Friday, June 14, 2024

ಸತ್ಯ | ನ್ಯಾಯ |ಧರ್ಮ

‘ನಾಟ್ ಔಟ್’ ಇದು ಹುಲಿ – ಕುರಿ ಆಟ

ಬೆಂಗಳೂರು: ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಮ್ಶುದ್ದೀನ್ ಎ ನಿರ್ಮಿಸಿರುವ “ನಾಟ್ ಔಟ್” ಚಿತ್ರದ ಮೋಷನ್ ಪೋಸ್ಟರ್ ಇತ್ತೀಚಿಗೆ ಬಿಡುಗಡೆಯಾಯಿತು. ಎಂ.ಎಲ್.ಸಿ ಪುಟ್ಟಣ್ಣ, ನಿರ್ದೇಶಕ ಎ.ಪಿ.ಅರ್ಜುನ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಚಿತ್ರದ ಪೋಸ್ಟರ್‌ ಬಿಡುಗಡೆ ನಂತರ ಸಿನಿಮಾ ಕುರಿತು ಮಾತನಾಡಿದ ನಿರ್ಮಾಪಕ ಶಮ್ಶುದ್ದೀನ್ ರವರು, ನಮ್ಮ ರಾಷ್ಟ್ರಕೂಟ ಪಿಕ್ಚರ್ಸ್ ಸಂಸ್ಥೆಯ ಮೊದಲ ಚಿತ್ರವಾಗಿ ʼಕಿಸ್ʼ ಚಿತ್ರವನ್ನು ನಿರ್ಮಿಸಿದ್ದೆವು. ಈಗ ʼನಾಟ್ ಔಟ್ʼ ನಿರ್ಮಾಣವಾಗಿದೆ. ಇನ್ನೂ ಎರಡು ಚಿತ್ರಗಳು ಸಿದ್ದವಾಗಿದೆ. ಆ ಕುರಿತು ಸದ್ಯದಲ್ಲೇ ಮಾಹಿತಿ ನೀಡುತ್ತೇವೆ. ವರ್ಷಕ್ಕೆ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆ ನಮ್ಮ ಸಂಸ್ಥೆಗಿದೆ ಎಂದರು .

ನಾನು ʼಕಿಸ್ʼ ಚಿತ್ರ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಅದರ ಪ್ರಚಾರ ನೋಡಿ, ಸಿನಿಮಾವನ್ನು ಇಷ್ಟು ಪ್ರೀತಿಸುವ ನಿರ್ಮಾಪಕರ ಬಳಿ ನಾನು ಕೆಲಸ ಮಾಡಬೇಕು ಅನಿಸಿತ್ತು. ಈಗ ಈಡೇರಿದೆ. ʼನಾಟ್ ಔಟ್ʼ ಎಂದರೆ ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡು ತೀರ್ಪೆ ʼನಾಟ್ ಔಟ್ʼ ಪ್ರತಿ ಆಟದಲ್ಲಿ ಒಬ್ಬ ಅಂಪೈರ್ ಇರ್ತಾನೆ. ಜೀವನದ ಆಟಕ್ಕೂ ಒಬ್ಬ ಅಂಪೈರ್ ಇರ್ತಾನೆ. ಈ ಚಿತ್ರದಲ್ಲಿ ಹುಲಿ – ಕುರಿ ಎಂಬ ಹಳ್ಳಿ ಸೊಗಡಿನ ಆಟವನ್ನ ಹೇಗೆ ಹಾಡ್ತರೋ, ಅದೇ ರೀತಿ ಚಿತ್ರದ ಕಥೆ ಸಾಗುತ್ತೆ. ಆಟದಲ್ಲಿ ಬೆಟ್ಟದ ತುದಿಯಲ್ಲಿರುವ ಹುಲಿಗಳು ಮತ್ತು ಬೆಟ್ಟದ ತಳದಲ್ಲಿರುವ ಕುರಿಗಳು ಬೆಟ್ಟವನ್ನು ಹತ್ತುವಾಗ ಹುಲಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನಗಳು ಆಟದಲ್ಲಿ ಇದ್ದಂತೆ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಅದನ್ನ ನೋಡಬಹುದು. ಸಿನಿಮಾದಲ್ಲಿ ಎಲ್ಲಾ ಪಾತ್ರಗಳು ಕಥೆಗೆ ಪೂರಕವಾಗಿರುತ್ತದೆ ಎಲ್ಲಾ ಪಾತ್ರಗಳು ಬಹು ಮುಖ್ಯವಾಗಿದೆ ಎಂದರು.


ನಿರ್ದೇಶಕ ಅಂಬರೀಶ್‌ ಮಾತನಾಡಿ, ʼಒಂದು ರೀತಿಯ ಕಥಾಹಂದರ ಹೊಂದಿರುವ ʼನಾಟ್ ಔಟ್ʼ ನ ನಾಯಕನಾಗಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಜಯ್ ಪೃಥ್ವಿ ಅಭಿನಯಿಸಿದ್ದಾರೆ. ರಚನಾ ಇಂದರ್ ನಾಯಕಿ. ರವಿಶಂಕರ್, ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಸಲ್ಮಾನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಬೆಂಗಳೂರು – ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಹಾಲೇಶ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. “ನಾಟ್ ಔಟ್” ತೆರೆಗೆ ಬರಲು ಸಿದ್ದವಾಗಿದೆ. ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ನಾನು ಏಕಾಏಕಿ ಚಿತ್ರರಂಗಕ್ಕೆ ಬಂದಿಲ್ಲ. ಐದನೇ ತರಗತಿಯಿಂದಲೇ “ಬಿಂಬ” ಮೂಲಕ ಸಾಕಷ್ಟು ಕಲಿತೆ. ನಂತರ ಪ್ರಸಿದ್ಧ ತರಭೇತಿ ಶಾಲೆಯಲ್ಲಿ ನಟನೆ ಕೂಡ ಕಲಿತೆ. “ಮೆಹಬೂಬ” ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನೂ ಮೂರು, ನಾಲ್ಕು ಚಿತ್ರಗಳಲ್ಲೂ ಅಭಿನಯಿಸಿದ್ದೇನೆ. ಈಗ “ನಾಕ್ ಔಟ್” ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರ ಹಾಗೂ ನನ್ನ ಪಾತ್ರ ಚೆನ್ನಾಗಿದೆ. ಪ್ರೋತ್ಸಾಹ ನೀಡಿ ಎಂದು ನಾಯಕ ಅಜಯ್ ಪೃಥ್ವಿ ಹೇಳಿದರು.

ತಾವು ನರ್ಸ್ ಪಾತ್ರದಲ್ಲಿ ನಟಿಸಿರುವುದಾಗಿ ರಚನಾ ಇಂದರ್ ಹೇಳಿದರು. ಕಾಕ್ರೋಜ್ ಸುಧಿ ತಮ್ಮ ಪಾತ್ರದ ವಿವರಣೆ ನೀಡಿದರು. ಕಾರ್ಯಕಾರಿ ನಿರ್ಮಾಪಕ ಕುಮಾರ್ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು