Sunday, June 16, 2024

ಸತ್ಯ | ನ್ಯಾಯ |ಧರ್ಮ

ದೇವೇಗೌಡರ ಪತ್ರದಲ್ಲಿ ಎಚ್ಚರಿಕೆಯೂ ಇಲ್ಲ, ಸಂತ್ರಸ್ತ ಮಹಿಳೆಯರ ಉಲ್ಲೇಖವೇ ಇಲ್ಲ!

ವಿಕೃತ ಮೊಮ್ಮಗ ಅಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ದೇಶ ಬಿಟ್ಟು, ಸುಳಿವೇ ಇಲ್ಲದೇ ಪರಾರಿಯಾಗಿರುವ ತಿಂಗಳ ನಂತರ ಈಗ ಮಾಜಿ ಪ್ರಧಾನಿ ದೇವೇಗೌಡರ ‘ಎಚ್ಚರಿಕೆ ಪತ್ರ’ವೊಂದು ಹೊರಬಿದ್ದಿದೆ. ಎಚ್ಚರಿಕೆ ಪತ್ರದಲ್ಲಿ ಮೊಮ್ಮಗನಿಗೆ ಎಚ್ಚರಿಕೆ ಕೊಡುವುದಕ್ಕಿಂತ ಹೆಚ್ಚಾಗಿ ತಮ್ಮ ಬಗ್ಗೆಯೇ ಜನತೆಗೆ ಅನುಕಂಪ ಗಿಟ್ಟಿಸಲು ದೇವೇಗೌಡರ ಕುಟುಂಬ ಪ್ರಯತ್ನಿಸಿದಂತಿದೆ.

ಪತ್ರದಲ್ಲಿರುವ ಒಂದೊಂದು ಅಕ್ಷರದಲ್ಲೂ ದೊಡ್ಡ ಗೌಡರ ಕುಟುಂಬವೇ ಮುಖ್ಯ ಸಂತ್ರಸ್ತರು ಎಂದು ಒತ್ತಿ ಒತ್ತಿ ಹೇಳುವಂತಿದೆ. ಎರಡು ಪುಟದ ಪತ್ರದಲ್ಲಿ ಎಲ್ಲೂ ಕೂಡ ಮೊಮ್ಮಗ ಪ್ರಜ್ವಲ್ ರೇವಣ್ಣನ ವಿಕೃತಿಯ ಬಗ್ಗೆಯಾಗಲಿ ಉಲ್ಲೇಖಿಸದೇ “ತನಿಖೆಗೆ ಸಹಕರಿಸು” ಎಂಬುದಷ್ಟೇ ಪ್ರಮುಖ ಅಂಶವಾಗಿ ಉಳಿದಿದೆ. ದೇವೇಗೌಡರ ಈ ಪತ್ರದಲ್ಲಿ ತಪ್ಪಿಯೂ ಸಹ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡಿಸುವ ಒಂದು ಉಲ್ಲೇಖವೂ ಇರದಿರುವುದು, ಪತ್ರ ಬರೆದವರ ಜಾಣ್ಮೆ ಎದ್ದು ಕಾಣುವಂತಿದೆ.

ಅಂದ್ರೆ ಇಲ್ಲಿ ದೇವೇಗೌಡರ ಕುಟುಂಬ ಮತ್ತು ಜೆಡಿಎಸ್ ಪಕ್ಷದ ನಾಯಕರು, ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ವಿಚಾರವನ್ನು ಮರೆಮಾಚಲು ಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇಲ್ಲಿ ಪ್ರಜ್ವಲ್ ರೇವಣ್ಣನ ಚಿಕ್ಕಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಿರಂತರ ಪತ್ರಿಕಾಗೋಷ್ಠಿಗಳ ಅಷ್ಟೂ ಅಂಶಗಳನ್ನು ಗಮನಿಸಿದರೂ ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿದ್ದರೇ ಹೊರತು, ಎಲ್ಲೂ ಸಹ ತಮ್ಮ ಕುಟುಂಬದಿಂದಾದ ತಪ್ಪುಗಳನ್ನು ಎತ್ತಿ ಹೇಳುವ ಪ್ರಯತ್ನವನ್ನು ಮಾಡಲೇ ಇಲ್ಲ.

