Home ದೇಶ ಇಂದಿನಿಂದ ನಾಲ್ಕು ದಿನ ಬ್ಯಾಂಕ್ ಸೇವೆ ಇಲ್ಲ: ಮುಷ್ಕರಕ್ಕೆ ಬ್ಯಾಂಕ್ ಯೂನಿಯನ್‌ಗಳ ಕರೆ

ಇಂದಿನಿಂದ ನಾಲ್ಕು ದಿನ ಬ್ಯಾಂಕ್ ಸೇವೆ ಇಲ್ಲ: ಮುಷ್ಕರಕ್ಕೆ ಬ್ಯಾಂಕ್ ಯೂನಿಯನ್‌ಗಳ ಕರೆ

0

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ದೇಶಾದ್ಯಂತ ಸೆಪ್ಟೆಂಬರ್ 11ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದ್ದು, ಗ್ರಾಹಕರಿಗೆ ಸತತ ನಾಲ್ಕು ದಿನ ಬ್ಯಾಂಕ್ ಶಾಖೆಗಳ ಸೇವೆ ಲಭ್ಯವಾಗುವುದಿಲ್ಲ.

ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿ ಜಾರಿಗೆ ತರುವುದು, ಪಿಂಚಣಿ ಸಂಬಂಧಿತ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವುದು ಹಾಗೂ ಕೆಲಸದ ಸಾಮರ್ಥ್ಯ ಆಧರಿತ ಪ್ರೋತ್ಸಾಹ ಯೋಜನೆಗಳನ್ನು ಜಾರಿಗೆ ತರುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಬ್ಯಾಂಕ್ ಯೂನಿಯನ್‌ಗಳು ಮುಂದಿಟ್ಟಿವೆ.

ಈ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಷ್ಕರ ನಡೆಸಲಾಗುತ್ತಿದೆ ಎಂದು ಯೂನಿಯನ್‌ಗಳು ತಿಳಿಸಿವೆ. ಮುಷ್ಕರದ ದಿನವಾದ ಸೆಪ್ಟೆಂಬರ್ 11ರ ಬಳಿಕ ಸೆಪ್ಟೆಂಬರ್ 12ರಂದು ಎರಡನೇ ಶನಿವಾರದ ರಜೆ ಹಾಗೂ ಸೆಪ್ಟೆಂಬರ್ 13ರಂದು ಭಾನುವಾರದ ರಜೆ ಇರಲಿದೆ. ನಂತರ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ರಜೆ ಇರುವುದರಿಂದ ಸತತ ನಾಲ್ಕು ದಿನ ಬ್ಯಾಂಕ್ ಶಾಖೆಗಳ ಸಾಮಾನ್ಯ ಕಾರ್ಯಾಚರಣೆಗೆ ಅಡಚಣೆ ಉಂಟಾಗಲಿದೆ.

ಬ್ಯಾಂಕ್ ಶಾಖೆಗಳು ಮುಚ್ಚಿರುವ ಅವಧಿಯಲ್ಲಿ ನಗದು ಠೇವಣಿ, ಹಣ ತೆಗೆಯುವುದು, ಚೆಕ್‌ ಸಂಬಂಧಿತ ವ್ಯವಹಾರ ಸೇರಿದಂತೆ ಶಾಖಾ ಆಧಾರಿತ ಸೇವೆಗಳಲ್ಲಿ ತೊಂದರೆ ಎದುರಾಗುವ ಸಾಧ್ಯತೆಯಿದೆ. ಆದರೆ ಎಟಿಎಂ, ಯುಪಿಐ, ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಸೇವೆಗಳು ಎಂದಿನಂತೆ ಲಭ್ಯವಿರುವ ಸಾಧ್ಯತೆಯಿದೆ.

ನಾಲ್ಕು ದಿನಗಳ ಕಾಲ ಬ್ಯಾಂಕ್ ಶಾಖೆಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿರುವ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಅಗತ್ಯದ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಿಕೊಳ್ಳುವಂತೆ ಸೂಚಿಸಲಾಗಿದೆ.

You cannot copy content of this page

Exit mobile version