ದೆಹಲಿ: ಭಾರತೀಯ ವಾಯುಪಡೆಗೆ ಯುದ್ಧವಿಮಾನಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಪೂರೈಕೆಗೆ ಸಂಬಂಧಿಸಿದ ಒಪ್ಪಂದಗಳು ನಡೆಯುತ್ತಿವೆಯಾದರೂ, ಸಕಾಲಕ್ಕೆ ಪೂರೈಕೆಯಾಗದಿರುವ ಬಗ್ಗೆ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ವಾಯುಪಡೆ ಇದೇ ರೀತಿಯಾಗಿ ತಮ್ಮ ಆಕ್ಷೇಪವನ್ನು ಹೊರಹಾಕಿತ್ತು.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು, “ರಕ್ಷಣಾ ಉತ್ಪಾದನಾ ಯೋಜನೆಗಳಲ್ಲಿ ವಿಳಂಬವಾಗುತ್ತಿದೆ. ಭರವಸೆ ನೀಡಿದ ಸಮಯಕ್ಕೆ ಪೂರೈಕೆ ನಡೆಯುತ್ತಿಲ್ಲ. ಸಾಧ್ಯವಿಲ್ಲವೆಂದು ತಿಳಿದಿದ್ದರೂ ಒಪ್ಪಂದಗಳಿಗೆ ಸಹಿ ಹಾಕುವ ಬದಲು, ವಾಸ್ತವಿಕತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಬೇಕು,” ಎಂದು ಒತ್ತಿ ಹೇಳಿದರು.
ಮುಂದಿನ ಒಂದು ದಶಕದಲ್ಲಿ ರಕ್ಷಣಾ ಉದ್ಯಮ ಮತ್ತು ಡಿಆರ್‌ಡಿಒದಿಂದ ಹೆಚ್ಚಿನ ನಿರೀಕ್ಷೆಗಳಿವೆ. ಸೇನೆಯ ತುರ್ತು ಅಗತ್ಯಗಳನ್ನು ಪೂರೈಸಲು ‘ಮೇಕ್ ಇನ್ ಇಂಡಿಯಾ’ ಯೋಜನೆಯೊಂದಿಗೆ ರಕ್ಷಣಾ ಉದ್ಯಮವು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ತೇಜಸ್ ಎಂಕೆ 1ಎ ಯುದ್ಧವಿಮಾನಕ್ಕಾಗಿ ವಾಯುಪಡೆಯು 2021ರಲ್ಲಿ ಎಚ್‌ಎಎಲ್‌ಗೆ ಗುತ್ತಿಗೆ ನೀಡಿತ್ತು. ಅಲ್ಲದೆ, 70 ಎಚ್‌ಐಟಿ-40 ತರಬೇತಿ ವಿಮಾನಗಳಿಗೂ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈ ಯಾವುದೇ ಉತ್ಪನ್ನಗಳು ನಿಗದಿತ ಸಮಯಕ್ಕೆ ಸೇನೆಗೆ ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಎಚ್‌ಎಎಲ್ ವಿರುದ್ಧ ಅವರು ಪರೋಕ್ಷವಾಗಿ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.