Saturday, June 15, 2024

ಸತ್ಯ | ನ್ಯಾಯ |ಧರ್ಮ

ಪರಿಶೋಧನೆ ರಹಿತ ಚಿಕಿತ್ಸೆ ಅಪಾಯಕ್ಕೆ ದಾರಿ

ಹಿಂದೆ, ಸ್ಕ್ಯಾನ್, ಇನ್ವೆಸ್ಟಿಗೇಶನ್ ಎಲ್ಲ ಮಾಡದೆ ಚಿಕಿತ್ಸೆ ನೀಡುವ ಕಾಲವಿತ್ತು. ಪರಿಣಾಮ ಕೆಲವೊಮ್ಮೆ ಜೀವಕ್ಕೇ ಅಪಾಯವಾಗುತ್ತಿತ್ತು. ಇಂದು ಆಸ್ಪತ್ರೆಗೆ ಹೋದ ಕೂಡಲೇ ಎಕ್ಸ್-ರೇ, ರಕ್ತ ಪರಿಶೋಧನೆ, ಸ್ಕ್ಯಾನ್ ಎಂದು ಹೇಳುವ ಡಾಕ್ಟರ್ ಗಳೇ ಹೆಚ್ಚಿದ್ದಾರೆ. ಆದರೆ, ಅಂಥವರನ್ನು  ದೂರುವವರೂ ಅನೇಕರಿದ್ದಾರೆ. ಆದರೆ ಪರಿಶೋಧನೆ ರಹಿತ ಚಿಕಿತ್ಸೆ ಅಪಾಯಕಾರಿ ಎಂಬುದನ್ನು ಜನರು ತಿಳಿದು ಕೊಳ್ಳಬೇಕಾಗಿದೆ – ಶೋಭಲತಾ ಸಿ, ಆರೋಗ್ಯ ಕಾರ್ಯಕರ್ತೆ.

ನೆನಪುಗಳು ಹಿಂದಕ್ಕೋಡಿದಾಗ…..

ಸುಮಾರು 19 ವರ್ಷಗಳ ಹಿಂದೆ, ಶುಶ್ರೂಷಾ  ರಂಗದಲ್ಲಿ ಅನುಭವ ಪಡೆಯುತ್ತಿರುವ ಕಾಲ. ಜನರಲ್ ಸರ್ಜನ್ ಒಬ್ಬರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ನನಗಿಂತ ಜೂನಿಯರ್ ಇಬ್ಬರು ಹುಡುಗಿಯರು ನರ್ಸಿಂಗ್ ಕಲಿಯುತ್ತಿದ್ದರು. ನಾನು ಮಧ್ಯಾಹ್ನದ ಸಮಯ ಒಮ್ಮೆ ಮನೆಗೆ ಹೋಗಿ ಬರುವುದು ಬಿಟ್ಟರೆ ಉಳಿದ ಸಮಯ ಆಸ್ಪತ್ರೆಯಲ್ಲಿಯೇ ಉಳಿಯುತ್ತಿದ್ದೆ. ರಾತ್ರಿ ನನ್ನ ಜೊತೆ ವಯಸ್ಸಾದ ಒಬ್ಬರು ಸ್ಟೀಪರ್ ಮಾತ್ರ ಇರುತ್ತಿದ್ದರು. ಆಸ್ಪತ್ರೆಯ ಪಕ್ಕದಲ್ಲಿಯೇ ಡಾಕ್ಟರ್ ಮನೆ. ರಾತ್ರಿ ವೇಳೆ ಅಪರೂಪಕ್ಕೆ ಒಬ್ಬರೋ ಇಬ್ಬರೋ  ರೋಗಿಗಳು ಬರುತ್ತಿದ್ದರು. ಡಾಕ್ಟರ್ ಬಂದು ನೋಡಿ ಚಿಕಿತ್ಸೆ ನೀಡುತ್ತಿದ್ದರು.

ಅಂದು ನನ್ನ ಅಣ್ಣನ ಮದುವೆ. ಮದುವೆ ಸಮಯಕ್ಕೆ ಹಾಲ್ ಗೆ ಹೋಗಿ ಬರುವ ತೀರ್ಮಾನ ಮಾಡಿದ್ದೆ. ಮುಂಜಾವ 3 ಗಂಟೆ ಸಮಯಕ್ಕೆ ಆಸ್ಪತ್ರೆಯ ಬೆಲ್ ಕೇಳಿ ಎದ್ದೆ. ಪರಿಚಿತ ಮುಖಗಳು. ಸಾಧಾರಣವಾಗಿ ಚಿಕಿತ್ಸೆಗೆ ಬರುವವರು. ಏನೆಂದು ಕೇಳಿದೆ.

