Wednesday, August 20, 2025

ಸತ್ಯ | ನ್ಯಾಯ |ಧರ್ಮ

ಅಂಚೆ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಮದ್ಯಪಾನ ಮಾಡಿಲ್ಲಾ – ಅಧಿಕಾರಿಗಳ ಸ್ಪಷ್ಟನೆ

ಬೇಲೂರು : ಸ್ವಾತಂತ್ರ್ಯ ದಿನಾಚರಣೆಯಂದು ಪಟ್ಟಣದ ಅಂಚೆ ಕಚೇರಿಯಲ್ಲಿ ಯಾವುದೇ ರೀತಿಯಲ್ಲಿ ಕಚೇರಿ ಸಿಬ್ಬಂದಿಗಳಿಂದ ಕರ್ತವ್ಯ ಲೋಪ ಆಗಿಲ್ಲ ಎಂದು ಪೊಸ್ಟ್ ಮಾಸ್ಟರ್ ಮೋಹನ್ ಸ್ಪಷ್ಟಪಡಿಸಿದ್ದಾರೆ. ಆ.೧೫ ರಂದು ಅಂಚೆ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಮದ್ಯಪಾನ ಮಾಡಿ, ಮಾಂಸಾಹಾರ ಸೇವನೆ ಮಾಡಿ ಡಿಜೆ ನೃತ್ಯ ಹಾಕಿ ಕುಣಿದಿದ್ದಾರೆಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ಕಚೇರಿ ಹಾಗೂ ಸಿಬ್ಬಂದಿ ಬಗ್ಗೆಯೂ ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ಹರಿಬಿಟ್ಟಿದ್ದಾರೆ.

ಅದೆಲ್ಲ ಸುಳ್ಳು, ಅಂದು ಪಲಾವ್ ಮತ್ತು ಕೇಸರಿಬಾತ್ ನಷ್ಟೇ ಮಾಡಲಾಗಿತ್ತು. ಕಚೇರಿ ಸುತ್ತಲೂ ಹಾಗೂ ಒಳಭಾಗದಲ್ಲಿ ಸಿಸಿ ಟಿವಿ ಕ್ಯಾಮರಾ ಇದ್ದು ಅವುಗಳನ್ನು ಪರಿಶೀಲಿಸಬಹುದು ಎಂದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಎನ್ನುವುದು ನಮಗೆಲ್ಲಾ ಹಬ್ಬದಂತೆ. ನಮ್ಮ ವ್ಯಾಪ್ತಿಯಲ್ಲಿ ೧೬ ಶಾಖಾ ಅಂಚೆ ಕಚೇರಿಯಿದ್ದು, ೩ ವರ್ಷಗಳಿಂದ ಎಲ್ಲಾ ೪೦ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಂದು ಭಾಷಣ, ಚರ್ಚಾ ಸ್ಪರ್ಧೆ ಸೇರಿ ಕ್ರೀಡಾ ಕೂಟ ಆಯೋಜಿಸಿಕೊಂಡು ಬರಲಾಗುತ್ತಿದೆ. ೨ ವರ್ಷಗಳಿಂದ ಉಪಹಾರ ಇಲ್ಲೇ ಸಿದ್ದ ಪಡಿಸಿ ಎಲ್ಲರೂ ಒಟ್ಟಿಗೆ ಸೇರಿ ಸೇವಿಸುತ್ತೇವೆ. ಆದರೆ ಹಿಂದೆ ಅಂಚೆ ಕಚೇರಿಯಲ್ಲಿದ್ದ ಕೆಲವರು, ಕೆಲಸದ ವೇಳೆ ಸಾರ್ವಜನಿಕರ ಹಣ ಹಾಗೂ ಕಚೇರಿಯ ನಿಯಮಗಳನ್ನು ವೈಯಕ್ತಿಕವಾಗಿ ಬಳಸಿ ಕೊಂಡಿದ್ದವರಿಗೆ ನೋಟಿಸ್ ನೀಡಿ ಅಮಾನತು ಗೊಳಿಸಲಾಗಿದೆ.

ಇದನ್ನೇ ಕಾರಣವಾಗಿಟ್ಟುಕೊಂಡು ಕಾರ್ಯಕ್ರಮದ ವಿಡಿಯೋಗಳನ್ನು ತಮ್ಮ ನೌಕರರು ಮೊಬೈಲ್‌ನಲ್ಲಿ ಹಂಚಿಕೊಂಡಿದ್ದು ಅದನ್ನೇ ದುರುಪಯೋಗ ಪಡಿಸಿಕೊಂಡು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅಂದು ಯಾವುದೇ ಡಿಜೆ ಉಪಯೋಗಿಸಿಲ್ಲ, ಕೇವಲ ಮೈಕ್ ಹಾಕಿ ದೇಶ ಭಕ್ತಿಗೀತೆಗಳ ಸ್ಪರ್ಧೆ ಏರ್ಪಡಿಸಿದ್ದು ನಿಜ, ಬಂದ ನೌಕರರಿಗೆ ಉಪಾಹಾರ ವ್ಯವಸ್ಥೆ ಮಾಡಿದ್ದು ನಿಜ, ಅಂದು ಚಾಲಕರ ಸಂಘದಿಂದ ಉಪಾಹಾರ ವ್ಯವಸ್ಥೆ ಇತ್ತು. ಕಚೇರಿ ಮುಂಭಾಗದಲ್ಲಿ ಸಹ ಸಣ್ಣ ಪುಟ್ಟ ವ್ಯಾಪಾರಸ್ಥರಿಗೂ ಕರೆದು ಉಪಾಹಾರ ನೀಡಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಕೇವಲ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸುಳ್ಳು ಮಾಹಿತಿ ನೀಡಿದ್ದು, ನಾವು ಸಹ ಇದರ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಸಂಪೂರ್ಣ ಸಿಸಿ ಕ್ಯಾಮರಾ, ಫೋಟೋ ಹಾಗೂ ವಿಡಿಯೋ ನೀಡಿದ್ದೇವೆ ಎಂದರು. ಬಾಡೂಟ ಮಾಡದೇ ಇದ್ದರೂ ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page