Saturday, August 16, 2025

ಸತ್ಯ | ನ್ಯಾಯ |ಧರ್ಮ

ಟ್ರಂಪ್ – ಪುಟಿನ್ ನಡುವಿನ ಮಾತುಕತೆಯಲ್ಲಿ ಮೂಡದ ಒಮ್ಮತ, ಭಾರತಕ್ಕೆ ಇನ್ನಷ್ಟು ಸುಂಕ ಹೆಚ್ಚಳದ ನಿರೀಕ್ಷೆ

ಅಲಾಸ್ಕಾದಲ್ಲಿ ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ನಡೆದ ಡೊನಾಲ್ಡ್ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಯಾವುದೇ ರೀತಿಯ ಒಮ್ಮತದ ಒಪ್ಪಂದ ಏರ್ಪಟ್ಟಿಲ್ಲ ಎಂದು ತಿಳಿದು ಬಂದಿದೆ. ಈ ಬೆಳವಣಿಗೆ ಭಾರತದ ಮೇಲೆ ಅಮೆರಿಕ ಇನ್ನಷ್ಟು ಸುಂಕದ ಬರೆ ಎಳೆಯಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧ ಮತ್ತು ಯುರೋಪಿನ ಭದ್ರತಾ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಇಡೀ ಜಗತ್ತು ಟ್ರಂಪ್ ಹಾಗೂ ಪುಟಿನ್ ನಡುವಣ ಉನ್ನತ ಮಟ್ಟದ ಶೃಂಗಸಭೆಯತ್ತ ಚಿತ್ತ ನೆಟ್ಟಿತ್ತು. ಉಕ್ರೇನ್ ಪರವಾಗಿ ಅಮೇರಿಕಾ ನಿಂತಿತ್ತು.. ಜೊತೆಗೆ ರಷ್ಯಾ ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವುದು ನಮ್ಮ ಗುರಿ ಎಂದು ಟ್ರಂಪ್ ಹೇಳಿದ್ದರು.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಶೀಘ್ರದಲ್ಲೇ ಭೇಟಿಯಾಗುವುದಾಗಿ ಪುಟಿನ್ ಅವರಿಂದ ಭರವಸೆ ಪಡೆಯುವುದು ತಮ್ಮ ಗುರಿ ಎಂದೂ ಟ್ರಂಪ್ ಹೇಳಿದ್ದರು.

ದ್ವಿಪಕ್ಷೀಯ ಮಾತುಕತೆಯ ಬಗ್ಗೆ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಕೆಲವು ಪ್ರಗತಿ ಸಾಧಿಸಲಾಗಿದೆ. ಆದರೆ, ದೊಡ್ಡ ಸಮಸ್ಯೆಗಳು ಇನ್ನೂ ಹಾಗೇ ಉಳಿದಿವೆ ಎಂದಿದ್ದಾರೆ. ಮಾತುಕತೆಯಲ್ಲಿ ಹಲವು ಅಂಶಗಳ ಬಗ್ಗೆ ಸಹಮತಕ್ಕೆ ಬರಲಾಗಿದೆ. ಆದರೆ ಕೆಲವು ಅಂಶಗಳು ಉಳಿದಿವೆ ಎಂದು ಮುಖ್ಯ ವಿಚಾರಗಳ ಬಗ್ಗೆ ಪ್ರಸ್ತಾಪಿಸದೇ ಹಾಗೇ ಹೇಳಿಕೆ ನೀಡಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ ಅವರು ಝೆಲೆನ್ಸ್ಕಿ ಮತ್ತು ಯುರೋಪಿಯನ್ ನಾಯಕರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ ಎಂದು ಟ್ರಂಪ್ ಹೇಳಿದರೆ, ಯುದ್ಧವನ್ನು ಕೊನೆಗೊಳಿಸಲು ಪ್ರಾಮಾಣಿಕವಾಗಿ ಆಸಕ್ತಿ ಹೊಂದಿರುವುದಾಗಿ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಆದರೆ ಅದಕ್ಕೂ ಮೊದಲು ಸಂಘರ್ಷದ ಪ್ರಮುಖ ಕಾರಣಗಳನ್ನು ಪರಿಹರಿಸಬೇಕು ಎಂದಿದ್ದಾರೆ. 

ಪುಟಿನ್ ಜತೆಗಿನ ಮಾತುಕತೆ ವಿಫಲವಾದರೆ ಭಾರತದ ಉತ್ಪನ್ನಗಳ ಮೇಲೆ ಮತ್ತೆ ಶೇ 50 ರಷ್ಟು ಸುಂಕ ವಿಧಿಸುವುದಾಗಿ ಶುಕ್ರವಾರವಷ್ಟೇ ಅಮೆರಿಕ ಎಚ್ಚರಿಕೆ ನೀಡಿತ್ತು. ಭಾರತದ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿದ್ದರಿಂದಲೇ ರಷ್ಯಾ ಮಾತುಕತೆಗೆ ಮುಂದಾಯಿತು ಎಂದೂ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು. ಈ ನಡುವೆ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಭಾರತಕ್ಕೆ ಇನ್ನಷ್ಟು ಸುಂಕ ಏರಿಕೆ ಬಿಸಿ ತಾಗಬಹುದು ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page