ಸಿಸ್ಟರ್, ನನ್ನ ತಮ್ಮ ರಶೀದ್. ಗಲ್ಫ್ ನಿಂದ ಬಂದು ವಾರವಾಯಿತು. ಈಗ ತುಂಬಾ ಹೊಟ್ಟೆ ನೋವು. ಒಮ್ಮೆ ಡಾಕ್ಟರನ್ನು ಕರೆಯುವಿರಾ? ದೈನ್ಯತೆಯಿಂದ ಕೂಡಿದ ಮುಖ.

ಕುಳಿತುಕೊಳ್ಳಿ, ಡಾಕ್ಟರನ್ನು ಕರೆಯುತ್ತೇನೆ ಎಂದು ಹೇಳಿ  ಆಯಾಳನ್ನು ಡಾಕ್ಟರ್ ಮನೆಗೆ ಕಳಿಸಿದೆ. ನಿದ್ದೆಗಣ್ಣಿನಲ್ಲಿ ಬಂದ ಡಾಕ್ಟರ್ ರೋಗಿಯನ್ನು ಪರೀಕ್ಷಿಸಿ,

ಕಿಡ್ನಿಯ ಭಾಗದಲ್ಲಿ  ನೋವಿದೆ. ಕಿಡ್ನಿಯಲ್ಲಿ ಕಲ್ಲು ಇರುವ ಸಾಧ್ಯತೆ ಇದೆ. ನೋವಿಗೆ ಇಂಜೆಕ್ಷನ್ ಕೊಡುವ. 2 ಬಾಟ್ಲಿ ಗ್ಲುಕೋಸ್ ಹಾಕಬೇಕು ಎಂದು ಹೇಳಿದರು.

ರೋಗಿಯನ್ನು ಅಬ್ಸರ್ವೇಶನ್ ರೂಮ್ ನಲ್ಲಿ ಮಲಗಿಸಿ ನೋವು ನಿವಾರಕ ಇಂಜೆಕ್ಷನ್ ಕೊಡಲಾಯಿತು. ಬಳಿಕ ಗ್ಲುಕೋಸ್ ನೀಡಲಾಯಿತು. ಬೆಳಗಾಯಿತು.

2 ಬಾಟ್ಲಿ ಗ್ಲುಕೋಸ್ ಮುಗಿದರೂ ನೋವು ಕಡಿಮೆ ಆಗಿಲ್ಲ. 3 ನೇ ಬಾಟ್ಲಿ ಕನೆಕ್ಟ್ ಮಾಡಲಾಯಿತು. ಜೊತೆಗೆ ಸೀಯಾಳದ ನೀರು ಕುಡಿಯಲು ಹೇಳಲಾಯಿತು. ಕಿಡ್ನಿಯಲ್ಲಿ ಉಂಟಾಗುವ ಕಲ್ಲಿನ ತೊಂದರೆಗೆ ಹೆಚ್ಚಿನ ಪ್ರಮಾಣದಲ್ಲಿ ಪಾನೀಯ ಸೇವನೆ ಅಗತ್ಯ. 

ನನಗೋ ಮದುವೆಗೆ ಹೋಗುವ ಆತುರ. ಡಾಕ್ಟರ್ ಬಳಿ ಹೋಗಿ,

ಸರ್,  ನಾನು ಮದುವೆಗೆ ಹೋಗಿ ಬರಲೇ – ಕೇಳಿದೆ.

‘ಪೇಶೆಂಟ್ ಇರುವಾಗ ನೀನು ಹೋಗುವುದಾ?’

‘ಸರ್, ನನ್ನ ಅಣ್ಣನ ಮದುವೆ. ಪೂರ್ಣ ಸಮಯ ಇರಬೇಕಾದವಳು, ಬೇಗನೆ ಬರುತ್ತೇನೆ’- ಕಾಲ್ಕಿತ್ತೆ.

ಸಂಜೆ 3 ಗಂಟೆ ಸಮಯಕ್ಕೆ ಮತ್ತೆ ಆಸ್ಪತ್ರೆಗೆ ತಲುಪಿದೆ. 

ರಶೀದ್ ಗೆ ಕನೆಕ್ಟ್ ಮಾಡಿದ 3 ನೇ ಬಾಟ್ಲಿ ಗ್ಲುಕೋಸ್ ಕೂಡಾ ಮುಗಿದಿತ್ತು. ಜೊತೆಗೆ ಸೀಯಾಳದ ನೀರೂ ಕುಡಿಸಿದ್ದರು. ಹೊಟ್ಟೆ, ಬೆನ್ನಿನ ಭಾಗ ನೋವು ಕಡಿಮೆಯಾಗಿಲ್ಲ.

‘ಸಿಸ್ಟರ್, ನೋವು ಏನೇನೂ ಕಡಿಮೆ ಆಗಿಲ್ಲ. ಎಳನೀರು ಕುಡಿಸಿದೆವು. ಎಲ್ಲಾ ವಾಂತಿ ಆಯಿತು’. ತಕ್ಷಣ ಕೇಳಿದೆ –

‘ರಶೀದ್, ಮೂತ್ರ ವಿಸರ್ಜನೆ ಮಾಡಿದಿರಾ?’

‘ಇಲ್ಲ, ನಿನ್ನೆ ರಾತ್ರಿ 9 ಗಂಟೆ ಬಳಿಕ ಮೂತ್ರ ವಿಸರ್ಜಿಸಿಲ್ಲ. ‘

ಏನೋ ಅಪಾಯದ ಸುಳಿವು ನನ್ನ ಮನಸ್ಸಲ್ಲಿ.

‘ಡಾಕ್ಟರ್ ಏನು ಹೇಳಿದರು?’

‘ಏನೂ ಹೇಳಿಲ್ಲ’

ರಶೀದ್ ನ ಸಹೋದರನನ್ನು ಪಕ್ಕಕ್ಕೆ ಕರೆದು ಹೇಳಿದೆ-‘ ನೋಡಿ, ಇಲ್ಲಿ ಹೆಚ್ಚಿನ ಸೌಕರ್ಯವೇನೂ ಇಲ್ಲ. ರಶೀದ್ ಸಣ್ಣ ಎರಡು ಮಕ್ಕಳ ತಂದೆಯಷ್ಟೆ. ದುಡಿಯುವ ಜೀವ. ಕಲ್ಲು ಇರಬಹುದು ಎಂದು ಡಾಕ್ಟರ್ ಹೇಳಿದ್ದಲ್ಲದೆ ಹೆಚ್ಚೇನೂ ತಿಳಿಯದು. ನೀವು ಬೇರೆ ಕಡೆಗೆ ಕರೆದುಕೊಂಡು ಹೋಗಿ ಒಂದು ಸ್ಕ್ಯಾನ್ ಮಾಡಿ ನೋಡಿ. ಶರೀರಕ್ಕೆ ಇಷ್ಟು ನೀರಿನಂಶ ಹೋದರೂ ಮೂತ್ರ ವಿಸರ್ಜನೆ ಮಾಡದಿರುವುದು  ಒಳ್ಳೆಯ ಲಕ್ಷಣ ಅಲ್ಲ ‘

‘ಅದು ಹೇಗೆ ಸಿಸ್ಟರ್, ಡಾಕ್ಟರ್ ಹೇಳದೆ ಕರೆದುಕೊಂಡು ಹೋಗುವುದು?

‘ನೀವು ಡಾಕ್ಟರ್ ಜತೆ ಮಾತನಾಡಿ’ ಎಂದು ಡಾಕ್ಟರ್ ಬಳಿಗೆ ಕರೆದೊಯ್ದೆ.

‘ಡಾಕ್ಟ್ರೇ, ರಶೀದ್ ಗೆ ನೋವು ಏನೇನೂ ಕಡಿಮೆ ಇಲ್ಲ. ಕುಡಿದುದೆಲ್ಲಾ ವಾಂತಿಯಾಗುತ್ತಿದೆ’. ರಶೀದ್ ನ ಸಹೋದರ ಇಬ್ರಾಹಿಂ ಅವರ ಮಾತುಗಳಿಗೆ, ಡಾಕ್ಟರ್ -‘ಏ ಇಬ್ರಾಹೀ, ಅದು ಕಲ್ಲಿನದ್ದೇ ನೋವು, ಇನ್ನು ಸರಿಯಾಗಿ 4 ಬಾಟ್ಲಿ ಗ್ಲುಕೋಸ್ ಕೊಡಬೇಕು…’

ಡಾಕ್ಟರ್ ಮಾತಿಗೆ ಎದುರಾಡುವ ಜನ ಅವ ಅಲ್ಲ.

ಇನ್ನೊಂದು ಗಂಟೆ ಕಳೆಯಿತು.

ಇಬ್ರಾಹಿಂ ರವರು ಗಟ್ಟಿ ಮನಸ್ಸು ಮಾಡಿ ಡಾಕ್ಟರ್ ಬಳಿಗೆ ಹೋದರು.

‘ಡಾಕ್ಟ್ರೇ, ನಾನು ರಶೀದ್ ನನ್ನು ಕರೆದುಕೊಂಡು ಹೋಗುತ್ತೇನೆ.  ಮಂಗಳೂರಿನ ಆಸ್ಪತ್ರೆಗೆ….’

ಆದರೂ ಡಾಕ್ಟರ್ ಒಪ್ಪಲಿಲ್ಲ. ಮತ್ತೆ ಗ್ಲುಕೋಸ್ ಹಾಕುವಂತೆ ಒತ್ತಾಯಿಸುತ್ತಿದ್ದರು. ಅವರು ಒಪ್ಪಲಿಲ್ಲ. ನಾನು ಹೇಳಿದ ಮಾತುಗಳು ಅವರಿಗೆ ಅಪಾಯದ ಸೂಚನೆ ನೀಡಿತ್ತು.  ಅಂತೂ ರಶೀದ್ ನನ್ನು ಕರೆದುಕೊಂಡು ಹೋದರು. ಮತ್ತೆ ಏನಾಯಿತೆಂದು ತಿಳಿಯಲಿಲ್ಲ.

ಎರಡು ತಿಂಗಳ ಬಳಿಕ ಇಬ್ರಾಹಿಂ ಮತ್ತೆ ಆಸ್ಪತ್ರೆಗೆ ಬಂದರು ತನ್ನ ತಾಯಿಯ ಚಿಕಿತ್ಸೆಗೆ.

‘ರಶೀದ್ ಹೇಗಿದ್ದಾರೆ? ಮತ್ತೆ ಏನಾಯಿತು?’. ನನ್ನ ಪ್ರಶ್ನೆಗೆ ಇಬ್ರಾಹಿಂರವರು, ‘ಸಿಸ್ಟರ್, ಆ ಕಾಣದ ದೈವವೇ ಸಿಸ್ಟರ್ ರೂಪದಲ್ಲಿ ನಿಮ್ಮನ್ನು ಇಲ್ಲಿ ಕಳಿಸಿರಬೇಕು. ನಾವು ಯಾವತ್ತೂ ಇಲ್ಲಿಗೇ ಬರುವವರು. ಡಾಕ್ಟರ್ ಮಾತಿನಲ್ಲಿ ವಿಶ್ವಾಸ. ನೀವು ಹೇಳಿದ ಕಾರಣಕ್ಕೆ ನಾವು ರಶೀದ್ ನನ್ನು ಮಂಗಳೂರಿಗೆ ಕರೆದೊಯ್ದೆವು. ಅಲ್ಲಿ ಕೂಡಲೇ ಸ್ಕ್ಯಾನ್ ಮಾಡಿದರು. ಅವನ ಎರಡೂ ಕಿಡ್ನಿಗಳು ಹಾಳಾಗಿ ಹೋಗಿವೆ.. ಈಗ ವಾರದಲ್ಲಿ 2 ಸಲ ಡಯಾಲಿಸಿಸ್ ಮಾಡುತ್ತಿದ್ದಾರೆ. ಇನ್ನೆಷ್ಟು ದಿನ ಎಂದು ಗೊತ್ತಿಲ್ಲ. ನಿಮ್ಮಿಂದಾಗಿ ಇಂದು ಅವನ ಜೀವ  ಉಳಿದಿದೆ. ನೀವು ಹೇಳದಿರುತ್ತಿದ್ದರೆ, ಅಂದೇ ಅವನನ್ನು ಕಳೆದುಕೊಳ್ಳುತ್ತಿದ್ದೆವು’. ದುಃಖಿತರಾದರು.

‘ಛೆ, ನನ್ನದೇನಿಲ್ಲ, ನನಗೇನೂ ಹೆಚ್ಚು ತಿಳಿಯದು. ಪರಿಸ್ಥಿತಿ ನೆಟ್ಟಗಿಲ್ಲವೆಂದು ನಾನು ಸ್ಕ್ಯಾನ್ ಮಾಡಿ ನೋಡಲು ಹೇಳಿದ್ದಷ್ಟೆ….’

ನನಗೂ ಬೇಸರವಾಯಿತು. 

ಮುಂದಿನ ಒಂದೆರಡು ತಿಂಗಳುಗಳಲ್ಲಿ ರಶೀದ್ ಬಾರದ ಲೋಕಕ್ಕೆ ಹೋಗಿಬಿಟ್ಟ.

ಈ ಘಟನೆ ನನ್ನ ಮನಸ್ಸಿನಿಂದ ಇಂದೂ ಮಾಯವಾಗಿಲ್ಲ. ಕೆಲವರಿಗೆ ತಮ್ಮ ವೈದ್ಯರಲ್ಲಿ ಅಪರಿಮಿತ ವಿಶ್ವಾಸ. ಅವರು ಹೇಳಿದ್ದೇ ಸರಿ ಎಂಬ ನಂಬಿಕೆ (ಇದು ಇರಬೇಕು ಕೂಡಾ). ಆದರೆ ಎಲ್ಲ ವೈದ್ಯರೂ ಈ ರೀತಿಯ ನಂಬಿಕೆಗೆ ಅರ್ಹರೇ ಎಂಬುದು ಪ್ರಶ್ನೆ.

ಹಿಂದೆ, ಸ್ಕ್ಯಾನ್, ಇನ್ವೆಸ್ಟಿಗೇಶನ್ ಮಾಡದೆ ಚಿಕಿತ್ಸೆ ನೀಡುವ ಕಾಲವಿತ್ತು. ಪರಿಣಾಮ ಕೆಲವೊಮ್ಮೆ ಜೀವಕ್ಕೇ ಅಪಾಯವಾಗುತ್ತಿತ್ತು. ಇಂದು ಆಸ್ಪತ್ರೆಗೆ ಹೋದ ಕೂಡಲೇ ಎಕ್ಸ್-ರೇ, ರಕ್ತ ಪರಿಶೋಧನೆ, ಸ್ಕ್ಯಾನ್ ಎಂದು ಹೇಳುವ ಡಾಕ್ಟರ್ ಗಳೇ ಹೆಚ್ಚಿದ್ದಾರೆ. ಆದರೆ, ಅಂಥವರನ್ನು  ದೂರುವವರೂ  ಅನೇಕರಿದ್ದಾರೆ. ಆಸ್ಪತ್ರೆ ಎಂದರೆ ವ್ಯಾಪಾರ ಕೇಂದ್ರ ಅನ್ನುವವರೂ ಇದ್ದಾರೆ. ಕೆಲವು ಕಡೆಗಳಲ್ಲಿ ಅದು ನಿಜವಾಗಿರಲೂ ಬಹುದು. ಆದರೆ ಪರಿಶೋಧನೆ ರಹಿತ ಚಿಕಿತ್ಸೆ ಅಪಾಯಕಾರಿ ಎಂಬುದನ್ನು ಜನರು ತಿಳಿದು ಕೊಳ್ಳಬೇಕಾಗಿದೆ. ಬೇಕಾದರೆ ಚಿಕಿತ್ಸೆಯ ಸಂದರ್ಭದಲ್ಲಿ ಇತರ ತಜ್ಞರ ಅಭಿಪ್ರಾಯ ಪಡೆಯುವುದರಲ್ಲಿ ತಪ್ಪಿಲ್ಲ.

ಶೋಭಲತಾ ಸಿ.

ಆರೋಗ್ಯ ಕಾರ್ಯಕರ್ತೆ

ಇದನ್ನೂ ಓದಿ-ದಿನಾ ವಾಕ್‌ ಮಾಡಿದ್ರೆ ಸಾವು ಕೂಡಾ ದೂರ ಇರುತ್ತೆ, ದಿನಕ್ಕೆ ಎಷ್ಟು ದೂರ ನಡೆದ್ರೆ ಒಳ್ಳೇದು?

Related Articles

ಇತ್ತೀಚಿನ ಸುದ್ದಿಗಳು