Saturday, June 22, 2024

ಸತ್ಯ | ನ್ಯಾಯ |ಧರ್ಮ

‘ಹಲ್ಕಟ್ ಗಿರಿ ಮಾಡೋರು’, ‘ಸಗಣಿ ತಿನ್ನೋರು’ ; ಪಕ್ಷದ ವೇದಿಕೆಯಲ್ಲೇ ನಿರಾಣಿ, ಯತ್ನಾಳ್ ವಾಗ್ಯುದ್ಧ

ರಾಜ್ಯ ಬಿಜೆಪಿ ಪಕ್ಷ ಅಕ್ಷರಶಃ ಒಡೆದ ಮನೆಯಾಗಿದೆ. ಒಂದು ಕಾಲದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂಬಂತಿದ್ದ ಬಿಜೆಪಿಯ ಒಳಗೆ ಆಂತರಿಕ ಕಚ್ಚಾಟ ಬುಗಿಲೆದ್ದಿದೆ. ಅದಕ್ಕೆ ಉದಾಹರಣೆಯಂತೆ ಈಗ ಬಿಜೆಪಿ ಪ್ರಮುಖ ನಾಯಕರೆಂದೇ ಗುರುತಿಸಿಕೊಂಡ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿಯ ಎರಡು ಬಣಗಳು ನೇರವಾಗಿ ಆರೋಪ ಮತ್ತು ಪ್ರತ್ಯಾರೋಪಕ್ಕೆ ಇಳಿದು ಬೀದಿ ಜಗಳಕ್ಕೆ ಮುಂದಾಗಿವೆ.

ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಿದ್ದ ಬಿಜೆಪಿ ಪಕ್ಷದ ವೇದಿಕೆಯಲ್ಲೇ ನಾಯಕರು ಮತ್ತು ಕಾರ್ಯಕರ್ತರ ಕಚ್ಚಾಟಕ್ಕೆ ಸಭೆ ಸಾಕ್ಷಿಯಾಗಿದೆ. ಬಾಗಲಕೋಟೆಯಲ್ಲಿನ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಪರಸ್ಪರ ಕೆಸರೆರೆಚಾಟ ಮುಂದುವರಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ‘ಬಿಜೆಪಿಯಲ್ಲಿನ ಕಾರ್ಯಕರ್ತರು ಎಲ್ಲಿಯೂ ಸಿಗೋದಿಲ್ಲ, ನಾನು ಯಡಿಯೂರಪ್ಪ, ಅನಂತ ಕುಮಾರ್ ಅವರ ನಂತರದ ನಾಲ್ಕನೇ ತಲೆಮಾರಿನ ನಾಯಕ. ಯಡಿಯೂರಪ್ಪ ನಮ್ಮನ್ನು ಮಂತ್ರಿ ಮಾಡಲಿಲ್ಲ. ಬೊಮ್ಮಾಯಿ ಮಾಡ್ತಿದ್ರು. ನಾವೇನು ಇಲ್ಲಿ ಗುಂಡಾಗಿರಿ ಮಾಡೋಕೆ ಬಂದಿಲ್ಲ, ಹಿಂದೂ ಆಗಿ ಹಿಂದೂಗಳ ವಿರುದ್ಧ ನಿಲ್ಲುವವರೇ ಹಿಜಡಾಗಳು. ನಮ್ಮ ಪಾರ್ಟಿಯಲ್ಲಿದ್ದು ನಮ್ಮವರನ್ನು ಸೋಲಿಸೋದು ಆಗಬಾರದು. ಇಲ್ಲಿನ ಬೆಳವಣಿಗೆ ಮೇಲಿನ ನಾಯಕರಿಗೆ ಗೊತ್ತಿದೆ. ನನ್ನ ಕ್ಷೇತ್ರದಲ್ಲಿ ನನ್ನನ್ನು ಸೋಲಿಸ್ತೀವಿ ಎಂದು ಹಲ್ಕಟ್ ಗಿರಿ ಮಾಡಿದವ್ರು ಈಗ ಏನಾದ್ರು ಎಂದು ಗೊತ್ತಿದೆ’ ಎಂದು ಮುರುಗೇಶ್ ನಿರಾಣಿ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮಾತನಾಡುವ ಸರದಿ ಮುರುಗೇಶ್ ನಿರಾಣಿಗೆ ಸಿಗುತ್ತಿದ್ದಂತೆ ‘ನಾವು ಸಹ ಕೃಷ್ಣಾ ನದಿ ನೀರು ಕುಡಿದೀವಿ. ಬಾಗಲಕೋಟೆ ವಿಜಯಪುರ ಎರಡೂ ಜಿಲ್ಲೆಯ ಗಾಳಿ ಸೇವಿಸಿದ್ದೇವೆ. ಯಾರಾದರೂ ಏನಾದರೂ ಮಾತನಾಡಿದರೆ ಅದರ ಹತ್ತರಷ್ಟು ಶಬ್ದ ನಮ್ಮ ಬಾಯಲ್ಲಿ ಇವೆ. ಆದರೆ ನಮ್ಮ ಬಾಯಿ ಹೊಲಸು ಮಾಡ್ಕೊಳಲ್ಲ. ಮಾಡ್ಕೊಳೋಕೆ ಅವಕಾಶ ಮಾಡಬಾರದು. ಚುನಾವಣೆಯಲ್ಲಿ ಜಿಲ್ಲೆಯಲ್ಲಿ ತಾವೊಬ್ಬರೇ ಗೆದ್ದಿರುವುದಾಗಿ ಕೆಲವರಿಗೆ ಕೋಡು, ಸೊಕ್ಕು, ದಿಮಾಕು ಬಂದಿದೆ. 2018ರಲ್ಲಿ ನಾಗಠಾಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೋವಿಂದ ಕಾರಜೋಳ ಮಗನನ್ನು ಸೋಲಿಸಿದವರು ಯಾರು, ಬಬಲೇಶ್ವರದಲ್ಲಿ ಮೂರು ಚುನಾವಣೆಯಲ್ಲಿ ವಿಜುಗೌಡರ ಸೋಲಿಗೆ ಕಾರಣರಾದವರು ಯಾರು ಎಂದು ಗೊತ್ತಿದೆ’ ಎಂದು ಯತ್ನಾಳ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಮುರುಗೇಶ್ ನಿರಾಣಿ ಮುಂದುವರೆದು, 35 ವರ್ಷಗಳಿಂದ ಪಕ್ಷದ ಕೆಲಸ ಮಾಡ್ಕೊಂಡು ಬಂದಿದ್ದೇನೆ. ಬೇರೆಯವರ ತರ ಅಲ್ಲಿದ್ದಾಗ ಒಂದು ತರ, ಇಲ್ಲಿದ್ದಾಗ ಇನ್ನೊಂದು ತರ ನಾಟಕ ಆಡಿಲ್ಲ. ತಲೆ ಮೇಲೆ ಟೊಪ್ಪಿ ಹಾಕಿಕೊಂಡು ನಮಾಜ್‌ ಮಾಡಿಲ್ಲ. ಬಾಳ ಕೆದಕಲಿಕ್ಕೆ ಹೋದರೆ ಎಲ್ಲರೂ ಸೆಗಣಿ ತಿನ್ನೋರೇ ಇದ್ದಾರೆ. ನನ್ನ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ವಾಗ್ಗಾಳಿ ನಡೆಸಿದರು.

ಅಂತೂ ಬಿಜೆಪಿ ಪಕ್ಷದ ಎರಡು ನಾಯಕರ ಒಳಗಿದ್ದ ಒಳಜಗಳ ಕಾರ್ಯಕರ್ತರ ಎದುರೇ ಬಟಾ ಬಯಲಾಗಿದೆ. ಸಧ್ಯ ‘ಬಿಜೆಪಿಯೇ ಭರವಸೆ’ ಎಂದಿದ್ದ ಕಾರ್ಯಕರ್ತರು ಇಬ್ಬರ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಕಂಡುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು