Wednesday, June 19, 2024

ಸತ್ಯ | ನ್ಯಾಯ |ಧರ್ಮ

ಸಿಎಎ ಜಾರಿಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ: ಅಮಿತ್‌ ಶಾ

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ, 2019, ದೇಶದ ಕಾನೂನು ಮತ್ತು ಅದು ಜಾರಿಯಾಗುವುದನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ವಿಚಾರದಲ್ಲಿ ನಾಗರಿಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಇದು ನಮ್ಮ ಪಕ್ಷದ ಬದ್ಧತೆ” ಎಂದು ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸದಸ್ಯರ ಸಭೆಯಲ್ಲಿ “ಜೈ ಸಿಯಾ ರಾಮ್” ಎಂಬ ಘೋಷಣೆಗಳ ನಡುವೆ ಶಾ ಹೇಳಿದ್ದಾರೆ. “ನೆರೆಯ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಮತ್ತು ಧಾರ್ಮಿಕ ಮತಾಂತರದ ಬೆದರಿಕೆಗೆ ಒಳಗಾದ ಸಹೋದರರನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ,” ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆ ಡಿಸೆಂಬರ್ 11, 2019 ರಂದು ಸಂಸತ್ತಿನಲ್ಲಿ ಅಂಗೀಕಾರವಾಗಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮುಸ್ಲಿಮರನ್ನು ಹೊರತುಪಡಿಸಿ ಆರು ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ನಿರಾಶ್ರಿತರಿಗೆ ಅವರು ಆರು ವರ್ಷಗಳ ಕಾಲ ಭಾರತದಲ್ಲಿ ವಾಸಿಸುವ ಮತ್ತು ಡಿಸೆಂಬರ್‌ 31, 2014 ಒಳಗೆ ದೇಶಕ್ಕೆ ಬಂದಿರುವವರಿಗೆ ಷರತ್ತಿನ ಮೇಲೆ ಪೌರತ್ವವನ್ನು ನೀಡುತ್ತದೆ..

ಮುಸ್ಲಿಮರನ್ನು ಹೊರಗಿಡುವ ಹಿನ್ನಲೆಯಿಂದ ಈ ಕಾಯ್ದೆಯ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿ, ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದವು. ರಾಷ್ಟ್ರೀಯ ನಾಗರಿಕರ ನೋಂದಣಿಯೊಂದಿಗೆ ಈ ಕಾನೂನನ್ನು ಬಳಸಿಕೊಂಡು ಕಿರುಕುಳ ನೀಡುವುದು, ಇಲ್ಲವೇ ತಮ್ಮ ಹಕ್ಕುಗಳನ್ನು ಹತ್ತಿಕ್ಕಬಹುದು ಎಂದು ಭಾರತದ ಮುಸಲ್ಮಾನ ಸಮುದಾಯ ಕಾಯಿದೆಯನ್ನು ವಿರೋಧಿಸಿತ್ತು. ರಾಷ್ಟ್ರೀಯ ನಾಗರಿಕರ ನೋಂದಣಿ ದಾಖಲೆರಹಿತ ವಲಸಿಗರನ್ನು ಪತ್ತೆ ಹಚ್ಚುವ ಉದ್ದೇಶವನ್ನು ಹೊಂದಿದೆ.  

ಸಂಸತ್ತಿನ ಮಾರ್ಗಸೂಚಿಗಳು ಕಾಯ್ದೆ ಜಾರಿಗೆ ಬಂದ ಆರು ತಿಂಗಳೊಳಗೆ ಪ್ರಕಟಿಸಬೇಕು ಎಂದು ಹೇಳಿದ್ದರೂ ಪೌರತ್ವ ಕಾನೂನಿನ ನಿಯಮಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ.

ಕಾನೂನನ್ನು ಜಾರಿಗೊಳಿಸಿದಾಗಿನಿಂದ ನಿಯಮಗಳನ್ನು ರೂಪಿಸಲು ಕೇಂದ್ರ ಗೃಹ ಸಚಿವಾಲಯ ಕನಿಷ್ಠ ಎಂಟು ಬಾರಿ ವಿಸ್ತರಣೆಗಳನ್ನು ಕೋರಿದೆ. ಆರಂಭದಲ್ಲಿ ಈ ವಿಳಂಬಕ್ಕೆ ಕೋವಿಡ್‌ ಕಾರಣವನ್ನು ನೀಡಲಾಗಿತ್ತು.

ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾ ಅವರನ್ನು “ಸ್ವತಂತ್ರ ಭಾರತದ ಅತ್ಯಂತ ಅಸಮರ್ಥ ಗೃಹ ಮಂತ್ರಿ” ಎಂದು ಕರೆದಿದ್ದಾರೆ..

“ಅವರಿಗೆ ಸಿಎಎ ಬಗ್ಗೆ ಪ್ರತಿಕ್ರಿಯಿಸಲು ಮತ್ತು ಅವರ ಮಗ [ಜಯ್ ಶಾ] ಜೊತೆಗೆ ಅಹಮದಾಬಾದ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಸಮಯವಿದೆ, ಆದರೆ ಮಣಿಪುರದ ಬಗ್ಗೆ ಪ್ರತಿಕ್ರಿಯಿಸಲು ಅಥವಾ ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸಮಯವಿಲ್ಲ?” ಎಂದು ಖರ್ಗೆ ಟೀಕಿಸಿದ್ದಾರೆ..

Related Articles

ಇತ್ತೀಚಿನ ಸುದ್ದಿಗಳು