ಹಟ್ಟಿ ಚಿನ್ನದ ಗಣಿ ಸೆ.25: ಪಾಮನಕಲ್ಲೂರು ಕ್ರಾಸ್ ಹತ್ತಿರ ಮೂವತ್ತು ವರ್ಷಗಳಿಂದ ವಾಸಿಸುತ್ತಿರುವ ಸುಡುಗಾಡು ಸಿದ್ಧರ ಕೇರಿಗೆ ಮೂಲಭೂತ ಸೌಕರ್ಯ ಒದಗಿಸಲು ಅಲೆಮಾರಿ ಜಾಗೃತ ಸಂಘದ ಅಧ್ಯಕ್ಷ ಬಸವರಾಜ ಹಟ್ಟಿ, ಉಪಾಧ್ಯಕ್ಷ ಗಂಗಾಧರ್ ಶಂಖು ನಿಯೋಗದ ವತಿಯಿಂದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಪಂಚಾಯತ್ ಕರ ವಸೂಲಿ ಅಧಿಕಾರಿ ಅಕ್ರಮ್ ಅವರು ವಾರದೊಳಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಾವು ಹಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾಮನಕಲ್ಲೂರು ಕ್ರಾಸ್ ಹತ್ತಿರದ ಬಸವ ಜ್ಯೋತಿ ನಗರದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಅಲೆಮಾರಿ ಪಟ್ಟಿಯಲ್ಲಿ ಬರುವ ಸುಡುಗಾಡು ಸಿದ್ಧ ಜನಾಂಗದವರಾಗಿದ್ದು, ಸುಮಾರು ಮೂರು ದಶಕಗಳ ಕಾಲ ಇಲ್ಲಿಯ ನಿವಾಸಿಗಳಾಗಿದ್ದು, ಆಗಿನಿಂದಲೂ ನಮ್ಮ ಓಣಿಯಲ್ಲಿ ಹಲವು ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸಾರ್ವಜನಿಕ ಸಮಸ್ಯೆಗಳು ದೀರ್ಘಕಾಲದಿಂದ ಪಂಚಾಯತ್ ಆಡಳಿತದ ನಿರ್ಲಕ್ಷ್ಯ ಧೋರಣೆಯಿಂದ ಹಾಗೆಯೇ ಮುಂದುವರೆದಿವೆ. ಈ ಸಮಸ್ಯೆಗಳಿಂದ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲಾ ನಿವಾಸಿಗಳು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ. ಮುಖ್ಯಾಧಿಕಾರಿಗಳು ಈ ಮನವಿಯನ್ನು ತುರ್ತು ಸಾರ್ವಜನಿಕ ಸಮಸ್ಯೆಗಳ ಮನವಿಯಾಗಿ ಪರಿಗಣಿಸಿ, ಸ್ಥಳ ಪರಿಶೀಲನೆ ನಡೆಸಿ, ಒಂದು ವಾರದೊಳಗೆ ತುರ್ತು ಸಮಸ್ಯೆಗಳನ್ನು, ಮಿಕ್ಕ ಸಮಸ್ಯೆಗಳನ್ನು ಗರಿಷ್ಠ ಹದಿನೈದು ದಿನಗಳೊಳಗಾಗಿ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿತು.
ಕುಡಿಯುವ ನೀರು, ಮಹಿಳಾ ಶೌಚಾಲಯ, ಚರಂಡಿ, ಗುಮ್ಮಿಯ ದುರಸ್ತಿ, ಸೊಳ್ಳೆ ನಿಯಂತ್ರಣ, ಬೀದಿ ದೀಪಗಳ ಕೊರತೆ, ರಸ್ತೆಗಂಟಿದ ಗಿಡಗಂಟಿಗಳ ತೆರವುಗೊಳಿಸುವಿಕೆ ಹೀಗೆ ಎಲ್ಲಾ ಸಮಸ್ಯೆಗಳು ನಮ್ಮ ಜನರ ದೈನಂದಿನ ಜೀವನ, ಸಾರ್ವಜನಿಕ ಆರೋಗ್ಯ, ಸ್ವಚ್ಛತೆ ಹಾಗೂ ಸುರಕ್ಷತೆಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳಾಗಿವೆ. ಆದ್ದರಿಂದ, ಮಾನ್ಯ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಬಸವ ಜ್ಯೋತಿ ನಗರಕ್ಕೆ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಅಗತ್ಯ ಕ್ರಮ ಕೈಗೊಂಡು, ಸಾಧ್ಯವಾದಷ್ಟು ಶೀಘ್ರವಾಗಿ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದಲ್ಲಿ, ಸಾರ್ವಜನಿಕರ ಹಕ್ಕುಗಳು ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಕಾನೂನುಬದ್ಧ ಹಾಗೂ ಶಾಂತಿಯುತ ರೀತಿಯಲ್ಲಿ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ವಿಷಯವನ್ನು ಕೊಂಡೊಯ್ಯುವುದು ಹಾಗೂ ಅಗತ್ಯಬಿದ್ದಲ್ಲಿ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ. ವಾರದೊಳಗೆ ಈ ಮೇಲ್ಕಂಡ ಸಮಸ್ಯೆಗಳನ್ನು ಸಹಾನುಭೂತಿಯಿಂದ ತುರ್ತು ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ನಿಯೋಗದಲ್ಲಿ ನಿವಾಸಿಗಳಾದ ಮಲ್ಲಿಕಾರ್ಜುನ ಶಂಖು, ಈರೇಶ(ಚಿಟ್ಟಿ), ರವಿಕುಮಾರ್, ಗೋಪಾಲ, ಶೇಖರ್, ನಾಗಲಿಂಗ ಸೇರಿದಂತೆ ಇತರರು ಇದ್ದರು.
