Friday, June 14, 2024

ಸತ್ಯ | ನ್ಯಾಯ |ಧರ್ಮ

ಆರ್ಟಿಕಲ್‌ 371 ರದ್ದು ಇಲ್ಲ: ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರದ ಸ್ಪಷ್ಟನೆ

ದೇಶದ ಈಶಾನ್ಯ ರಾಜ್ಯಗಳಿಗೆ ನೀಡಲಾಗಿರುವ ವಿಶೇಷ ಸಂವಿಧಾನಿಕ ಮಾನ್ಯತೆಗಳನ್ನು ಬದಲಾಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಹೇಳಿಕೆ ನೀಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಪ್ರಶ್ನಿಸಿ 20 ಕ್ಕೂ ಹೆಚ್ಚು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ.

370 ನೇ ವಿಧಿಯು ತಾತ್ಕಾಲಿಕ ನಿಬಂಧನೆ, ಈಶಾನ್ಯ ಪ್ರದೇಶಗಳಿಗೆ ಅನ್ವಯವಾಗುವ ವಿಶೇಷ ಸ್ಥಾನಮಾನಗಳನ್ನು ಸರ್ಕಾರವು ಬದಲಾಯಿಸಬಹುದು ಎಂಬ ಆತಂಕ ಬೇಡ ಅವನ್ನು ಮುಟ್ಟುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಮೆಹ್ತಾ ಹೇಳಿದ್ದಾರೆ.

ಸಂವಿಧಾನದ 371 ನೇ ವಿಧಿ ಅಡಿಯಲ್ಲಿರುವ ನಿಬಂಧನೆಗಳು ಈಶಾನ್ಯ ರಾಜ್ಯಗಳಾದ ಮಿಜೋರಾಂ, ನಾಗಾಲ್ಯಾಂಡ್ ಮತ್ತು ಅಸ್ಸಾಂ, ಮಣಿಪುರ ಮತ್ತು ಮೇಘಾಲಯದ ಕೆಲವು ಭಾಗಗಳಲ್ಲಿ ಬುಡಕಟ್ಟು ಸಮುದಾಯಗಳನ್ನು ಮತ್ತು ಅವುಗಳ ಸಂಸ್ಕೃತಿಗಳನ್ನು ರಕ್ಷಿಸುತ್ತವೆ. ಒಂದು ನಿರ್ದಿಷ್ಟ ಮಟ್ಟದ ಆಡಳಿತಾತ್ಮಕ ಸ್ವಾಯತ್ತತೆಯೊಂದಿಗೆ ವಿಕೇಂದ್ರೀಕೃತ ಆಡಳಿತದ ಅವಕಾಶ ಕೂಡ ನೀಡಲಾಗಿದೆ.
2019ರಲ್ಲಿ ಇದೇ ಪ್ರಶ್ನೆ ಎದ್ದಾಗ ಅಮಿತ್‌ ಶಾ “ಆರ್ಟಿಕಲ್ 370 ತಾತ್ಕಾಲಿಕವಾದದ್ದು ಎಂಬುದು ಸ್ಪಷ್ಟವಾಗಿತ್ತು, ಆದರೆ ಆರ್ಟಿಕಲ್ 371 ಈಶಾನ್ಯ ರಾಜ್ಯಗಳಲ್ಲಿ ವಿಶೇಷ ನಿಬಂಧನೆಗಳಿಗೆ ಸಂಬಂಧಪಟ್ಟಿದ್ದಾಗಿದೆ. ಎರಡಕ್ಕೂ ವ್ಯತ್ಯಾಸವಿದೆ. ಕೇಂದ್ರ ಸರ್ಕಾರ ಆರ್ಟಿಕಲ್ 371 ನ್ನು ಮುಟ್ಟುವುದಿಲ್ಲ” ಎಂದು ಹೇಳಿದ್ದರು.

ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಿರುವುದರಿಂದ ಆತಂಕಗಳನ್ನು ಪರಿಹರಿಸಲು ಹೋಗುವುದಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಈ ಕಳವಳಗಳನ್ನು ವ್ಯಕ್ತಪಡಿಸಿರುವ ಮಧ್ಯಂತರ ಅರ್ಜಿಯನ್ನು ವಿಲೇವಾರಿ ಮಾಡಿತು.

Related Articles

ಇತ್ತೀಚಿನ ಸುದ್ದಿಗಳು