Friday, January 9, 2026

ಸತ್ಯ | ನ್ಯಾಯ |ಧರ್ಮ

ಬಳ್ಳಾರಿ ಗಲಭೆ ತನಿಖೆ ಸಿಬಿಐಗೆ ನೀಡುವ ಅಗತ್ಯವಿಲ್ಲ: ಗೃಹ ಸಚಿವ ಪರಮೇಶ್ವರ್

ಬಳ್ಳಾರಿ ಗಲಭೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸರು ತನಿಖೆ ನಡೆಸಲು ಅಶಕ್ತರಾದಾಗ ಮಾತ್ರ ಸಿಬಿಐ ತನಿಖೆಯ ಬಗ್ಗೆ ಮಾತನಾಡಬಹುದು ಎಂದು ತಿಳಿಸಿದರು. ರಾಜ್ಯದ ಯಾವುದೇ ಪ್ರಕರಣಗಳನ್ನು ಸಿಬಿಐಗೆ ವಹಿಸಬಾರದು ಎಂದು ಸಚಿವ ಸಂಪುಟದಲ್ಲಿ ಈಗಾಗಲೇ ತೀರ್ಮಾನಿಸಲಾಗಿದ್ದು, ಈ ಪ್ರಕರಣದಲ್ಲೂ ಸಿಬಿಐ ತನಿಖೆ ಅನಗತ್ಯ ಎಂದರು.

ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ನೀಡಿದ್ದ ವೈಯಕ್ತಿಕ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್, ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಮತ್ತು ಪ್ರಸ್ತುತ ಕೇಂದ್ರ ಸಚಿವರಾಗಿದ್ದಾರೆ, ಅವರು ನೀಡಿದ ಹೇಳಿಕೆಯನ್ನು ನಾನು ಅಷ್ಟೇ ಜವಾಬ್ದಾರಿಯುತವಾಗಿ ಸ್ವೀಕರಿಸುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು. ರಾಜ್ಯದ ಕಾನೂನು ವ್ಯವಸ್ಥೆಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ತಮಗೆ ಸ್ಪಷ್ಟ ಅರಿವಿದೆ ಎಂದು ಅವರು ಹೇಳಿದರು. ತಾವು ಕಳೆದ 38 ವರ್ಷಗಳಿಂದ ರಾಜಕೀಯದಲ್ಲಿದ್ದು, ವಿವಿಧ ಹುದ್ದೆಗಳನ್ನು ನಿಭಾಯಿಸಿರುವುದನ್ನು ನೆನಪಿಸಿದ ಅವರು, ಕುಮಾರಸ್ವಾಮಿ ಅವರಿಗೆ ತಮ್ಮ ಸಾಮರ್ಥ್ಯ ಮತ್ತು ವ್ಯಕ್ತಿತ್ವದ ಬಗ್ಗೆ ತಿಳಿದಿದೆ, ಹೀಗಾಗಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

ಬಳ್ಳಾರಿಯಲ್ಲಿ ಗುರುವಾರವಷ್ಟೇ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸುಮನ್ ಪನ್ನೇಕರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಗಲಭೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಒಟ್ಟು 67 ಜನರಿಗೆ ನೋಟಿಸ್ ನೀಡಲಾಗಿದೆ. ಇವರಲ್ಲಿ ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಬಿ. ಶ್ರೀರಾಮುಲು ಸೇರಿದಂತೆ 33 ಮಂದಿ ಹಾಗೂ ಕಾಂಗ್ರೆಸ್ ನಾಯಕರಾದ ಸತೀಶ್ ರೆಡ್ಡಿ, ನಾರಾ ಭರತ್ ರೆಡ್ಡಿ ಸೇರಿದಂತೆ 34 ಮಂದಿ ಸೇರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page