಿರೀಕ್ಷಿಸದ ಆಘಾತವೊಂದನ್ನು  ಎದುರಿಸಬೇಕಾಯಿತು. ಕುಟುಂಬದ ಏಕೈಕ ದುಡಿಮೆಗಾರ, ತನ್ನ ಕನಸಿಗೆ ರೆಕ್ಕೆ ಕಟ್ಟಿದ್ದ , ತಂದೆಯ ಅಕಾಲಿಕ ಸಾವು ಬರ ಸಿಡಿಲಿನಂತೆ ಬಂದೆರಗಿ ಅವರು ಕುಸಿದು ಹೋದರು.

ತಂದೆಯ ಸಾವಿನ ಬಳಿಕ ಬದುಕಿನ ಪ್ರತಿ ಗಳಿಗೆಯೂ ನಿಶಾರ ಪಾಲಿಗೆ ದುಸ್ತರವಾಗಿತ್ತು. ಬದುಕು ಹೂವಿನ ಹಾಸಿಗೆಯಲ್ಲ ಎಂಬ ಕಟು ಸತ್ಯ ಅರ್ಥವಾಗತೊಡಗಿತು. ಮನೆಯ  ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿತು. ಕುಟುಂಬ ನಿರ್ವಹಣೆಯ ಜವಾಬ್ದಾರಿ 16 ರ ಹರೆಯದ ಆಕೆಯ ಹೆಗಲಿಗೆ ಬಿತ್ತು. ಓದುವ ಕನಸು ಅರ್ಧಕ್ಕೆ ನಿಂತು ಹೋಯಿತು. ಆದರೆ ನಿಶಾ ನಿರಾಶರಾಗಲಿಲ್ಲ. ಮನೆಯ ಜವಾಬ್ದಾರಿಗಳನ್ನು ಹೊತ್ತುಕೊಳ್ಳುತ್ತಲೇ ತನ್ನ ಕನಸನ್ನು ಪೂರೈಸಿಕೊಳ್ಳುವ ಪ್ರಯತ್ನದಲ್ಲಿ ಹೆಜ್ಜೆ ಮುಂದಿಟ್ಟರು. ಆದರೆ ಆ ಪಯಣ ನಿರೀಕ್ಷಿಸಿದಷ್ಟು ಸುಲಭದ್ದಾಗಿರಲಿಲ್ಲ. ಯಾವುದೇ ಗಾಡ್‌ ಫಾದರ್‌ಗಳಿಲ್ಲದೇ ತನ್ನ ಸ್ವಂತ ಪ್ರತಿಭೆಯ ಮೂಲಕ ಸಾಧನೆ ಮಾಡಿದ ನಿಶಾ, ಅವಕಾಶ ವಂಚಿತರಾದಾಗ ಧೃತಿಗೆಡಲಿಲ್ಲ. ಡ್ಯಾನ್ಸ್‌ ಹಾಗೂ ಅಭಿನಯದ ಅವಕಾಶಕ್ಕಾಗಿ ಅದೆಷ್ಟೋ ಆಡಿಷನ್‌ ಗಳಲ್ಲಿ ಭಾಗವಹಿಸಿದರು. ಸೋತರು. ಸೋತಾಗ ನಿರಾಶರಾಗಲಿಲ್ಲ; ಮರಳಿ ಯತ್ನವ ಮಾಡಿದರು.

