ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವವರು ಮತ್ತು ಪಾಕಿಸ್ತಾನದ ಧ್ವಜ ಹಾರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವ ಕಾಂಗ್ರೆಸ್ ಸರ್ಕಾರ, ಮದ್ದೂರಿನಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸಿದವರ ಬಗ್ಗೆ ಭಾವೋದ್ವೇಗದಿಂದ ಮಾತನಾಡಿದ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು, ಸರ್ಕಾರವು ದೇಶವಿರೋಧಿ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬುಧವಾರ ನಡೆದ ಗಣೇಶ ಚತುರ್ಥಿ ಆಚರಣೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ.ವೈ. ವಿಜಯೇಂದ್ರ ಹೇಳಿಕೆ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, “ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವವರು, ಪಾಕಿಸ್ತಾನ್ ಧ್ವಜ ಹಾರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವ ಕಾಂಗ್ರೆಸ್ ಸರ್ಕಾರ, ಮದ್ದೂರಿನಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಭಾವೋದ್ವೇಗದಲ್ಲಿ ಮಾತನಾಡಿದ ಸಿ.ಟಿ. ರವಿ ಅವರ ಮೇಲೆ ಎಫ್‌ಐಆರ್ ದಾಖಲಿಸುವ ಮೂಲಕ, ತಮ್ಮದು ಪಕ್ಷಪಾತಿ ಮತ್ತು ವಿದ್ರೋಹಿಗಳಿಗೆ ಬೆಂಬಲ ನೀಡುವ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ.”
“ಭಾರತೀಯತೆ ಮತ್ತು ಹಿಂದುತ್ವದ ಪರವಾಗಿ ಹೋರಾಡುವುದು ಬಿಜೆಪಿಯ ಪ್ರಮುಖ ಆದ್ಯತೆಯಾಗಿದೆ. ಅದನ್ನು ಹತ್ತಿಕ್ಕಲು ಎಷ್ಟೇ ಪ್ರಯತ್ನಿಸಿದರೂ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರಿಗೂ ಇದೆ. ನಮ್ಮ ಪ್ರಮುಖ ನಾಯಕರಾದ ಸಿ.ಟಿ. ರವಿ ಅವರ ಮೇಲೆ ದಾಖಲಾಗಿರುವ ಎಫ್‌ಐಆರ್ ಅನ್ನು ನಾವು ಹೋರಾಟದ ಒಂದು ಭಾಗವೆಂದು ಸ್ವೀಕರಿಸಿದ್ದೇವೆ. ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ಜನರು ತಿರಸ್ಕರಿಸಲಿದ್ದಾರೆ” ಎಂದು ಅವರು ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, “ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಕೇಸ್ ದಾಖಲಿಸುತ್ತಿದೆ. ಇಂತಹ ದ್ವೇಷದ ರಾಜಕಾರಣ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ನಡೆದಿರಲಿಲ್ಲ. ಸರ್ಕಾರ ಕೂಡಲೇ ಸಿ.ಟಿ. ರವಿ ಅವರ ಮೇಲಿನ ಕೇಸ್ ಅನ್ನು ವಾಪಸ್ ಪಡೆಯಬೇಕು.”
“ಮದ್ದೂರಿನಲ್ಲಿ ಮುಸಲ್ಮಾನರೇ ಕಲ್ಲು ತೂರಾಟ ಮಾಡಿದ್ದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೇ ಒಪ್ಪಿಕೊಂಡಿದ್ದಾರೆ,” ಎಂದು ಅಶೋಕ್ ಹೇಳಿದರು. ಮದ್ದೂರಿನಲ್ಲಿ ಕಳೆದ ಭಾನುವಾರ ನಡೆದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ, ಕೋಮು ಗಲಭೆಗೆ ಮತಾಂಧ ಮುಸ್ಲಿಂ ಕಿಡಿಗೇಡಿಗಳೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಒಪ್ಪಿಕೊಂಡಿರುವುದು ಸ್ವಾಗತಾರ್ಹ.
“ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಸತ್ಯವನ್ನು ಒಪ್ಪಿಕೊಳ್ಳುತ್ತಾರಾ? ಅಥವಾ ಸತ್ಯ ಹೇಳಿದ್ದಕ್ಕಾಗಿ ಮಾಜಿ ಸಚಿವ ರಾಜಣ್ಣ ಅವರನ್ನು ಏಕಾಏಕಿ ಸಂಪುಟದಿಂದ ವಜಾ ಮಾಡಿದಂತೆ, ಚಲುವರಾಯಸ್ವಾಮಿ ಅವರನ್ನೂ ಸಂಪುಟದಿಂದ ವಜಾ ಮಾಡುತ್ತಾರಾ?” ಎಂದು ಅಶೋಕ್ ವ್ಯಂಗ್ಯವಾಡಿದರು.