Saturday, October 4, 2025

ಸತ್ಯ | ನ್ಯಾಯ |ಧರ್ಮ

ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್‌ಗಳಲ್ಲಿ ವಿಷಕಾರಿ ಅಂಶಗಳಿಲ್ಲ: ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ದೆಹಲಿ: ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ಮಾದರಿಗಳಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಸಂಬಂಧಿಸಿದ ವಿಷಕಾರಿ ವಸ್ತುಗಳು ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

(No Toxins In Cough Syrup) ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC), ರಾಷ್ಟ್ರೀಯ ವೈರಾಣು ಸಂಸ್ಥೆ (NIV), ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಮತ್ತು ಇತರ ಏಜೆನ್ಸಿಗಳ ವಿಜ್ಞಾನಿಗಳು ಮಧ್ಯಪ್ರದೇಶದ ಛಿಂದ್ವಾರಾಗೆ ಭೇಟಿ ನೀಡಿ ಕೆಮ್ಮಿನ ಸಿರಪ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿರುವುದಾಗಿ ತಿಳಿಸಿದೆ. ಆದರೆ, ಯಾವುದೇ ಮಾದರಿಯಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುವ ಡೈಥಿಲಿನ್ ಗ್ಲೈಕಾಲ್ ಅಥವಾ ಎಥಿಲಿನ್ ಗ್ಲೈಕಾಲ್ ಇರುವುದು ಪತ್ತೆಯಾಗಿಲ್ಲ ಎಂದು ಬಹಿರಂಗಪಡಿಸಿದೆ. ರಾಜ್ಯ ಅಧಿಕಾರಿಗಳು ಸಹ ಆ ಮಾದರಿಗಳನ್ನು ಪರೀಕ್ಷಿಸಿರುವುದಾಗಿ ಹೇಳಿದೆ. ಮಕ್ಕಳ ಸಾವಿನ ಕುರಿತ ತನಿಖೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ.

ಇದಲ್ಲದೆ, ಮಕ್ಕಳಿಗೆ ಕೆಮ್ಮಿನ ಸಿರಪ್ ಬಳಕೆಯನ್ನು ಪರಿಮಿತಗೊಳಿಸಲು ಕೇಂದ್ರವು ಸಲಹೆ ನೀಡಿದೆ. ಮುಖ್ಯವಾಗಿ, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಮತ್ತು ನೆಗಡಿಯ ಔಷಧಿಗಳನ್ನು ಸೂಚಿಸಬಾರದು ಎಂದು ಹೇಳಿದೆ. ಸಾಮಾನ್ಯವಾಗಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೆಮ್ಮಿನ ಸಿರಪ್ ಉತ್ತಮವಲ್ಲ ಎಂದು ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು ತಿಳಿಸಿದ್ದಾರೆ. ಮಕ್ಕಳಲ್ಲಿ ಕೆಮ್ಮಿನ ಪ್ರಕರಣಗಳು ಹೆಚ್ಚಾಗಿ ಔಷಧಿಗಳಿಲ್ಲದೆ ಗುಣವಾಗುತ್ತವೆ ಎಂದು ಅವರು ಹೇಳಿದರು. ನೀರಿನಾಂಶ, ವಿಶ್ರಾಂತಿ ಮತ್ತು ಸಹಾಯಕ ಚಿಕಿತ್ಸೆಗಳನ್ನು ಒದಗಿಸಬೇಕು ಎಂದು ಅವರು ಸಲಹೆ ನೀಡಿದರು.

ಇನ್ನೊಂದೆಡೆ, ಔಷಧ ತಯಾರಕರು ‘ಉತ್ತಮ ಉತ್ಪಾದನಾ ಪದ್ಧತಿಗಳಿಗೆ’ ಬದ್ಧರಾಗಿರಬೇಕು ಎಂದು ಕೇಂದ್ರ ತಿಳಿಸಿದೆ. ಬಹು-ಔಷಧ ಸಂಯೋಜನೆ (multiple drug combination) ಯನ್ನು ತಪ್ಪಿಸಬೇಕು ಎಂದು ಸೂಚಿಸಿದೆ. ಹಾಗೆಯೇ, ಔಷಧಿಗಳ ಸುರಕ್ಷಿತ ಬಳಕೆಯ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು ಎಂದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page