ಹಲವರು ಹಾಗಾಗಬೇಕು, ಇದನ್ನು ಮಾಡಬೇಕು ಎಂದೆಲ್ಲ ಕನಸು ಕಾಣುತ್ತಾರೆ. ಆದರೆ, ಆ ಸಾಧನೆಗೆ ಶ್ರಮದ ಅಗತ್ಯವಿದೆ ಎಂಬುದನ್ನು ಮರೆತು ಬಿಡುತ್ತಾರೆ. ಯೋಚಿಸಿದ ಬಳಿಕ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕಾದುದು ಮೊದಲ ಆದ್ಯತೆ. ನಿಶಾ ಇದನ್ನು ಅಕ್ಷರಶ ಪಾಲಿಸಿದರು. ದೂರ ಶಿಕ್ಷಣದ ಮೂಲಕ ಕಲಾ ವಿಭಾಗದಲ್ಲಿ ಪದವಿ ಪೂರೈಸಿದರು. ಬಾಲ್ಯದಲ್ಲೇ ಕಲೆಯ ಒಲವಿದ್ದ ನಿಶಾರನ್ನು ಕಲಾ ಸರಸ್ವತಿ ಕೈಬೀಸಿ ಕರೆದಳು. ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ನಟನಾ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು.  ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಛಾಪು ಮೂಡಿಸ ತೊಡಗಿದರು. ಹೆಣ್ಣೊಬ್ಬಳು ಒಂಟಿಯಾಗಿ ತನ್ನ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಲು ಹೊರಟಾಗ ಲೋಕದ ಕುಹಕಗಳು ಸಾಮಾನ್ಯ. ಆದರೆ ನಿಶಾ ಅವುಗಳನ್ನೆಲ್ಲ ಮೀರಿ ಬೆಳೆದರು. ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು; ಪೂರ್ಣಪ್ರಮಾಣದ ಕಲಾವಿದೆಯಾಗಿ ಗುರುತಿಸಿಕೊಂಡರು. ಮತ್ತೆ ಅವರು ಹಿಂದಿರುಗಿ ನೋಡಲಿಲ್ಲ.

ನಿಶಾ ಅವರಲ್ಲಿ ಅಡಗಿದ್ದ ಪರಿಪೂರ್ಣ ಕಲಾವಿದೆಗೆ ಪ್ರಶಸ್ತಿ ಗೌರವಗಳು ಅರಸಿ ಬಂದವು. 2018ರಲ್ಲಿ ದ್ವಿಭಾಷೆಗಳಲ್ಲಿ ಝೀ ವಾಹಿನಿಯಲ್ಲಿ ಪ್ರಸಾರವಾದ ಶ್ರೀ ವಿಷ್ಣು ದಶಾವತಾರದಲ್ಲಿ ಲಕ್ಷ್ಮೀ ಪಾತ್ರವನ್ನು ನಿರ್ವಹಿಸಿ, Zee Most Promising face of the year ಪ್ರಶಸ್ತಿಗೆ ಭಾಜನರಾದರು.

ನಟಿಯಾದರೂ ನೃತ್ಯದ ಮೇಲಿನ ತನ್ನ ಒಲವನ್ನು ಬಿಟ್ಟಿಲ್ಲ ನಿಶಾ.  ಡ್ಯಾನ್ಸ್‌ ಒಲಂಪಿಕ್ಸ್‌ ಎಂದೇ ಕರೆಯಲ್ಪಡುವ dance world cup 2019ರಲ್ಲಿ ಭಾರತವನ್ನು ಪ್ರತಿನಿಧಿಸಿ, ಜಾನಪದ ವಿಭಾಗದಲ್ಲಿ ಎರಡು ಪದಕಗಳನ್ನು ಬಾಚಿಕೊಂಡರು. ಸುಮಾರು 50 ದೇಶಗಳ ಸ್ಪರ್ಧಿಗಳೊಡನೆ ಭಾಗವಹಿಸಿ ಡ್ಯುಯೆಟ್‌ ವಿಭಾಗದಲ್ಲಿ ಚಿನ್ನ ಹಾಗೂ ಸೋಲೋ ವಿಭಾಗದಲ್ಲಿ ಕಂಚಿನ ಪದಕ ಪಡೆದು ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ನೃತ್ಯ ಕ್ಷೇತ್ರದಲ್ಲಿನ ತನ್ನ ಸಾಧನೆಯ ಕೀರ್ತಿಯನ್ನು ಗುರು ರೇಖಾ ಜಗದೀಶ್ ಅವರಿಗೆ ಅರ್ಪಿಸಿ ವಿನಮ್ರತೆ ತೋರವ ನಿಶಾ ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಸರಳ ಸುಂದರಿ.

