Saturday, June 15, 2024

ಸತ್ಯ | ನ್ಯಾಯ |ಧರ್ಮ

ನೆಹರೂ ಮ್ಯೂಸಿಯಂ ಹೆಸರು ಬದಲಾಯಿಸಿದ ಕೇಂದ್ರ

ದೆಹಲಿ: ಹೆಸರು ಬದಲಾವಣೆಗೆ ಒತ್ತು ನೀಡಿರುವ ಕೇಂದ್ರದ ಬಿಜೆಪಿ ಸರ್ಕಾರ ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ. ಈಗ ರಾಜಧಾನಿ ಹೊಸದೆಹಲಿಯಲ್ಲಿರುವ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ (NMML) ಹೆಸರನ್ನು ಬದಲಾಯಿಸಲಾಗಿದೆ.

ಇನ್ನು ಮುಂದೆ ಈ ಮ್ಯೂಸಿಯಂ ಪ್ರಧಾನ ಮಂತ್ರಿ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ (ಪಿಎಂಎಂಎಲ್) ಹೆಸರಿನಲ್ಲಿ ಮುಂದುವರಿಯುತ್ತದೆ. ಈ ಸಂಬಂಧ ಕೇಂದ್ರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಮಾತಿನ ಚಕಮಕಿ ಮುಂದುವರಿದಿದೆ. ಇತಿಹಾಸದ ಪುಟಗಳಿಂದ ನೆಹರೂ ಹೆಸರನ್ನು ಅಳಿಸಿ ಹಾಕಲು ಪ್ರಧಾನಿ ಮೋದಿ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಿಟ್ಟಿಗೆದ್ದಿದ್ದರೆ, ಎಲ್ಲ ಪ್ರಧಾನಿಗಳಿಗೂ ಸಮಾನ ಆದ್ಯತೆ ನೀಡಲಾಗಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ. ಅಂತರಾಷ್ಟ್ರೀಯ ಖ್ಯಾತಿಯ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ (NMML) ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಅದೀಗ ವಿವಾದಕ್ಕೆ ಕಾರಣವಾಗಿದೆ.

ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವು ಇನ್ನು ಮುಂದೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಎಂದು ಕರೆಯಲ್ಪಡುತ್ತದೆ. ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ವೈವಿಧ್ಯತೆಯನ್ನು ತೋರಿಸಲು ಈ ಹೆಸರು ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಗಳು ಇದೇ ತಿಂಗಳ 14ರಿಂದ ಜಾರಿಗೆ ಬಂದಿವೆ ಎಂದು ಪಿಎಂಎಂಎಲ್ ಉಪಾಧ್ಯಕ್ಷ ಸೂರ್ಯಪ್ರಕಾಶ್ ಬಹಿರಂಗಪಡಿಸಿದರು. ತೀನ್‌ಮೂರ್ತಿ ಕಟ್ಟಡವು 16 ವರ್ಷಗಳ ಕಾಲ ನೆಹರೂ ಅವರ ಅಧಿಕೃತ ನಿವಾಸವಾಗಿತ್ತು. ಅದರ ನಂತರ ಏಪ್ರಿಲ್ 1, 1966ರಂದು ನೆಹರೂ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಯಿತು.

ಮಾಜಿ ಪ್ರಧಾನಿ ಕಾಂಗ್ರೆಸ್ ನಾಯಕ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಪರಂಪರೆಯ ಅಪಖ್ಯಾತಿ ಪ್ರಧಾನಿ ಮೋದಿಯವರ ಅಜೆಂಡಾ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಲಾಗಿದೆ. ‘‘ಪ್ರಧಾನಿ ಮೋದಿ ಅವರು ಅಭದ್ರತೆ ಮತ್ತು ಭಯದ ನಡುವೆ ನೆಹರೂ ಮ್ಯೂಸಿಯಂ ಹೆಸರನ್ನು ಬದಲಾಯಿಸಿದ್ದಾರೆ. ಅವರು ನೆಹರೂ ಅವರ ಪರಂಪರೆಯನ್ನು ನಾಶಮಾಡಲು ಬಯಸುತ್ತಾರೆ. ಮ್ಯೂಸಿಯಂ ಹೆಸರಿನಲ್ಲಿನ, ಎನ್ ಅನ್ನು ಪಿ ಎಂದು ಬದಲಾಯಿಸಲಾಗಿದೆ. ನೆಹರು ಅವರ ಹೆಸರನ್ನು ಬದಲಾಯಿಸಿದರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಅವರು ವಹಿಸಿದ ಪಾತ್ರವನ್ನು ಮತ್ತು ಅವರು ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವನ್ನು ಮುನ್ನಡೆಸಿದ್ದನ್ನು ಅಳಿಸಲು ಸಾಧ್ಯವಿಲ್ಲ” ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಆದರೆ ಕಾಂಗ್ರೆಸ್ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ದೇಶದ ಎಲ್ಲ ಪ್ರಧಾನಿಗಳ ಸಾಧನೆಯನ್ನು ಜಗತ್ತಿಗೆ ತೋರಿಸಲು ಮ್ಯೂಸಿಯಂ ಹೆಸರನ್ನು ಬದಲಾಯಿಸಿರುವುದು ಸ್ಪಷ್ಟವಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ, ಪಿ.ವಿ.ನರಸಿಂಹರಾವ್, ಎಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ್ ಅವರಂತಹ ಅನೇಕರು ಭಾರತವನ್ನು ಶ್ರೇಷ್ಠಗೊಳಿಸಿದ್ದು, ಈ ಮ್ಯೂಸಿಯಂ ಯಾವುದೇ ವ್ಯಕ್ತಿ ಅಥವಾ ಕುಟುಂಬಕ್ಕೆ ಸೇರಿದ್ದಲ್ಲ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿಗೆ ಗೌರವ ಸೂಚಿಸಲು ಹೆಸರು ಬದಲಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು