ದೆಹಲಿ: ದೇಶದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮತದಾರರ ಹೆಸರುಗಳನ್ನು ಅಳಿಸಿಹಾಕುತ್ತಿರುವ ವಿವಾದ ತಾರಕಕ್ಕೇರಿರುವ ಹೊತ್ತಿನಲ್ಲೇ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಉಜ್ಜಲ್ ಭುಯಾನ್ ಅವರು ಅತ್ಯಂತ ಮಹತ್ವದ ಹಾಗೂ ಕಟು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
19ನೇ ನಲ್ಸಾರ್ (NALSAR) ಜಸ್ಟಿಸ್ ಬಿ.ಆರ್. ಸಾವ್ನಿ ಸ್ಮಾರಕ ಮೂಟ್ ಕೋರ್ಟ್ ಸ್ಪರ್ಧೆ-2026 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಕ್ರಿಯೆಯನ್ನು ನ್ಯಾಯಾಲಯಗಳು ಎಂದಿಗೂ ಬೆಂಬಲಿಸುವುದಿಲ್ಲ ಅಥವಾ ಸಮರ್ಥಿಸುವುದಿಲ್ಲ ಎಂದು ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ.
ಸಂವಿಧಾನವು ‘ಮತದಾನದ ಹಕ್ಕುಳ್ಳ ನಾಗರಿಕರು’ ಮತ್ತು ‘ಮತದಾನದ ಹಕ್ಕಿಲ್ಲದ ನಾಗರಿಕರು’ ಎಂಬ ಎರಡು ಪ್ರತ್ಯೇಕ ವರ್ಗಗಳನ್ನು ಎಂದಿಗೂ ಕಲ್ಪಿಸಿಕೊಂಡಿಲ್ಲ ಎಂದಿರುವ ಅವರು, ಲಕ್ಷಾಂತರ ಭಾರತೀಯರನ್ನು ಮತದಾನದ ಹಕ್ಕಿಲ್ಲದ ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿವರ್ತಿಸುವ ಯಾವುದೇ ಕ್ರಮವು ಮೂಲಭೂತವಾಗಿ ಅಸಾಂವಿಧಾನಿಕ ಹಾಗೂ ಏಕಪಕ್ಷೀಯವಾದುದು ಎಂದು ಎಚ್ಚರಿಸಿದ್ದಾರೆ.
ಇಂತಹ ಪ್ರಕ್ರಿಯೆಗಳು ಸಂವಿಧಾನದ ಪರಿಚ್ಛೇದ 14 (ಸಮಾನತೆ) ಮತ್ತು ಪರಿಚ್ಛೇದ 326 ನ್ನು ನೇರವಾಗಿ ಉಲ್ಲಂಘಿಸುವುದಲ್ಲದೆ, ನಾವು ಒಪ್ಪಿಕೊಂಡ ಸಾಂವಿಧಾನಿಕ ಚೌಕಟ್ಟನ್ನೇ ಬುಡಮೇಲು ಮಾಡುತ್ತವೆ ಎಂದಿದ್ದಾರೆ.
ಮತದಾನದ ಹಕ್ಕು ಭಾರತೀಯ ಸಂವಿಧಾನದ ಮೂಲ ರಚನೆಯ (Basic Structure) ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸಿದ ಜಸ್ಟಿಸ್ ಭುಯಾನ್, ದೇಶದ ಸ್ವಾತಂತ್ರ್ಯ ಹೋರಾಟದ ಮೂಲಕ ದಕ್ಕಿದ ಈ ಪವಿತ್ರ ಹಕ್ಕನ್ನು ಪೌರತ್ವದಿಂದ ಪ್ರತ್ಯೇಕಿಸುವುದು ಎಂದರೆ ಜೀವಂತ ದೇಹದಿಂದ ಆತ್ಮವನ್ನು ಬೇರ್ಪಡಿಸಿದಂತೆ ಎಂದು ಬಣ್ಣಿಸಿದ್ದಾರೆ.
ಸಂವಿಧಾನದ 326 ನೇ ವಿಧಿಯ ಪ್ರಕಾರ 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಮತದಾನದ ಪೂರ್ಣ ಹಕ್ಕಿದೆ. ಮಾನಸಿಕ ಅಸ್ವಸ್ಥತೆ, ಭ್ರಷ್ಟಾಚಾರ ಅಥವಾ ಗಂಭೀರ ಅಪರಾಧಗಳಂತಹ ಸಂವಿಧಾನಬದ್ಧ ನಿರ್ದಿಷ್ಟ ಕಾರಣಗಳನ್ನು ಹೊರತುಪಡಿಸಿ, ಕೇವಲ ಆಡಳಿತಾತ್ಮಕ ಆದೇಶಗಳ ಮೂಲಕ ಯಾವುದೇ ಪ್ರಜೆಯ ಮತದಾನದ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ.
ಕೋಟ್ಯಧಿಪತಿಯೇ ಇರಲಿ ಅಥವಾ ರಿಕ್ಷಾ ಚಾಲಕನೇ ಇರಲಿ, ಪ್ರಜಾಪ್ರಭುತ್ವದಲ್ಲಿ ಇಬ್ಬರ ಮತದ ಮೌಲ್ಯವೂ ಸಮಾನ ಎಂದು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ಸಾಂವಿಧಾನಿಕ ಆಶಯವನ್ನು ಅವರು ಈ ವೇಳೆ ಸ್ಮರಿಸಿದ್ದಾರೆ.
ಜನಪ್ರಾತಿನಿಧ್ಯ ಕಾಯ್ದೆ 1950 ರ ನಿಬಂಧನೆಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಸೂಕ್ತ ಕಾರಣ ಮತ್ತು ನ್ಯಾಯಯುತ ವಿಚಾರಣೆಯಿಲ್ಲದೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವುದು ಸಂಪೂರ್ಣ ಕಾನೂನುಬಾಹಿರ ಎಂದು ಪುನರುಚ್ಚರಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಮಹತ್ವದ ‘ಲಾಲ್ ಬಾಬು ಹುಸೇನ್’ ಪ್ರಕರಣದ ತೀರ್ಪಿನಂತೆ, ಮೃತಪಟ್ಟ ಮತದಾರರನ್ನು ಹೊರತುಪಡಿಸಿ, ಮತದಾರರ ಪಟ್ಟಿಯಲ್ಲಿ ಒಮ್ಮೆ ನೋಂದಣಿಯಾದ ಯಾವುದೇ ನಾಗರಿಕನ ಹೆಸರನ್ನು ಮುನ್ಸೂಚನೆ (ನೋಟಿಸ್) ಹಾಗೂ ವಿಚಾರಣೆಗೆ ಸೂಕ್ತ ಅವಕಾಶ ನೀಡದೆ ಏಕಾಏಕಿ ಅಳಿಸಿಹಾಕಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು, 2023 ರ ‘ಅನೂಪ್ ಬರನ್‌ವಾಲ್’ ತೀರ್ಪನ್ನು ಪ್ರಸ್ತಾಪಿಸಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರನ್ನು ಉಳಿಸಿಕೊಳ್ಳುವ ಹಕ್ಕೇ ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣೆಗೆ ಭದ್ರ ಬುನಾದಿಯಾಗಿದ್ದು, ಸಾಂವಿಧಾನಿಕ ಆಡಳಿತದಲ್ಲಿ ಯಾವುದೇ ಅಧಿಕಾರಿಯೂ ಸಂವಿಧಾನಕ್ಕಿಂತ ಮೇಲಲ್ಲ ಎಂದು ಕಟುವಾಗಿ ತಿಳಿಸಿದ್ದಾರೆ.
