Monday, December 15, 2025

ಸತ್ಯ | ನ್ಯಾಯ |ಧರ್ಮ

ಬಿಹಾರ ಸಚಿವ ನಿತಿನ್ ನಬಿನ್ ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ

ನವದೆಹಲಿ: ಭಾರತೀಯ ಜನತಾ ಪಕ್ಷವು (ಬಿಜೆಪಿ) ಭಾನುವಾರ ಬಿಹಾರ ಸರ್ಕಾರದ ಸಚಿವ ನಿತಿನ್ ನಬಿನ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ. ಈ ನೇಮಕ ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಪಕ್ಷ ಪ್ರಕಟಿಸಿದೆ.

ಪ್ರಸ್ತುತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ರಸ್ತೆ ನಿರ್ಮಾಣ ಖಾತೆಯನ್ನು ಹೊಂದಿರುವ ನಿತಿನ್ ನಬಿನ್ ಅವರನ್ನು ಪಕ್ಷದ ಸಂಸದೀಯ ಮಂಡಳಿಯ ಅನುಮೋದನೆಯ ಬಳಿಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೊರಡಿಸಿದ ಆದೇಶದ ಮೂಲಕ ಈ ಹುದ್ದೆಗೆ ನೇಮಕ ಮಾಡಲಾಗಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸ ಸಾರಥಿಯಾಗಿ ನಿತಿನ್ ನಬಿನ್ ಅವರನ್ನು ಆಯ್ಕೆ ಮಾಡಲಾಗಿದೆ. ಜನವರಿ 2024ರಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಕೇಂದ್ರ ಆರೋಗ್ಯ ಸಚಿವರಾಗಿಯೂ ಇರುವ ನಡ್ಡಾ ಅವರಿಗೆ ಸಾರ್ವತ್ರಿಕ ಚುನಾವಣೆಗಳು ಮುಗಿಯುವವರೆಗೆ ಅವಧಿ ವಿಸ್ತರಣೆ ನೀಡಲಾಗಿತ್ತು.

ಪಕ್ಷದ ಸಂವಿಧಾನದ ಪ್ರಕಾರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅವಧಿ ಮೂರು ವರ್ಷಗಳಾಗಿದ್ದು, ಗರಿಷ್ಠ ಎರಡು ಅವಧಿಗಳವರೆಗೆ ಹುದ್ದೆಯಲ್ಲಿ ಇರಬಹುದಾಗಿದೆ. ರಾಷ್ಟ್ರೀಯ ಹಾಗೂ ರಾಜ್ಯ ಮಂಡಳಿಗಳ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕನಿಷ್ಠ ಶೇ.50 ರಾಜ್ಯಗಳಲ್ಲಿ ಮಂಡಲ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸದಸ್ಯತ್ವ ಅಭಿಯಾನ ಮತ್ತು ಸಾಂಸ್ಥಿಕ ಚುನಾವಣೆಗಳ ನಂತರ ಆರಂಭವಾಗುತ್ತದೆ. ಬಳಿಕ ರಾಜ್ಯಗಳು ಮತ್ತು ಸಂಸದೀಯ ಪಕ್ಷವು ಉಮೇದುವಾರಿಕೆಯನ್ನು ಪ್ರಸ್ತಾವಿಸುತ್ತದೆ.

ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿರುವ ನಿತಿನ್ ನಬಿನ್ ಅವರ ನೇಮಕ ತಕ್ಷಣವೇ ಜಾರಿಗೆ ಬಂದಿದೆ ಎಂದು ಬಿಜೆಪಿ ತಿಳಿಸಿದೆ. ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಬಿನ್ ಅವರಿಗೆ ಪಕ್ಷದ ಕೇಂದ್ರ ನಾಯಕತ್ವ ಮತ್ತು ರಾಜ್ಯ ಘಟಕಗಳ ನಡುವೆ ಸಮನ್ವಯ ಸಾಧಿಸುವುದು, ಸಾಂಸ್ಥಿಕ ವ್ಯವಹಾರಗಳ ಮೇಲ್ವಿಚಾರಣೆ ಹಾಗೂ ದೇಶಾದ್ಯಂತ ಬಿಜೆಪಿಯ ರಾಜಕೀಯ ಮತ್ತು ಚುನಾವಣಾ ಕಾರ್ಯತಂತ್ರಗಳ ಜಾರಿಗೆ ನೆರವು ನೀಡುವ ಜವಾಬ್ದಾರಿಗಳನ್ನು ವಹಿಸಲಾಗಿದೆ.

ನಿತಿನ್ ನಬಿನ್ ಕುಟುಂಬ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರ ತಂದೆ ನಬಿನ್ ಕಿಶೋರ್ ಪ್ರಸಾದ್ ಸಿನ್ಹ ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕರಾಗಿದ್ದರು. ತಂದೆಯ ನಿಧನದ ಬಳಿಕ ನಿತಿನ್ ನಬಿನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿ, ಕಾರ್ಯಕರ್ತನಾಗಿ ಆರಂಭಿಸಿ, ಮುಖಂಡ, ಶಾಸಕ ಮತ್ತು ನಂತರ ಸಚಿವರಾಗಿ ಹಂತ ಹಂತವಾಗಿ ಮೇಲೇರಿದ್ದಾರೆ. ಪ್ರಸ್ತುತ ಅವರು ನಿತೀಶ್ ಕುಮಾರ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿತಿನ್ ನಬಿನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಬಿನ್ ಅವರು ಕಠಿಣ ಪರಿಶ್ರಮಿ ಮತ್ತು ಸಮರ್ಪಿತ ಕಾರ್ಯಕರ್ತರಾಗಿದ್ದು, ಅವರ ಶಕ್ತಿ ಹಾಗೂ ಬದ್ಧತೆ ಪಕ್ಷವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಿತಿನ್ ನಬಿನ್ ಅವರು ಯುವ ಮತ್ತು ಶ್ರಮಶೀಲ ನಾಯಕರಾಗಿದ್ದು, ಶಾಸಕರಾಗಿ ಹಾಗೂ ಸಚಿವರಾಗಿ ಜನರ ಆಕಾಂಕ್ಷೆಗಳನ್ನು ಈಡೇರಿಸಲು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರ ವಿನಮ್ರ ಸ್ವಭಾವ ಮತ್ತು ವ್ಯವಸ್ಥಿತ ಕಾರ್ಯಶೈಲಿ ಪ್ರಶಂಸನೀಯವಾಗಿದೆ ಎಂದು ಮೋದಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page