Home ರಾಜ್ಯ ಮಂಕಿ ಫಾಕ್ಸ್‌ ಬಗ್ಗೆ ಹೆದರುವ ಅಗತ್ಯವಿಲ್ಲ: ಡಾ.ಶರಣಪ್ರಕಾಶ್‌ ಪಾಟೀಲ್‌

ಮಂಕಿ ಫಾಕ್ಸ್‌ ಬಗ್ಗೆ ಹೆದರುವ ಅಗತ್ಯವಿಲ್ಲ: ಡಾ.ಶರಣಪ್ರಕಾಶ್‌ ಪಾಟೀಲ್‌

0

ಬೆಂಗಳೂರು: ಇತ್ತೀಚೆಗೆ ಆಫ್ರಿಕಾ ಖಂಡದಲ್ಲಿ ಆತಂಕ ಮೂಡಿಸಿರುವ ಮಂಕಿ ಫಾಕ್ಸ್ ಬಗ್ಗೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದರೂ ಈ ಸೋಂಕು ಭಾರತದಲ್ಲಿ ಹರಡುವ ಅಪಾಯ ಕಡಿಮೆ. ಹೀಗಾಗಿ ಯಾರೊಬ್ಬರು ಆತಂಕಕ್ಕೆ ಒಳಗಾಗಬಾರದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಂಕಿಫಾಕ್ಸ್ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕಳೆದ ಆ.14ರಂದು ವಿಶ್ವ ಆರೋಗ್ಯ ಸಂಸ್ಥೆ ಮಂಕಿಫಾಕ್ಸ್‌ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಘೋಷಿಸಿದೆ. ಆಫ್ರಿಕಾದಲ್ಲಿ ಹರಡಿರುವ ಕಾಣಿಸಿಕೊಂಡಿರುವ ಸೋಂಕನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಈ ಸೋಂಕು ಇಲ್ಲಿಯವರೆಗೆ ಭಾರತದಲ್ಲಿ ಕಂಡು ಬಂದಿಲ್ಲ. ಈ ಹಿನ್ನೆಲೆ ಯಾವುದೇ ಆತಂಕ ಬೇಡ. ಎನ್‌ಸಿಡಿಸಿ ಜಂಟಿ ನಿರ್ವಹಣೆ ಸಂಸ್ಥೆ ಇದರ ಹರಡುವಿಕೆ ಅಪಾಯದ ಮೌಲ್ಯಮಾಪನ ನಡೆಸುತ್ತಿದೆ. ಒಂದು ವೇಳೆ ಪ್ರಕರಣಗಳಿದ್ದರೆ ಪ್ರವೇಶ ಹಂತದಲ್ಲೇ ಎಚ್ಚರಿಸಲಾಗುವುದು ಎಂದು ಪಾಟೀಲ್‌ ಮಾಹಿತಿ ನೀಡಿದರು.

“ಸರ್ಕಾರದ ಮಾರ್ಗಸೂಚಿ ಪ್ರಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಮಂಕಿಫಾಕ್ಸ್‌ ಬಗ್ಗೆ ಬಹಳಷ್ಟು ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಮಂಕಿ ಫಾಕ್ಸ್‌ ಒಂದು ಪ್ರಕರಣವೂ ಕಂಡು ಬಂದಿಲ್ಲ. ಇದರಿಂದ ರಾಜ್ಯದ ಜನರು ಆತಂಕಕ್ಕೆ ಒಳಗಾಗುವುದು ಬೇಡ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದರ ಟೆಸ್ಟ್‌ ಮಾಡುವ ಸೌಲಭ್ಯವಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯಲ್ಲಿ ಬೆಡ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ” ಎಂದು ಸಚಿವರು ಹೇಳಿದರು.

ಇದು ವೈರಲ್‌ ಇನ್ಫೆಕ್ಷನ್ ಆಗಿರಲಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗ ಪರೀಕ್ಷೆ ಉಚಿತವಾಗಿರುತ್ತದೆ. ಸದ್ಯಕ್ಕೆ 50 ಹಾಸಿಗೆಯ ಐದು ಐಸಿಯು ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೂ ಒಂದೇ ಒಂದು ಕೇಸ್‌‍ ಪತ್ತೆಯಾಗಿಲ್ಲದಿದ್ದರೂ ಏಕಾಏಕಿ ಕಂಡುಬಂದರೆ ಸಮಸ್ಯೆಯಾಗದಿರಲಿ ಎಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಪಾಟೀಲ್ ತಿಳಿಸಿದರು.

ಈ ಸಂಬಂಧ ಆರೋಗ್ಯ ಇಲಾಖೆ ಜೊತೆಗೂ ಚರ್ಚೆ ನಡೆಸಲಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‌ ಮಾಡುವ ಬಗ್ಗೆ ಆರೋಗ್ಯಇಲಾಖೆಗೆ ಕೇಂದ್ರ ಸರ್ಕಾರ ಸೂಚನೆ ನೀಡುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

You cannot copy content of this page

Exit mobile version