ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಾಂಗ್ರೆಸ್ ಡಬಲ್ ಗೇಮ್ ಮಾಡುತ್ತಿದೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗಂಭೀರ ಆರೋಪ

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು “ಡಬಲ್ ಗೇಮ್” ಆಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಭಾನುವಾರದಂದು ಗಂಭೀರವಾಗಿ ಆರೋಪಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೇಳಿಕೆಗಳನ್ನು ಉಲ್ಲೇಖಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ, ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತಂತೆ ಕಾಂಗ್ರೆಸ್ ನೀಡುತ್ತಿರುವ ಸಂವಿಧಾನ ವಿರೋಧಿ ಹೇಳಿಕೆಗಳ ಬಗ್ಗೆ ಎಚ್ಚರದಿಂದಿರುವಂತೆ ನಿತಿನ್ ನಬಿನ್ ಅವರು ಪಕ್ಷದ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. “ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಿದಾಗ ಅದು ಕಾಂಗ್ರೆಸ್‌ಗೆ ಒಪ್ಪಿಗೆಯಾಗಿತ್ತು. ಆದರೆ ಈಗ ಬಿಜೆಪಿ ಸರ್ಕಾರ ಅದನ್ನು ಮಾಡಿದಾಗ ಕಾಂಗ್ರೆಸ್ ತಪ್ಪು ಎಂದು ಕರೆಯುತ್ತಿದೆ” ಎಂದು ನಬಿನ್ ಹೇಳಿರುವುದಾಗಿ ಸಿ.ಟಿ. ರವಿ ವಿವರಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಪ್ರತಿಯೊಂದನ್ನೂ ವಿರೋಧಿಸುವ ಒಂದು ರೀತಿಯ “ಸಿಂಡ್ರೋಮ್” ನಿಂದ ಬಳಲುತ್ತಿದೆ ಎಂದು ಬಿಜೆಪಿ ಅಧ್ಯಕ್ಷರು ಟೀಕಿಸಿದ್ದಾರೆ. ಹೊರಗಡೆ ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಲೇ, ಒಳಗಡೆ ತಳಮಟ್ಟದಲ್ಲಿ ಕ್ಯಾಂಪ್‌ಗಳನ್ನು ಆಯೋಜಿಸುವ ಮೂಲಕ ಕಾಂಗ್ರೆಸ್ ಅತ್ಯಂತ ರಹಸ್ಯವಾಗಿ ಮತದಾರರ ಮ್ಯಾಪಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ದೂರಿದ್ದಾರೆ.

ಇದರೊಂದಿಗೆ ಕಾಂಗ್ರೆಸ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿರುವ ನಿತಿನ್ ನಬಿನ್, ಕಾಂಗ್ರೆಸ್ ಪಕ್ಷವು ಈ ಹಿಂದೆ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿದ್ದ ಉಪನಾಮಗಳನ್ನು (Surnames) ಗುರುತಿಸುವ ಮೂಲಕ ಒಕ್ಕಲಿಗರು, ಲಿಂಗಾಯತರು ಮತ್ತು ಬ್ರಾಹ್ಮಣರ (G-L-B) ಮತಗಳನ್ನು ಉದ್ದೇಶಪೂರ್ವಕವಾಗಿ “ಡಿಲೀಟ್” ಮಾಡಿತ್ತು ಎಂದು ಆರೋಪಿಸಿದ್ದಾರೆ. ತಮಗೆ ಮತ ಹಾಕದ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಈ ಕೃತ್ಯ ಎಸಗಿತ್ತು ಎಂದು ಅವರು ಹೇಳಿದ್ದಾರೆ.

ಮತಗಳ ಕಡಿತದ ವಿರುದ್ಧ ಎಚ್ಚರಿಕೆ: “ಪ್ರತಿ ಬೂತ್‌ನಲ್ಲಿ ಕೇವಲ 20 ಮತದಾರರ ಹೆಸರುಗಳನ್ನು ತೆಗೆದುಹಾಕಿದರೂ ಸಹ, ಇಡೀ ಕ್ಷೇತ್ರದಲ್ಲಿ ಸುಮಾರು 4,000 ಮತಗಳ ನಷ್ಟವಾಗುತ್ತದೆ. ಆದ್ದರಿಂದ ನಮ್ಮ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ನಾಯಕರು ಅತ್ಯಂತ ಜಾಗರೂಕರಾಗಿರಬೇಕು” ಎಂದು ಬಿಜೆಪಿ ಅಧ್ಯಕ್ಷರು ತಮ್ಮ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ಭಾರಿ ದ್ರೋಹ ಮಾಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದೊಳಗಿನ ಆಂತರಿಕ ಅಧಿಕಾರ ಹಪಾಹಪಿಯಿಂದಾಗಿ ಜನ ಕಲ್ಯಾಣ ಕಾರ್ಯಕ್ರಮಗಳು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿವೆ ಮತ್ತು ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದರೆ, ಅವರದೇ ಸಚಿವರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಬಡವರ ಜೀವನ ಸುಧಾರಿಸಲು ಗ್ಯಾರಂಟಿಗಳನ್ನು ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು, ಆದರೆ ಇಂದು ನಿರಂತರವಾಗಿ ಹೆಚ್ಚುತ್ತಿರುವ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಮೇಲೆ ಭಾರಿ ಆರ್ಥಿಕ ಹೊರೆ ಬಿದ್ದಿದೆ ಎಂದು ಸಿ.ಟಿ. ರವಿ ಅವರು ನಬಿನ್ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. “ಇಂದು ರಾಜ್ಯದಲ್ಲಿ ಉತ್ತಮ ಜೀವನಕ್ಕೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿದೆ. ಕರ್ನಾಟಕ ಸರ್ಕಾರವು ದೆಹಲಿಯ ಕಾಂಗ್ರೆಸ್ ನಾಯಕರಿಗೆ ಕೇವಲ ಒಂದು ‘ಎಟಿಎಂ’ (ATM) ಆಗಿ ಮಾರ್ಪಟ್ಟಿದೆ” ಎಂದು ನಬಿನ್ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ನಿತಿನ್ ನಬಿನ್ ಅವರು ತಡರಾತ್ರಿ ರಾಜಭವನಕ್ಕೆ ಸೌಜನ್ಯದ ಭೇಟಿ ನೀಡಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು