Monday, July 28, 2025

ಸತ್ಯ | ನ್ಯಾಯ |ಧರ್ಮ

ನಿಯಮ ಉಲ್ಲಂಘನೆ: ಬಾರ್, ಪಬ್, ರೆಸ್ಟೋರೆಂಟ್ ಗಳಿಗೆ ನೋಟಿಸ್!

ಬೆಂಗಳೂರು : ಬೆಂಗಳೂರಿನಲ್ಲಿ ಬಿಬಿಎಂಪಿ ನೀಡಿರುವ ಸುರಕ್ಷತಾ ನಿಯಮಗಳನ್ನು ಪಾಲಿಸದ 12 ಪಬ್, ಬಾರ್ ಮತ್ತು ರೆಸ್ಟೋರೆಂಟ್‍ಗಳಿಗೆ ಬಿಬಿಎಂಪಿ ಬೀಗ ಹಾಕಿದೆ. ಅತ್ತಿಬೆಲೆ ಪಟಾಕಿ ದುರಂತ ಹಾಗೂ ಅದರ ಹಿಂದೆಯೇ ಕೋರಮಂಗಲದ ಪಬ್ ಗೆ ಅಚಾನಕ್ಕಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಿಬಿಎಂಪಿ ಬಂದಿದೆ.

ಒಂದು ತಿಂಗಳ ಅಂತರದಲ್ಲೇ ಬೆಂಗಳೂರಿನಲ್ಲಿ ಸರಣಿ ಅಗ್ನಿ ಅವಘಡ ಘಟನೆಗಳ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ನಿಯಮ ಮೀರಿ ನಡೆದುಕೊಂಡ ಬಾರ್, ಪಬ್ ಹಾಗೂ ರೆಸ್ಟೋರೆಂಟ್ ಗಳ ಮೇಲೆ ಕಠಿಣ ನಿರ್ಧಾರ ಕೈಗೊಂಡಿದೆ.

ಪಬ್, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಖುದ್ದು ಪರಿಶೀಲಿಸಿದ ಬಿಬಿಎಂಪಿ ಅಧಿಕಾರಿಗಳು ನಿಯಮ ಪಾಲಿಸದವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿರುವ ವಲಯವಾರು ಪಬ್, ಬಾರ್ & ರೆಸ್ಟೋರೆಂಟ್‍ ಸೇರಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ‌ ನೇತೃತ್ವದಲ್ಲಿ ಶುಕ್ರವಾರ ತಪಾಸಣೆ ನಡೆಸಲಾಗಿದೆ.

ಪೂರ್ವ ವಲಯದಲ್ಲಿ 7, ಮಹದೇವಪುರದಲ್ಲಿ 3 ಮತ್ತು ಬೊಮ್ಮನಹಳ್ಳಿ ವಲಯದಲ್ಲಿ 2 ಪಬ್ ಮತ್ತು ಬಾರ್‍ಗಳಿಗೆ ಬೀಗ ಹಾಕಲಾಗಿದೆ. ಈ ಬಗ್ಗೆ ಯಾವುದೇ ರಾಜಕೀಯ ಒತ್ತಡ ಬಂದರೂ ನಾವು ಪರಿಗಣಿಸುವುದಿಲ್ಲ ಎಂದೂ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ನ್ಯೂನ್ಯತೆಗಳು ಕಂಡುಬಂದಿರುವಂತಹ ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಜೊತೆಗೆ ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಲಾಗಿರುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದ್ದು, ಈ ಪೈಕಿ‌ 232 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ 86 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ, 12 ಉದ್ದಿಮೆಗಳನ್ನು ಮುಚ್ಚಲಾಗಿರುತ್ತದೆ ಎಂದು ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page