ಇಲ್ಲಿ ಜೆಡಿಎಸ್ ಇತರೆ ನಾಯಕರ ವರ್ತನೆಯಲ್ಲೂ ಅಶ್ಲೀಲ ವಿಡಿಯೋ ಸೆರೆಹಿಡಿದ ಬಗ್ಗೆಯಾಗಲಿ, ಸಂತ್ರಸ್ತ ಹೆಣ್ಣು ಮಕ್ಕಳ ಬಗ್ಗೆಯಾಗಲಿ ತಪ್ಪಿಯೂ ಉಲ್ಲೇಖಿಸದಿರುವುದು ಗಮನಾರ್ಹ. ಈ ಪ್ರಕರಣದಲ್ಲಿ ‘ತಾವೇ ಸಂತ್ರಸ್ತರು’ ಎಂಬುದನ್ನು ದೊಡ್ಡ ಗೌಡರ ಕುಟುಂಬ ಮೇಲಿಂದ ಮೇಲೆ ಹೇಳುತ್ತಲೇ ಬಂದಿದೆ.

ಇನ್ನು ದೇವೇಗೌಡರು ತಮ್ಮ ಮೊಮ್ಮಗನಿಗೆ ಬರೆದ ಪತ್ರದಲ್ಲಿ ಎರಡನೇ ಪುಟದ ಎರಡು ಪ್ಯಾರಾಗಳಷ್ಟೇ ಮುಖ್ಯವಾದದ್ದು. ಇಷ್ಟನ್ನು ಮೂರು ವಾರ ಮೊದಲೇ ಬರೆದಿದ್ದರೆ ಮೊದಲ ಮೂರು ಪ್ಯಾರಾ ಬರೆಯುವ ಕಷ್ಟವೇ ಇರುತ್ತಿರಲಿಲ್ಲ. ಅಷ್ಟಕ್ಕೂ ಈ ಪತ್ರ ನೇರವಾಗಿ ಪ್ರಜ್ವಲ್ ರೇವಣ್ಣನಿಗೆ ಬರೆದ ನೆಪ ಅಷ್ಟೆ. ಆದರೆ ಇದನ್ನು ರಾಜ್ಯದ ಜನತೆ ಓದಬೇಕೆಂಬ ಮೂಲ ಉದ್ದೇಶವಿದೆ. ಅದರಲ್ಲೂ ಬಿಜೆಪಿಗೆ ಹತ್ತಿರವಾಗಿರುವ ದೇವೇಗೌಡರು ತುಸು ಹೆಚ್ಚೇ ಕಣ್ಣೀರಿನ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದಾರೆ.

ಅಷ್ಟಕ್ಕೂ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕಣ್ಣೀರ ಕಥೆಯ “ಅನುಕಂಪದ ಪತ್ರ” ಬರೆಯುವ ಬದಲು ನೇರವಾಗಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಸಂಸತ್ ಸದಸ್ಯನಾದ ಪ್ರಜ್ವಲ್ ರೇವಣ್ಣನನ್ನು ಕರೆತರಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಬೇಕಿತ್ತು. ಅದಕ್ಕೆ ಹೆಚ್ಚಿನ ಮಹತ್ವವೂ ಸಿಗುತ್ತಿತ್ತು. ಆದರೆ ದೇವೇಗೌಡರ ಕುಟುಂಬ ಆ ಕೆಲಸ ಮಾಡಿಲ್ಲ. ಈಗಲೂ ಕಾಲ ಮಿಂಚಿಲ್ಲ.

ಅಷ್ಟೇ ಮುಖ್ಯ ವಿಚಾರ ಎಂದರೆ ಸಂತ್ರಸ್ತ ಮಹಿಳೆಯರ ಪರವಾಗಿ ನಿಲ್ಲುವದು. ತಮ್ಮ ಮೊಮ್ಮಗ ಮಾಡಿದ ವಿಕೃತಿ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ನಿಂತು, ಆತನಿಗೆ ಎಂತಹ ಶಿಕ್ಷೆ ನೀಡಿದರೂ ಅದನ್ನು ಯಾವುದೇ ತಕರಾರು ತಗೆಯದೇ ಸ್ವೀಕರಿಸುತ್ತೇವೆ ಎನ್ನುವುದನ್ನು ದೇವೇಗೌಡರು ಸ್ಪಷ್ಟಪಡಿಸಬೇಕಿದೆ. ಅದು ಬಿಟ್ಟು ವಿಕೃತಿ ಮೆರೆದ ಮೊಮ್ಮಗನ ಬಗ್ಗೆಯೇ ಅನುಕಂಪ ಗಿಟ್ಟಿಸಲು ಮುಂದಾದರೆ ದೇವೇಗೌಡರ ಕುಟುಂಬ ಮತ್ತು ಜೆಡಿಎಸ್ ಪಕ್ಷ ಅಧಃಪತನಕ್ಕೆ ಇಳಿಯುವುದರಲ್ಲಿ ಅನುಮಾನವಿಲ್ಲ.

Related Articles

ಇತ್ತೀಚಿನ ಸುದ್ದಿಗಳು