Wednesday, February 25, 2026

ಸತ್ಯ | ನ್ಯಾಯ |ಧರ್ಮ

ದೈವಪಾತ್ರ ಅವಹೇಳನ ಆರೋಪ: ರಣ್‌ವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮ ಬೇಡ – ಹೈಕೋರ್ಟ್

ಬೆಂಗಳೂರು: ‘ಕಾಂತಾರ ಚಾಪ್ಟರ್-1’ ಚಿತ್ರದ ದೈವಪಾತ್ರದ ಕುರಿತು ಅವಹೇಳನಕಾರಿ ಸನ್ನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣ್‌ವೀರ್ ಸಿಂಗ್ ವಿರುದ್ಧ ಮುಂದಿನ ವಿಚಾರಣೆಯವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಮಧ್ಯಂತರ ನಿರ್ದೇಶನ ನೀಡಿದೆ.

ಚಾವುಂಡಿ ದೈವಕ್ಕೆ ಅವಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ತನಿಖೆಗೆ ಸಹಕರಿಸುವಂತೆ ಸೂಚನೆ
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ಗೋವಾದಲ್ಲಿ ಇತ್ತೀಚೆಗೆ ನಡೆದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ಕಾರ್ಯಕ್ರಮದಲ್ಲಿ ‘ಕಾಂತಾರ ಚಾಪ್ಟರ್-1’ ಕುರಿತು ಮಾತನಾಡುವ ವೇಳೆ ಉಂಟಾದ ಹೇಳಿಕೆಗೆ ತಕ್ಷಣವೇ ಕ್ಷಮೆ ಕೋರಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಯಾವುದೇ ಉದ್ದೇಶಪೂರ್ವಕ ಅವಹೇಳನ ಮಾಡಿಲ್ಲ; ನಡೆದ ಪ್ರಮಾದವನ್ನು ಸರಿಪಡಿಸಲು ಸಿದ್ಧರಿದ್ದಾರೆ ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ತನಿಖೆಗೆ ಸಂಪೂರ್ಣ ಸಹಕರಿಸಬೇಕು ಎಂದು ಸೂಚಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯವರೆಗೆ ರಣವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸ್ಪಷ್ಟಪಡಿಸಿತು. ಜೊತೆಗೆ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಹಾಗೂ ದೂರುದಾರರಿಗೆ ಸೂಚನೆ ನೀಡಿ, ವಿಚಾರಣೆಯನ್ನು ಸೋಮವಾರ (ಮಾ.2) ಸಂಜೆ 4 ಗಂಟೆಗೆ ಮುಂದೂಡಿತು.

“ಕ್ಷಮೆ ಕೋರಿರಬಹುದು, ಆದರೆ ಇಂಟರ್‌ನೆಟ್ ಮರೆತಿಲ್ಲ”
ವಿಚಾರಣೆ ವೇಳೆ ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ದೈವಪಾತ್ರವನ್ನು ನಿರ್ವಹಿಸಿರುವ ರಿಷಬ್ ಶೆಟ್ಟಿ ಅವರ ಅಭಿನಯವನ್ನು “ಮಹಿಳಾ ದೆವ್ವ” ಎಂದು ಮಿಮಿಕ್ರಿ ಮಾಡಿರುವುದು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿತು. ಜನಪ್ರಿಯ ನಟನಾಗಿ ಸಮಾಜದ ಮೇಲೆ ಪ್ರಭಾವ ಹೊಂದಿರುವ ವ್ಯಕ್ತಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು; ದೈವವನ್ನು ದೆವ್ವ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿತು. “ಕ್ಷಮೆ ಕೋರಿರಬಹುದು, ಆದರೆ ಇಂಟರ್‌ನೆಟ್ ಏನನ್ನೂ ಮರೆತುದಿಲ್ಲ” ಎಂದು ನ್ಯಾಯಮೂರ್ತಿ ಹೇಳಿದರು.

ದೂರುದಾರರ ಪರ ವಕೀಲರು, ಘಟನೆ ನಡೆದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಬೇಡವೆಂದು ಸೂಚಿಸಿದ್ದರೂ ರಣವೀರ್ ಸಿಂಗ್ ತಮ್ಮ ಮಾತು ಮುಂದುವರಿಸಿದ್ದರು ಎಂದು ಆರೋಪಿಸಿದರು. ಜೊತೆಗೆ, ರಣವೀರ್ ಸಿಂಗ್ ಅವರ ಪತ್ನಿ ದೀಪಿಕಾ ಪಡುಕೋಣೆ ಕರ್ನಾಟಕದವರಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಆಚರಣೆಗಳ ಬಗ್ಗೆ ಅರಿವು ಇರಬೇಕೆಂದು ವಾದಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page