ಅದ್ರಿಕಾ ನೃತ್ಯ ಸಂಸ್ಥೆ ನಡೆಸುವ ನಿಶಾ, ಗ್ರಾಮೀಣ ಭಾಗದ ನೂರಾರು ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ಪಾಠ ಮಾಡಿದ್ದಾರೆ. ʼವುಮೆನ್ಸ್‌ ಡೇʼ ಸಿನಿಮಾದಲ್ಲಿ ನಟಿಸಿರುವ ಇವರು ಮುಂದೆ ತೆರೆಕಾಣಲಿರುವ ಪಂಚಮ ಅಧ್ಯಾಯ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ನಟನೆ, ನೃತ್ಯದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವುದು ನಿಶಾ ಕನಸು. ಈಗಾಗಲೇ ಶಿಕ್ಷಕಿಯಾಗಿ ಸೈ ಎನಿಸಿ ಕೊಂಡಿದ್ದಾರೆ. ಪ್ರಸ್ತುತ ಮೆಜೆಸ್ಟಿಕ್ ಶಾಖೆಯ ಸಾರ್ವಜನಿಕ ಸಂವಹನ ಹಾಗೂ ರಂಗಭೂಮಿ ಶಿಕ್ಷಕಿಯಾಗಿ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ʼಜೀವನದಲ್ಲಿ ಅಹಿತಕರ ಘಟನೆಗಳು ಸಂಭವಿಸಿ ಬದುಕು ಕೆಟ್ಟದಾಗಿ ಪರಿಣಮಿಸಿದರೂ, ನಮ್ಮ ನಾಳೆಗಳು ಖಂಡಿತಾ ಚೆನ್ನಾಗಿರುತ್ತವೆʼ ಎಂದು ಅಮೇರಿಕಾದ ಖ್ಯಾತ ಕವಿ ಹಾಗೂ ಹೋರಾಟಗಾರ್ತಿ ಮಾಯಾ ಏಂಜೆಲೋ ಭಾಷಣವೊಂದರಲ್ಲಿ ಹೇಳಿದ್ದರು. ಈ ಮಾತುಗಳನ್ನು ಪುಷ್ಟೀಕರಿಸಲು ನಿಶಾಗಿಂತ ಒಳ್ಳೆಯ ಉದಾಹರಣೆಯನ್ನು ಎಲ್ಲಿ ಹುಡುಕುವುದು?   

ʼನಿಮ್ಮ ಹೃದಯದ ಮಾತನ್ನು ಆಲಿಸಿ ಅದು ನಿಮ್ಮನ್ನು ಗುರಿಯೆಡೆಗೆ ಒಯ್ಯುತ್ತದೆ. ಜೀವನವು ಏಳು ಬೀಳುಗಳ ಪಯಣ, ಸರಿಯಾದ ಆಯ್ಕೆ ಮಾಡಿ ಬದುಕಿನ ಹಾದಿಯಲ್ಲಿ ನಡೆಯುವುದು ನಮ್ಮ ಕೈಯ್ಯಲ್ಲಿದೆʼ ಎಂದು ಗೆಲುವಿನ ನಗೆ ಬೀರುವ  ನಿಶಾ ಅವರ ಕನಸಿನ ಮನೆ ಇನ್ನಷ್ಟೂ ವಿಸ್ತಾರವಾಗಲಿ, ಯಶಸ್ಸು ಅವರನ್ನು ಹಿಂಬಾಲಿಸಲಿ.

ನವ್ಯಶ್ರೀ

ಪತ್ರಕರ್ತೆ

Related Articles

ಇತ್ತೀಚಿನ ಸುದ್ದಿಗಳು