ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭಮೇಳವನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ಅಲ್ಲಿ ನಡೆದ ಕಾಲ್ತುಳಿತ ಘಟನೆಯನ್ನು ಉಲ್ಲೇಖಿಸಿದ ಅವರು, ಮಹಾಕುಂಭವನ್ನು ‘ಮೃತ್ಯು ಕುಂಭ’ ಎಂದು ಬಣ್ಣಿಸಿದರು.
ಕುಂಭಮೇಳಕ್ಕೆ ಬರುವ ವಿಐಪಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು. ಬಡವರನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಆರೋಪಿಸಿದರು.
ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ‘ದೇಶವನ್ನು ವಿಭಜಿಸಲು ಧರ್ಮವನ್ನು ಮಾರಾಟ ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಅತಿಯಾದ ಪ್ರಚಾರ ನೀಡಿದ್ದೇ ಸಾವುನೋವುಗಳಿಗೆ ಕಾರಣ ಎಂದು ಅವರು ಹೇಳಿದ್ದಾರೆ.
ಬಜೆಟ್ ಅಧಿವೇಶನದ ಭಾಗವಾಗಿ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ದೀದಿ, “ಇದು ‘ಮೃತ್ಯು ಕುಂಭ’ ಎಂದು ಹೇಳಿದರು. ನಾನು ಮಹಾಕುಂಭವನ್ನು ಗೌರವಿಸುತ್ತೇನೆ. ನಾನು ಪವಿತ್ರ ಗಂಗೆಯನ್ನು ಸಹ ಗೌರವಿಸುತ್ತೇನೆ. ಆದರೆ ಅಲ್ಲಿ ಸರಿಯಾದ ಯೋಜನೆ ಇಲ್ಲ. ಶ್ರೀಮಂತರು ಮತ್ತು ವಿಐಪಿಗಳಿಗೆ ವಿಶೇಷ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಲಕ್ಷಗಟ್ಟಲೆ ರೂಪಾಯಿ ಖರ್ಚು ಮಾಡಿ ವಿಶೇಷ ಟೆಂಟ್‌ಗಳನ್ನು ಬುಕ್ ಮಾಡುವ ವ್ಯವಸ್ಥೆ ಇದೆ.
ಆದರೆ ಬಡವರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಅಂತಹ ಕಾರ್ಯಕ್ರಮಗಳಲ್ಲಿ (ಮೇಳಗಳು) ಕಾಲ್ತುಳಿತ ಘಟನೆಗಳು ಸಾಮಾನ್ಯ. ಆದರೆ ಅಂತಹ ಘಟನೆಗಳನ್ನು ತಡೆಗಟ್ಟಲು ವ್ಯವಸ್ಥೆಗಳನ್ನು ಮಾಡುವುದು ಮುಖ್ಯ. ನೀವು ಇಲ್ಲಿ ಏನು ವ್ಯವಸ್ಥೆ ಮಾಡಿದ್ದೀರಿ?’ ಎಂದು ದೀದಿ ಯುಪಿ ಸರ್ಕಾರವನ್ನು ಪ್ರಶ್ನಿಸಿದರು.