Monday, June 17, 2024

ಸತ್ಯ | ನ್ಯಾಯ |ಧರ್ಮ

ನಿರ್ಭಯಾ ಫಂಡ್‌ ಅಡಿಯಲ್ಲಿ ಖರೀದಿಸಿದ ಐಷಾರಾಮಿ ಗಾಡಿಗಳು ರಾಜಕಾರಣಿಗಳ ಭದ್ರತೆಗೆ ಬಳಕೆ!

ಮುಂಬೈ ಪೊಲೀಸರು ನಿರ್ಭಯಾ ನಿಧಿಯಿಂದ ಖರೀದಿಸಿದ ಹಲವಾರು ವಾಹನಗಳನ್ನು ಸಂಸದರು ಮತ್ತು ಶಾಸಕರ ಭದ್ರತೆಗಾಗಿ ಬಳಸಲಾಗುತ್ತಿದೆ. ಈ ವಾಹನಗಳನ್ನು ಮಹಿಳೆಯರ ಮೇಲಿನ ಅಪರಾಧಗಳ ವಿರುದ್ಧ ಹೋರಾಡುವ ಸಲುವಾಗಿ ಬಳಸಲು ಯೋಜಿಸಲಾಗಿತ್ತು. ಆದರೆ ಈ ವಾಹನಗಳನ್ನು ಈ ವರ್ಷ ಜುಲೈನಿಂದ ಆಡಳಿತಾರೂಢ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಸಂಸದರು ಮತ್ತು ಶಾಸಕರಿಗೆ ಬೆಂಗಾವಲು ವಾಹನಗಳಾಗಿ ಬಳಸಲಾಗುತ್ತಿದೆ.

ಮಹಿಳೆಯರ ಸುರಕ್ಷತೆಗಾಗಿ ಕೇಂದ್ರ ನೀಡುವ ನಿರ್ಭಯಾ ನಿಧಿಯನ್ನು ಬಳಸಿ 30 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ 220 ಬೊಲೆರೋಗಳು, 35 ಎರ್ಟಿಗಾ, 313 ಪಲ್ಸರ್ ಬೈಕ್‌ಗಳು ಮತ್ತು 200 ಆಕ್ಟಿವಾಗಳನ್ನು ಖರೀದಿಸಿ ಜುಲೈ ವೇಳೆಗೆ ಪೊಲೀಸ್ ಠಾಣೆಗಳಿಗೆ ಈ ವಾಹನಗಳನ್ನು ವಿತರಿಸಲಾಗಿತ್ತು.

ಆದಾಗ್ಯೂ, ಏಕನಾಥ್ ಶಿಂಧೆ ನೇತೃತ್ವದ ಬಾಳಾಸಾಹೇಬಾಚಿ ಶಿವಸೇನಾ ಬಣದ ಎಲ್ಲಾ 40 ಶಾಸಕರು ಮತ್ತು 12 ಸಂಸದರಿಗೆ “ವೈ-ಪ್ಲಸ್ ವಿತ್ ಎಸ್ಕಾರ್ಟ್” ಭದ್ರತೆಯನ್ನು ಒದಗಿಸಲು ಈ ವಾಹನಗಳನ್ನು ಬಳಸಲಾಗುತ್ತಿದೆ. “ವೈ-ಪ್ಲಸ್ ವಿತ್ ಎಸ್ಕಾರ್ಟ್” ವರ್ಗದ ಭದ್ರತೆಯನ್ನು ಹೊಂದಿರುವವರು ಒಂದು ಬೆಂಗಾವಲು ವಾಹನವನ್ನು ಮತ್ತು ಐವರು ಪೊಲೀಸರನ್ನು ಪಡೆಯುತ್ತಾರೆ, ಅವರು 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಾರೆ.

ಈ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಜೂನ್‌ನಲ್ಲಿ ವಿವಿಧ ಪೊಲೀಸ್ ಘಟಕಗಳಿಗೆ ಹೊಸ ಬೊಲೆರೋಗಳನ್ನು ವಿತರಿಸಲಾಯಿತು. ಹಲವು ಪೊಲೀಸ್ ಠಾಣೆಗಳು ವಾಹನಗಳ ಕೊರತೆ ಎದುರಿಸುತ್ತಿವೆ. ಪೊಲೀಸ್ ಅಧಿಕಾರಿಯೊಬ್ಬರು, “ಬೊಲೆರೋಗಳನ್ನು ಮುಖ್ಯವಾಗಿ ನಗರದ 95 ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದೆ. ಕೆಲವು ಪೊಲೀಸ್ ಠಾಣೆಗಳಿಗೆ ಕೇವಲ ಒಂದು ಬೊಲೆರೋ ಸಿಕ್ಕಿದೆ, ಕೆಲವು ಠಾಣೆಗಳ ವ್ಯಾಪ್ತಿಯ ಗಾತ್ರ ಮತ್ತು ಸೂಕ್ಷ್ಮತೆಗೆ ಅನುಗುಣವಾಗಿ ಎರಡು ಸಿಕ್ಕಿವೆ.” ಎಂದಿದ್ದಾರೆ.

ವಿಐಪಿ ಭದ್ರತೆಯ ಅಗತ್ಯವನ್ನು ಪೂರೈಸಲು ವಾಹನಗಳನ್ನು ಕೋರಿದ ನಂತರ 30ಕ್ಕೂ ಹೆಚ್ಚು ವಾಹನಗಳನ್ನು ನಗರದ ಪೊಲೀಸ್ ಠಾಣೆಗಳಿಂದ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ವಾಹನಗಳ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ನೋಡಿಕೊಳ್ಳುವ ಮೋಟಾರು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಆದರೆ, ನಾನು ವಾಹನಗಳಿಗೆ ಬೇಡಿಕೆ ಇಟ್ಟಿಲ್ಲ ಎಂದು ಐಜಿ (ವಿಐಪಿ ಭದ್ರತೆ) ಕೃಷ್ಣ ಪ್ರಕಾಶ್ ಹೇಳಿದ್ದಾರೆ. ಅವರು ತಮ್ಮ ವ್ಯಾಪ್ತಿಯಲ್ಲಿ ವಾಸಿಸುವ ಶಾಸಕರ ಭದ್ರತಾ ಅಗತ್ಯಗಳಿಗಾಗಿ ಸಂಪನ್ಮೂಲಗಳನ್ನು ಒದಗಿಸುವ ಆದೇಶವನ್ನು ಮಾತ್ರ ಹೊರಡಿಸಿದ್ದಾಗಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು