ಬೆಂಗಳೂರು: “ಎಲ್ಲ ಗ್ಯಾರಂಟಿಗಳನ್ನು ನೀಡಿದರೂ, ಪ್ರಾಣದ ಗ್ಯಾರಂಟಿ ನೀಡುತ್ತಿಲ್ಲ. ಮನೆಗೆ ಮರಳುವ ಗ್ಯಾರಂಟಿ ಕೂಡ ಇಲ್ಲದಂತಾಗಿದೆ” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕರ್ನಾಟಕದ ಕಾನೂನು ಸುವ್ಯವಸ್ಥೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡುತ್ತಾ, “ಗೃಹ ಸಚಿವರೇ ಮಾಫಿಯಾ ಕೈಗೆ ಸಿಲುಕಿದ್ದಾರೆ. ಸಿದ್ದರಾಮಯ್ಯ ಅವರು ಪಿಎಫ್‌ಐ ವಿರುದ್ಧದ ಪ್ರಕರಣಗಳನ್ನು ಹಿಂಪಡೆದರು, ಆ ಬಳಿಕ ಅವರು ನಮ್ಮ ಹುಡುಗರನ್ನು ಕೊಂದರು. ಈಗ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಪ್ರಕರಣವನ್ನು ಹಿಂಪಡೆಯಲು ಮುಂದಾಗಿದ್ದರು, ಆದರೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು ಸ್ವಾಗತಾರ್ಹ” ಎಂದು ಶೋಭಾ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ‘ಮುಸ್ಲಿಮರಿಗೆ ರಕ್ಷಣೆ ಇಲ್ಲ’ ಎಂದು ಹೇಳಿರುವುದನ್ನು ಖಂಡಿಸಿ, “ಏನು ಮಾಡಲು ಹೊರಟಿದ್ದೀರಿ? ಮೊದಲು ಬಿಹಾರವನ್ನು ಗೂಂಡಾ ರಾಜ್ಯ ಎಂದು ಕರೆಯುತ್ತಿದ್ದರು, ಈಗ ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ” ಎಂದು ಅವರು ಕಿಡಿಕಾರಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ “ದಕ್ಷಿಣ ಕನ್ನಡದವರು ಕಾಂಗ್ರೆಸ್‌ಗೆ ಮತ ಹಾಕದೆ ಬೇರೆ ಪಕ್ಷಕ್ಕೆ ಮತ ಹಾಕುತ್ತಾರೆ” ಎಂಬ ಹೇಳಿಕೆಗೆ ತಿರುಗೇಟು ನೀಡಿದ ಶೋಭಾ, “ದಕ್ಷಿಣ ಕನ್ನಡದವರು ಕರ್ನಾಟಕದಲ್ಲಿ ಇಲ್ಲವೇ? ಇದರರ್ಥ ಏನು? ಮತ ಹಾಕಿದವರಿಗೆ ಮಾತ್ರ ಗ್ಯಾರಂಟಿಗಳು ಎಂದು ಹೇಳುತ್ತೀರಾ? ಕಾಂಗ್ರೆಸ್‌ಗೆ ಮತ ಹಾಕಿದವರಿಗೆ ಮಾತ್ರ ಗ್ಯಾರಂಟಿ ಎಂದು ಆಗಲೇ ಹೇಳಬೇಕಿತ್ತು. ‘ನಿನಗೂ ಫ್ರೀ, ನನಗೂ ಫ್ರೀ’ ಎಂದು ಹೇಳಿದ್ದರಲ್ಲವೇ? ಜಿಲ್ಲೆಗಳ ನಡುವೆ ಪ್ರತ್ಯೇಕತೆಯ ಕೂಗು ಇರುವಾಗ ಇಂತಹ ಜವಾಬ್ದಾರಿಯಿಲ್ಲದ ಮಾತುಗಳನ್ನು ಆಡುವುದು ಸರಿಯೇ?” ಎಂದು ಪ್ರಶ್ನಿಸಿದರು.